ಹೊನ್ನಾವರ: ಕಾಕ್ರೋಚ್ ಪಕ್ಷದ ಹೆಸರಿನಲ್ಲಿ ದೆಹಲಿಯಲ್ಲಿ ನಡೆದ ಹೋರಾಟವು ಅರಾಜಕತೆ ಸೃಷ್ಟಿಸುವ ಹುನ್ನಾರವಾಗಿದೆ. ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಕಾರ್ಕಳ ಶಾಸಕ ವಿ. ಸುನೀಲಕುಮಾರ್ ಆರೋಪಿಸಿದರು.

ಪಟ್ಟಣದ ನ್ಯೂ ಇಂಗ್ಲಿಷ್ ಸಭಾಭವನದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಿದ `ಸಂಘಟನಾ ಸಪ್ತಾಹ'''' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಕ್ರೋಚ್ ಪಕ್ಷದವರು ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾದ ನಂತರ ಮರುಪರೀಕ್ಷೆ ನಡೆದು, ಫಲಿತಾಂಶ ಬಂದ ಬಳಿಕ ಹೋರಾಟ ನಡೆಸಿದ್ದಾರೆ. ಅದು ಇತಿಹಾಸ ಬಗ್ಗೆ ಮಾಹಿತಿ ಇಲ್ಲದ, ೨೦೧೪ ಪೂರ್ವ ದೇಶದ ಸ್ಥಿತಿಗತಿಯ ಬಗ್ಗೆ ಅರಿವಿಲ್ಲದ, ದೇಶವಿರೋಧಿ, ಹಿಂದೂ ವಿರೋಧಿ ಘೋಷಣೆ ಕೂಗುವ, ಗೊತ್ತುಗುರಿ ಇಲ್ಲದ ಹೋರಾಟವಾಗಿದೆ. ದಾರಿ ತಪ್ಪುತ್ತಿರುವ ಯುವ ಸಮುದಾಯಕ್ಕೆ ಅರಿವು ಮೂಡಿಸುವ ಕಾರ್ಯ ಬಿಜೆಪಿ ಯುವ ಮೋರ್ಚಾ ಘಟಕದಿಂದ ನಡೆಯಬೇಕಿದೆ ಎಂದರು.

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಸಂಘರ್ಷಕ್ಕಿಳಿಯಬೇಕು. ರಾಜ್ಯದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತಿದೆ. ಮೂರು ವರ್ಷದಿಂದ ಒಂದೆ ಒಂದು ರೇಶನ್ ಕಾರ್ಡ್ ನೀಡಿಲ್ಲ. ನಾಲ್ಕು ತಿಂಗಳಿನಿಂದ ಪಿಂಚಣಿ ಬಂದಿಲ್ಲ. ಶಾಲೆ ಆರಂಭವಾಗಿ ಎರಡು ತಿಂಗಳು ಕಳೆದರೂ ಪಠ್ಯಪುಸ್ತಕ ವಿತರಿಸಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರದ ಎಲ್ಲ ಯೋಜನೆಯನ್ನು ಕೈ ಬಿಟ್ಟು, ಗ್ಯಾರಂಟಿಯನ್ನು ಸರಿಯಾಗಿ ನೀಡದೇ ಆಡಳಿತ ನಡೆಸುತ್ತಿದೆ. ಸರ್ಕಾರದ ಈ ಎಲ್ಲ ಧೋರಣೆಯ ವಿರುದ್ಧ ಯುವ ಮೋರ್ಚಾ ಹೋರಾಟಕ್ಕೆ ಮುಂದಾಗಬೇಕು ಎಂದರು.

ಬಿಜೆಪಿ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಸಂಘಟನೆಯವರು ಉತ್ತಮವಾಗಿ ಕಾರ್ಯನಿರ್ವಹಿಸಿ, ಪಕ್ಷ ಜಿಲ್ಲೆಯಲ್ಲಿ ಸಂಘಟಿತವಾಗಲು ಶ್ರಮಿಸುತ್ತಿದ್ದಾರೆ ಎಂದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಅನುದಾನ ನೀಡುವಾಗ ಬಿಜೆಪಿ ಶಾಸಕರಿಗೆ ತಾರತಮ್ಯ ಮಾಡುತ್ತಿದೆ. ರಾಜ್ಯದ ಸಚಿವ ಸತೀಶ ಜಾರಕಿಹೊಳಿ ಅನುದಾನ ನೀಡಲು ಬಂದಾಗ ಕುಮಟಾದ ಕಾಂಗ್ರೆಸ್ ಮುಖಂಡರು ಅಪಪ್ರಚಾರ ಮಾಡಿ ಅನುದಾನ ನೀಡಲು ತಡೆ ಹಿಡಿಯುವ ಕೆಲಸ ಮಾಡಿದರು ಎಂದರು.


ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ಜಿಲ್ಲೆಯ ೧೭ ಮಂಡಲದಲ್ಲಿಯೂ ಬಿಜೆಪಿ ಯುವ ಮೋರ್ಚಾ ಉತ್ತಮವಾಗಿ ಕೆಲಸ ಮಾಡುತ್ತಿದೆ. ಮುಂದಿನ ಎಲ್ಲ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲು ಯುವ ಮೋರ್ಚಾ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಯುವ ಸಮುದಾಯ ಡ್ರಗ್ಸ್ ದುಶ್ಚಟದಿಂದ ದೂರವಿಡಲು ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ಅಧ್ಯಕ್ಷತೆ ವಹಿಸಿದ್ದರು. ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಿವಾನಂದ ಮರಾಠಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಪಕ್ಷದ ಮುಖಂಡರಾದ ಈಶ್ವರ ನಾಯ್ಕ, ಕೆ.ಜಿ. ನಾಯ್ಕ, ಗೋವಿಂದ ನಾಯ್ಕ, ಶಿವಾನಿ ಶಾಂತಾರಾಮ, ಎಂ.ಜಿ. ಭಟ್, ವೆಂಕಟೇಶ ನಾಯ್ಕ, ಮಂಡಲಾಧ್ಯಕ್ಷ ಯೋಗೀಶ ಮೇಸ್ತ, ಪಕ್ಷದ ಪದಾಧಿಕಾರಿಗಳು ಇದ್ದರು. ಕೃಷ್ಣ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.