ಯುವತಿ ಕೊಲೆಗೈದು ಸಹಪಾಠಿ ಪರಾರಿ

| N/A | Published : Nov 25 2025, 03:45 AM IST

Devi Shri

ಸಾರಾಂಶ

ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಸಹಪಾಠಿಯೇ ಕೊಲೆಗೈದು ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿಯಲ್ಲಿ ನಡೆದಿದೆ.

 ದಾಸರಹಳ್ಳಿ :  ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಸಹಪಾಠಿಯೇ ಕೊಲೆಗೈದು ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿಯಲ್ಲಿ ನಡೆದಿದೆ.

ಆಂಧ್ರ ಮೂಲದ ದೇವಿಶ್ರೀ (21) ಕೊಲೆಯಾದ ದುರ್ದೈವಿ ವಿದ್ಯಾರ್ಥಿನಿ. ಸಹಪಾಠಿ ಪ್ರೇಮ್ ವರ್ಧನ್ ದೇವಿಶ್ರೀಯನ್ನು ಭಾನುವಾರ ರಾತ್ರಿ ತಮ್ಮೇನಹಳ್ಳಿಯ ಸ್ನೇಹಿತೆಯ ರೂಮಿಗೆ ಕರೆದೊಯ್ಡು ಕೊಲೆ ಮಾಡಿ ತಲೆಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಆಂಧ್ರ ಪ್ರದೇಶದವರಾದ ರೆಡ್ಡಪ್ಪ ಮತ್ತು ಜಗದಾಂಬ ದಂಪತಿಯ ಕೊನೆಯ ಮಗಳು ದೇ‍ವಿಶ್ರೀಯನ್ನು ನಗರದ ಪ್ರತಿಷ್ಠಿತ ಕಾಲೇಜಿಗೆ ಸೇರಿಸಿದ್ದರು. ಭಾನುವಾರ ಬೆಳಿಗ್ಗೆ ಅವರ ತಂದೆ ದೂರವಾಣಿಯಲ್ಲಿ ಮಾತನಾಡಿದ್ದರು. ಆಮೇಲೆ ಆಕೆ ಕರೆ ಮಾಡಿದ್ರೂ ಸ್ವೀಕರಿಸಿಲ್ಲ. ಬಳಿಕ ಅನುಮಾನಗೊಂಡ ಅವರು ಆಕೆಯ ಸ್ನೇಹಿತೆಗೆ ಕರೆ ಮಾಡಿದಾಗ ನಮ್ಮ‌ ರೂಮ್ ಗೆ ದೇವಿಶ್ರೀ ಬಂದಿದ್ದಳು ಎಂದು ತಿಳಿಸಿದ್ದಾಳೆ. ಆಗ ಪೋಷಕರು ರೂಮಿಗೆ ಹೋಗಿ ನೋಡಿದಾಗ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ. ಯುವತಿಯನ್ನು ಕೊಲೆ ಮಾಡಿ ಯುವಕನೊಬ್ಬನೇ ವಾಪಸ್ ಹೋಗಿರುವ ಸಂಗತಿ ಗೊತ್ತಾಗಿದೆ.

ಇಬ್ಬರ ಪರಿಚಯ:

ದೇವಿಶ್ರೀಗೆ ಪ್ರೇಮ್ ವರ್ಧನ್ ಇನ್ಸ್ಟಾಗ್ರಾಂ ಮೂಲಕ ಪರಿಚಯ ಆಗಿದ್ದನಂತೆ. ಬಳಿಕ ಅದು ಪ್ರೀತಿ-ಪ್ರೇಮಕ್ಕೆ ತಿರುಗಿದೆ. ಭಾನುವಾರ ಆತ ದೇವಿಶ್ರೀಗೆ ಅದೇನು ಹೇಳಿ ಕರೆದುಕೊಂಡು ಹೋದನೋ, ಅಲ್ಲಿ ಏನಾಯ್ತೋ ಗೊತ್ತಿಲ್ಲ, ಆದರೆ ದೇವಿಶ್ರೀ ಕೊಲೆಯಾಗಿದ್ದಾಳೆ. ಈ ಕೊಲೆಗೆ ಪ್ರೇಮ್ ವರ್ಧನ್ ಕಾರಣ ಎಂದು ಕುಟುಂಬಸ್ಥರು ಆರೋಪಿಸಿತ್ತಿದ್ದಾರೆ.

ಸದ್ಯ ಯುವತಿಯ ಮೃತದೇಹ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆಯ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ರ್‍ಯಾಗಿಂಗ್‌ ಆರೋಪ: 

ಯುವಕ ರ್‍ಯಾಗಿಂಗ್‌ ಮಾಡುತ್ತಿದ್ದ ಬಗ್ಗೆ ಕಾಲೇಜಿಗೆ ಮತ್ತು ಪೋಷಕರಿಗೂ ಮೂರು ತಿಂಗಳ ಹಿಂದೆಯೇ ದೇವಿಶ್ರೀ ತಿಳಿಸಿದ್ದಳಂತೆ. ಈ ಬಗ್ಗೆ ಕಾಲೇಜಿನವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪೋಷಕರು ಇನ್ನು ಮೂರು ತಿಂಗಳಲ್ಲಿ ಕಾಲೇಜು ಮುಗಿಯುತ್ತೆ, ಅಂತಾ ಮಗಳಿಗೆ ಬುದ್ಧಿ ಹೇಳಿದ್ದರು ಎಂದು ಮೃತಳ ಸೋದರ ಮಾವ ಗಣೇಶ್ ಹೇಳಿದ್ದಾರೆ. ದೇವಿಶ್ರೀಯ ಕೊಲೆಗೆ ನಿಖರ ಕಾರಣ ಏನೆಂಬುದು ಆರೋಪಿ ಪ್ರೇಮ್‌ ವರ್ಧನ್‌ ಬಂಧನದ ಬಳಿಕವಷ್ಟೇ ತಿಳಿಯಬೇಕಾಗಿದೆ.

Read more Articles on