ಸುಗಮ ಸಂಚಾರಕ್ಕಾಗಿ ಎಸ್ಪಿ ನೇತೃತ್ವದಲ್ಲಿ ನಗರ ಪ್ರದಕ್ಷಿಣೆ

| Published : Jul 03 2024, 12:24 AM IST

ಸುಗಮ ಸಂಚಾರಕ್ಕಾಗಿ ಎಸ್ಪಿ ನೇತೃತ್ವದಲ್ಲಿ ನಗರ ಪ್ರದಕ್ಷಿಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸಣ್ಣ ಪುಟ್ಟ ಸಮಸ್ಯೆಗಳಿಂದ ಟ್ರಾಫಿಕ್ ಜಾಮ್ ಆಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲಾಯಿತು

ಗದಗ: ಗದಗ ನಗರದ ಮುಖ್ಯ ಮಾರುಕಟ್ಟೆ ರಸ್ತೆ ಸೇರಿದಂತೆ ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಬೇಕಾದ ಅಗತ್ಯ ಮಾರ್ಪಾಡುಗಳ ಕುರಿತು ಮಂಗಳವಾರ ಎಸ್ಪಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ನಗರ ಪ್ರದಕ್ಷಿಣೆ ನಡೆಸಿ ವಾಸ್ತವ ಅಂಶಗಳ ಬಗ್ಗೆ ಅಧ್ಯಯನ ನಡೆಸಿದರು.

ದೊಡ್ಡ ಗಡಿಯಾರ, ಬಿಎಸ್ಎನ್ಎಲ್ ಆಫೀಸ್ ರಸ್ತೆ, ಗ್ರೇನ್ ಗ್ರೋಸರಿ ಮಾರುಕಟ್ಟೆ ಸೇರಿದಂತೆ ಇಕ್ಕಾಟದ ರಸ್ತೆ ಹೊಂದಿರುವ ಕಡೆಗಳಲ್ಲಿ ಬೃಹತ್ ಗುಂಡಿಗಳು ಬಿದ್ದಿರುವುದರಿಂದ ರಸ್ತೆಯ ಅರ್ಧ ಭಾಗವೇ ಬಳಕೆಗೆ ಬಾರದಂತಾಗಿರುವುದು,ಇದರಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆ ಹೀಗೆ ಸಣ್ಣ ಪುಟ್ಟ ಸಮಸ್ಯೆಗಳಿಂದ ಟ್ರಾಫಿಕ್ ಜಾಮ್ ಆಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲಾಯಿತು.

ಎಸ್ಪಿ ಬಿ.ಎಸ್.ನೇಮಗೌಡ ಅವರೊಂದಿಗೆ ನಗರಸಭೆಯ ಪೌರಾಯುಕ್ತ ಪ್ರಶಾಂತ ವರಗಪ್ಪನವರ, ಅಭಿಯಂತರ ಎಚ್.ಬಿ. ಬಂಡಿವಡ್ಡರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು,ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಜರಿದ್ದು ಚರ್ಚಿಸಿದರು.

ತಕ್ಷಣಕ್ಕೆ ಆಗಬೇಕಾಗಿರುವ ಕ್ರಮಗಳು ಇದರಿಂದ ಸಾರ್ವಜನಿಕರಿಗೆ ಆಗುವ ಅನುಕೂಲಗಳು, ಸದ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ನಗರಸಭೆಯ ಅಧಿಕಾರಿಗಳು ಯಾವ ರೀತಿಯಲ್ಲಿ ಹೊಣೆಗಾರರು ಎನ್ನುವುದನ್ನು ನಗರಸಭೆಯ ಸಿಬ್ಬಂದಿಗೆ ಮನವರಿಕೆ ಮಾಡಿಕೊಟ್ಟ ಎಸ್ಪಿ,ಇದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ತಿಳಿಸಿದ ನಂತರ ತಕ್ಷಣದಲ್ಲಿಯೇ ಸಾಧ್ಯವಿರುವ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದಕ್ಕೆ ನಗರಸಭೆಯ ಅಧಿಕಾರಿಗಳು ಒಪ್ಪಿಕೊಂಡರು.