ಸಾರಾಂಶ
ಬೆಂಗಳೂರು: ನಗರದಲ್ಲಿ ಮಳೆಯಿಂದಾಗಿ ಸೃಷ್ಟಿಯಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಜೂನ್ 4ರವರೆಗೆ ಗಡುವು ನೀಡಲಾಗಿದ್ದು, ಗುಂಡಿ ಮುಚ್ಚುವ ಸಂಬಂಧ ಮೇಲ್ವಿಚಾರಣೆಗಾಗಿ ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಲಯಕ್ಕೊಂದರಂತೆ ಎಂಟು ಟಾಸ್ಕ್‌ಫೋರ್ಸ್ ರಚಿಸಲಾಗಿದೆ.
ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮಳೆಯಿಂದಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 5,500ಕ್ಕೂ ಹೆಚ್ಚಿನ ಗುಂಡಿಗಳು ಸೃಷ್ಟಿಯಾಗಿದ್ದು ಈವರೆಗೆ 1,200 ಗುಂಡಿಗಳನ್ನು ಮುಚ್ಚಲಾಗಿದೆ. ಉಳಿದ 4,300ಕ್ಕೂ ಹೆಚ್ಚಿನ ಗುಂಡಿಗಳು ಮುಚ್ಚಬೇಕಿದೆ. ಅವುಗಳಲ್ಲಿ ದಾಸರಹಳ್ಳಿ ಮತ್ತು ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಹೆಚ್ಚಿನ ಗುಂಡಿಗಳಿದ್ದು, ಅಲ್ಲಿ ಗುಂಡಿ ಮುಚ್ಚಲು ಜೂನ್ 4ರವರೆಗೆ ಗಡುವು ನೀಡಲಾಗಿದೆ. ಉಳಿದ ಆರು ವಲಯಗಳಲ್ಲಿನ ಗುಂಡಿಗಳನ್ನು ಮೇ 31ರೊಳಗೆ ಮುಚ್ಚುವಂತೆ ನಿರ್ದೇಶಿಸಲಾಗಿದೆ ಎಂದರು.
ವಲಯಕ್ಕೊಂದು ಟಾಸ್ಕ್‌ಫೋರ್ಸ್:
ಬಿಬಿಎಂಪಿ ವ್ಯಾಪ್ತಿಯಲ್ಲಿ 12,878 ಕಿಮೀ ಉದ್ದದ ರಸ್ತೆ ಜಾಲವಿದ್ದು, ಅದರಲ್ಲಿ 1,344.84 ಕಿ.ಮೀ. ಮುಖ್ಯ ಮತ್ತು ಉಪಮುಖ್ಯ ರಸ್ತೆಗಳಿವೆ. ಈ ರಸ್ತೆಗಳನ್ನು ರಸ್ತೆ ಮೂಲಸೌಕರ್ಯ ವಿಭಾಗ ನಿರ್ವಹಣೆ ಮಾಡುತ್ತಿದ್ದರೆ, 11,533.16 ಕಿ.ಮೀ. ರಸ್ತೆಗಳನ್ನು ವಲಯ ಮಟ್ಟದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ವಲಯ ಮಟ್ಟದ ನಿರ್ವಹಣೆಯಲ್ಲಿರುವ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ವಲಯವಾರು ಟಾಸ್ಕ್‌ಫೋರ್ಸ್ ರಚನೆ ಮಾಡಲಾಗಿದೆ. ಆ ಟಾಸ್ಕ್‌ಫೋರ್ಸ್‌ಗೆ ಆಯಾ ವಲಯದ ವಲಯ ಆಯುಕ್ತರು ಅಧ್ಯಕ್ಷರಾಗಿರುತ್ತಾರೆ. ಈ ಕಾರ್ಯಪಡೆ ರಸ್ತೆಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲಿದ್ದು, ಗುಂಡಿ ಕಂಡ ಕೂಡಲೆ ಮುಚ್ಚುವ ಕಾರ್ಯ ಮಾಡಲಿದೆ ಎಂದು ತುಷಾರ್ ಗಿರಿನಾಥ್ ಹೇಳಿದರು.
ಜಾಗ ಬಳಸಿಕೊಳ್ಳಲು ಬಿಬಿಎಂಪಿಗೆ ಸರ್ಕಾರ ಒಪ್ಪಿಗೆ
ಬೆಂಗಳೂರು : ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗೆ ಸಂಪರ್ಕಿಸುವ ರಸ್ತೆ ಅಗಲೀಕರಣಕ್ಕೆ ಅರಮನೆ ಮೈದಾನದ ಜಾಗ ಬಳಸಿಕೊಳ್ಳಲು ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ಅನುಮತಿ ನೀಡಿದೆ.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೊನೆಗೂ ನಿರ್ಧಾರ ತೆಗೆದುಕೊಂಡಿದೆ. ಕಳೆದ ಮಾರ್ಚ್ 14ರಂದು ನಡೆದ ಸಚಿವ ಸಂಪುಟ ಸಭೆ ಅನುಮತಿಸಿದಂತೆ ಅರಮನೆ ಮೈದಾನಕ್ಕೆ ಸೇರಿದ 15.17 ಎಕರೆ ಭೂಮಿಯನ್ನು ಬಳಸಿಕೊಂಡು ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿಗೆ ಅನುಮತಿಸಲಾಗಿದೆ. ಈ ಜಾಗದಲ್ಲಿ ಪ್ರಮುಖವಾಗಿ ವಸಂತ ನಗರದ ಕೆಳಸೇತುವೆಗೆ ಹೊಂದಿಕೊಂಡಂತಿರುವ ಅರಮನೆ ರಸ್ತೆಯನ್ನು ಸಂಪರ್ಕಿಸುವ ಅಪ್ರೋಚ್ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲು ಸೂಚಿಸಲಾಗಿದೆ.