ಸಾರಾಂಶ
ಹೊಸಕೋಟೆ: ನಗರವನ್ನು ಸ್ವಚ್ಛತೆ ಕಾಪಾಡಲು ಪ್ರತಿದಿನ ಅವಿರತ ಶ್ರಮಿಸುವ ಮೂಲಕ ನಾಗರಿಕರ ಆರೋಗ್ಯವನ್ನೂ ರಕ್ಷಿಸುವ ಪೌರಕಾರ್ಮಿಕರ ಕರ್ತವ್ಯಕ್ಕೆ ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಜನನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ನವರಾತ್ರಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ನಿತ್ಯ ಪರಿಸರದಲ್ಲಿ ಸ್ವಚ್ಛತೆಯನ್ನ ಕಾಪಾಡಿ ನಾವೆಲ್ಲ ಆರೋಗ್ಯವಂತರಾಗಿ ಬದುಕಲು ಸಹಕರಿಸುವಲ್ಲಿ ಪೌರಕಾರ್ಮಿಕರ ಸೇವೆ ಮಹತ್ವದ ಪಾತ್ರ ವಹಿಸಿದೆ. ಅವರನ್ನ ನಿತ್ಯ ಸ್ಮರಿಸುವ ಕೆಲಸ ನಗರದ ಪ್ರತಿಯೊಬ್ಬ ನಾಗರಿಕರಿಂದ ಆಗಬೇಕು. ಕೇವಲ ಪೌರಕಾರ್ಮಿಕರ ದಿನದಂದು ಮಾತ್ರವಲ್ಲ, ಸೂಕ್ತ ವೇದಿಕೆಗಳಲ್ಲಿ ಅವರನ್ನ ಗುರುತಿಸಿ ಅವರ ಸೇವೆ ಗೌರವಿಸಿದರೆ ನಗರದ ನಾಗರಿಕರು ಮತ್ತಷ್ಟು ನೆಮ್ಮದಿಯಿಂದ ಬದುಕಲು ಸಾಧ್ಯ. ಜನನಿ ಚಾರಿಟಬಲ್ ಟ್ರಸ್ಟ್ ನವರಾತ್ರಿ ವೇದಿಕೆಯಲ್ಲಿ ಪೌರಕಾರ್ಮಿಕರನ್ನು ಗೌರವಿಸುತ್ತಿರುವ ಕಾರ್ಯ ಮತ್ತಷ್ಟು ಜನರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.ಜನನಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಜಯರಾಜ್ ಮಾತನಾಡಿ, 12 ವರ್ಷಗಳ ಹಿಂದೆ ನಮ್ಮ ತಾಯಿ ತೀರಿಕೊಂಡ ಸಂದರ್ಭದಲ್ಲಿ ಚಾಮುಂಡೇಶ್ವರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆ ದೇವಿಯಲ್ಲಿ ನಮ್ಮ ತಾಯಿಯನ್ನ ಕಾಣುವ ಹಾಗೂ ಆಶೀರ್ವಾದ ಪಡೆಯುವ ಉದ್ದೇಶದಿಂದ ನವರಾತ್ರಿಯನ್ನು ಪ್ರಾರಂಭ ಮಾಡಲಾಯಿತು. 12 ವರ್ಷಗಳಿಂದ ಜನನಿ ಚಾರಿಟಬಲ್ ಟ್ರಸ್ಟ್ ಎಲ್ಲಾ ಸದಸ್ಯರು ಸಾರ್ವಜನಿಕವಾಗಿ ಚಂದ ವಸೂಲಿ ಮಾಡದೆ ನಮ್ಮ ವೈಯಕ್ತಿಕವಾಗಿ ಹಣ ವಿನಿಯೋಗ ಮಾಡಿ ನವರಾತ್ರಿ ಆಚರಣೆ ಮಾಡ್ತೀವಿ. ಆದರೆ ಈ ಬಾರಿ ತಾಯಿ ಸಮಾನರಾದಂತಹ ಮಹಿಳಾ ಪೌರಕಾರ್ಮಿಕರನ್ನು ಗುರುತಿಸಿ ನವರಾತ್ರಿ ವೇದಿಕೆಯಲ್ಲಿ ಅವರಿಗೆ ಉಡುಗೊರೆ ವಿತರಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಬೈರೇಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಡಾ.ಎಚ್.ಎಂ.ಸುಬ್ಬರಾಜು, ಯುವ ಮುಖಂಡರಾದ ಗೋಪಾಲ್, ಸಂದೀಪ್ ಇತರರು ಹಾಜರಿದ್ದರು.ಬಾಕ್ಸ್: ಶುದ್ಧ ಮನಸ್ಸಿನ ರಾಜಕಾರಣಿ ಶರತ್ ಬಚ್ಚೇಗೌಡ
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶರತ್ ಬಚ್ಚೇಗೌಡರು ಬಿಜೆಪಿ ಬಿಟ್ಟಾಗ ನಾನು ಬಿಜೆಪಿಯಲ್ಲೇ ಉಳಿದುಕೊಂಡೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಬಿಜೆಪಿ ಪರ ಕೆಲಸ ಮಾಡಿದೆ. ಶಾಸಕ ಶರತ್ ಬಚ್ಚೇಗೌಡರ ವಿರುದ್ಧ ಕೆಲಸ ಮಾಡಿದರೂ ಶರತ್ ಬಚ್ಚೇಗೌಡರು ಚುನಾವಣೆಯಲ್ಲಿ ಗೆದ್ದ ಬಳಿಕ ನಮ್ಮನ್ನು ಎಂದೂ ದ್ವೇಷ ಮಾಡಿದವರಲ್ಲ. ಬದಲಾಗಿ ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ನಾನು ಅವರ ಪರ ಕೆಲಸ ಮಾಡಿ ಅವರ ಕೈ ಮತ್ತಷ್ಟು ಬಲಪಡಿಸುತ್ತೇನೆ ಎಂದು ಜನನಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಜಯರಾಜ್ ತಿಳಿಸಿದರು.ಫೋಟೋ : 2 ಹೆಚ್‌ಎಸ್‌ಕೆ 1
ಹೊಸಕೋಟೆಯ ಜಯ ಚಾಮರಾಜೇಂದ್ರ ವೃತ್ತದಲ್ಲಿ ಜನನಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ನವರಾತ್ರಿ ಸಮಾರೋಪ ಸಮಾರಂಭದಲ್ಲಿ ಪೌರಕಾರ್ಮಿಕರಿಗೆ ಶಾಸಕ ಶರತ್ ಬಚ್ಚೇಗೌಡ ಉಡುಗೊರೆ ವಿತರಿಸಿದರು.