ಕುಟುಂಬ ರಾಜಕಾರಣದಿಂದ ಬಿಜೆಪಿ ಶುದ್ಧೀಕರಣಗೊಳಿಸಿ: ಮಾಜಿ ಸಚಿವ ಈಶ್ವರಪ್ಪ

| Published : May 29 2024, 12:52 AM IST

ಕುಟುಂಬ ರಾಜಕಾರಣದಿಂದ ಬಿಜೆಪಿ ಶುದ್ಧೀಕರಣಗೊಳಿಸಿ: ಮಾಜಿ ಸಚಿವ ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ನಾಯಕರೂ ಕೂಡ ಬಿಎಸ್‌ವೈ ಬಿಟ್ಟರೆ ಬೇರೆ ಯಾರೂ ಕರ್ನಾಟಕದಲ್ಲಿ ಇಲ್ಲ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಇದನ್ನು ಸರಿಪಡಿಸಬೇಕಾದರೆ, ಬಿಜೆಪಿಗಾಗಿ ಜೀವನ ಸವೆಸಿದ ರಘುಪತಿ ಭಟ್‌ ಅಂತಹವರನ್ನು ಪರಿಷತ್‌ ಚುನಾವಣೆಯಲ್ಲಿ ಆರಿಸಬೇಕು. ಆಗ ಮಾತ್ರ ರಾಜ್ಯ ಬಿಜೆಪಿಯನ್ನು ಪೂರ್ತಿಯಾಗಿ ಶುದ್ಧೀಕರಣ ಮಾಡಲು ಸಾಧ್ಯವಿದೆ ಎಂದು ಈಶ್ವರಪ್ಪ ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕುಟುಂಬ ರಾಜಕಾರಣದಿಂದ ಬಿಜೆಪಿಯನ್ನು ಶುದ್ಧೀಕರಣಗೊಳಿಸಲು ಈ ಬಾರಿಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ರಘುಪತಿ ಭಟ್‌ ಅವರನ್ನು ಬೆಂಬಲಿಸುವಂತೆ ಮಾಜಿ ಸಚಿವ ಈಶ್ವರಪ್ಪ ಅವರು ಪದವೀಧರ ಮತದಾರರನ್ನು ವಿನಂತಿಸಿದ್ದಾರೆ.

ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಈಗ ಅಪ್ಪ, ಮಕ್ಕಳ ಪಕ್ಷವಾಗಿದೆ. ಪಕ್ಷದ ತತ್ವ, ಸಿದ್ಧಾಂತಕ್ಕಿಂತಲೂ ಕುಟುಂಬ ರಾಜಕಾರಣವೇ ಮೇಳೈಸುತ್ತಿದೆ. ಇದನ್ನು ನೋಡಿ ಬಿಜೆಪಿ ನಿಷ್ಠ ಕಾರ್ಯಕರ್ತರಿಗೆ ನೋವಾಗಿದೆ. ಕೇಂದ್ರ ನಾಯಕರೂ ಕೂಡ ಬಿಎಸ್‌ವೈ ಬಿಟ್ಟರೆ ಬೇರೆ ಯಾರೂ ಕರ್ನಾಟಕದಲ್ಲಿ ಇಲ್ಲ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಇದನ್ನು ಸರಿಪಡಿಸಬೇಕಾದರೆ, ಬಿಜೆಪಿಗಾಗಿ ಜೀವನ ಸವೆಸಿದ ರಘುಪತಿ ಭಟ್‌ ಅಂತಹವರನ್ನು ಪರಿಷತ್‌ ಚುನಾವಣೆಯಲ್ಲಿ ಆರಿಸಬೇಕು. ಆಗ ಮಾತ್ರ ರಾಜ್ಯ ಬಿಜೆಪಿಯನ್ನು ಪೂರ್ತಿಯಾಗಿ ಶುದ್ಧೀಕರಣ ಮಾಡಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.ರಾಜ್ಯಾಧ್ಯಕ್ಷ ಬಚ್ಚಾ: ಬಿಜೆಪಿಯಲ್ಲಿ ಕುಟುಂಬ ರಾಜಕಾರಣದಿಂದಾಗಿ ರಾಷ್ಟ್ರೀಯತೆ ಬದಲು ಜಾತೀಯತೆ, ಸಾಮೂಹಿಕ ನಾಯಕತ್ವ ಹೋಗಿ ಸರ್ವಾಧಿಕಾರಿ ನೇತೃತ್ವ ಆಗುತ್ತಿದೆ. ಕುಟುಂಬ ರಾಜಕಾರಣ ಓಲೈಸುವವರಿಗೆ ಮಾತ್ರ ಬಿಜೆಪಿಯಲ್ಲಿ ಮಣೆ ಹಾಕುತ್ತಾರೆ. ಇದನ್ನು ವಿರೋಧಿಸಿದ್ದಕ್ಕೆ ನನಗೆ ಹಾಗೂ ಮಾಜಿ ಶಾಸಕ ರಘಪತಿ ಭಟ್‌ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಿಎಂ, ಡಿಸಿಎಂ ಜೊತೆ ಗುರುತಿಸಿಕೊಂಡಿರುವ ಮಾಜಿ ಸಚಿವರಾದ ಎಸ್‌.ಟಿ.ಸೋಮಶೇಖರ್‌ ಹಾಗೂ ಶಿವರಾಮ ಹೆಬ್ಬಾರ್‌ ವಿರುದ್ಧ ಕ್ರಮದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾಧ್ಯಕ್ಷ ಒಬ್ಬ ಬಚ್ಚಾ ಇದ್ದಾನೆ. ಏನು ಶಿಸ್ತು ಕ್ರಮ ಎಂದು ಅವರನ್ನೇ ಕೇಳಿದರೆ ಗೊತ್ತಾಗಬಹುದು ಎಂದರು. ಬಿಜೆಪಿ ಹಾಗೂ ಸಂಘಪರಿವಾರಕ್ಕೆ ವಿರುದ್ಧವಾಗಿ ವರ್ತಿಸಿದ ವ್ಯಕ್ತಿಗೆ ಜಾತಿ ಹಾಗೂ ಹಣ ಬಲದಿಂದ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನೀಡಿದೆ ಎಂದು ಈಶ್ವರಪ್ಪ ಆರೋಪಿಸಿದರು.

ನೈಋತ್ಯ ಪದವೀಧರ ಕ್ಷೇತ್ರದಾದ್ಯಂತ ರಘುಪತಿ ಭಟ್‌ಗೆ ಬಹಿರಂಗ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ ಪಕ್ಷದಲ್ಲಿ ಸ್ಥಾನಕ್ಕೆ ಅಪೇಕ್ಷೆ ಪಡುವವರು ಪಕ್ಷ ಶುದ್ಧೀಕರಣಕ್ಕಾಗಿ ಮೊದಲು ಚಿಂತಿಸಿ ರಘುಪತಿ ಭಟ್‌ರನ್ನು ಬೆಂಬಲಿಸಿ ಎಂದು ಈಶ್ವರಪ್ಪ ಹೇಳಿದರು. ಮತ್ತೆ ರಾಯಣ್ಣ ಬ್ರಿಗೇಡ್‌: ರಾಯಣ್ಣ ಬ್ರಿಗೇಡ್‌ಗೆ ಪುನರ್‌ ಚಾಲನೆ ನೀಡಲು ನಿರ್ಧರಿಸಲಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶ ಬಳಿಕ ಪ್ರಮುಖರ ಸಭೆ ಕರೆದು ಸಮಾಲೋಚನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು. ಹಿಂದೆ ರಾಯಣ್ಣ ಬ್ರಿಗೇಡ್‌ ಸ್ಥಾಪಿಸಿದ್ದಾಗ ಅದನ್ನು ಬರ್ಖಾಸ್ತುಗೊಳಿಸುವಂತೆ ಬಿಎಸ್‌ವೈ ದೂರಿನ ಮೇರೆಗೆ ಅಮಿತ್‌ ಶಾ ಸೂಚನೆ ನೀಡಿದ್ದರು. ಈಗ ಬ್ರಿಗೇಡ್‌ನ್ನು ಮತ್ತೆ ಚಾಲನೆಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಅಲ್ಪಸಂಖ್ಯಾತರ ಬೀಗರಂತೆ ವರ್ತಿಸುವ ಕಾಂಗ್ರೆಸ್‌, ಅವರನ್ನು ಇನ್ನೂ ಉದ್ಧಾರ ಮಾಡಿಲ್ಲ. ಅಲ್ಪಸಂಖ್ಯಾತರು ಬಿಜೆಪಿಯನ್ನು ನಂಬುವುದಿಲ್ಲ, ಹಾಗೆಂದು ಕಾಂಗ್ರೆಸ್‌ ಅವರನ್ನು ಉದ್ಧರಿಸಿಲ್ಲ ಎಂದರು. ಸಿಬಿಐ ತನಿಖೆ ನಡೆಸಿ: ಸಂಸದ ಪ್ರಜ್ವಲ್‌ ರೇವಣ್ಣ ಅವರ ಪೆನ್‌ಡ್ರೈವ್‌ ಕೇಸನ್ನು ಸಿಬಿಐಗೆ ಹಸ್ತಾಂತರಿಸಬೇಕು. ಎಸ್‌ಐಟಿ ತನಿಖೆಯಿಂದ ನಿಷ್ಪಕ್ಷಪಾತ ನಡೆಸಲು ಸಾಧ್ಯವಿಲ್ಲ. ಏನಿದ್ದರೂ ಸರ್ಕಾರದ ನೇರಕ್ಕೆ ವರದಿ ಕೊಡಬಹುದು. ಸಿಬಿಐಗೆ ತನಿಖೆ ವಹಿಸಿದ್ದರೆ ಕ್ಷಣದಲ್ಲಿ ವಿದೇಶದಿಂದ ಪ್ರಜ್ವಲ್‌ನನ್ನು ಭಾರತಕ್ಕೆ ಕರೆತರುತ್ತಿದ್ದರು. ಈ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಂಡು ಹೆಣ್ಮಕ್ಕಳ ಮಾನಹರಾಜು ಮಾಡಲಾಗಿದೆ. ಪರಿಷತ್‌ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು ಮತ ಚಲಾಯಿಸುತ್ತಾರೆ ಎಂದು ಪೆನ್‌ಡ್ರೈವ್‌ ಪ್ರಕರಣದ ಪರಿಣಾಮ ಕುರಿತ ಪ್ರಶ್ನೆಗೆ ಈಶ್ವರಪ್ಪ ಉತ್ತರಿಸಿದರು.

ಸಚಿವರ ರಾಜಿನಾಮೆ ಪಡೆಯಲಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಲಾಖೆ ಸಚಿವರ ತಲೆದಂಡ ಪಡೆಯಬೇಕು. ಗುತ್ತಿಗೆದಾರ ಆತ್ಮಹತ್ಯೆ ವಿಚಾರದಲ್ಲಿ ನಾನು ಕೂಡ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದೇನೆ. ಆಗ ನನ್ನ ರಾಜಿನಾಮೆಗೆ ಒತ್ತಾಯಿಸಿದ ಕಾಂಗ್ರೆಸಿಗರು ಈಗ ಯಾಕೆ ಮೌನವಾಗಿದ್ದಾರೆ. ಈ ವಿಚಾರದಲ್ಲಿ ಸಿಎಂ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು. ರಸ್ತೆಯಲ್ಲಿ ನಮಾಜ್‌ ವಿರುದ್ಧ ಕೇಸ್‌ ಹಾಕಿ: ಮಂಗಳೂರಿನ ರಸ್ತೆಯಲ್ಲಿ ನಮಾಜ್‌ ಮಾಡಿರುವವರ ವಿರುದ್ಧ ಕೇಸು ದಾಖಲಿಸಿ ಬಂಧಿಸಬೇಕು. ಬೇಕಾದರೆ ನಿಮ್ಮ ಮನೆಯಲ್ಲಿ ನಮಾಜ್‌ ಮಾಡಿ, ಯಾರೂ ಬೇಡ ಎನ್ನುವುದಿಲ್ಲ. ನಾನು ಎಲ್ಲ ಮುಸ್ಲಿಮರನ್ನು ಟೀಕೆ ಮಾಡುತ್ತಿಲ್ಲ, ಅರ್ಥ ಮಾಡಿಕೊಳ್ಳಿ. ಇದು ಯಾರೋ ರಾಷ್ಟ್ರದ್ರೋಹಿಗಳು ಮಾಡುತ್ತಿರುವ ಕುತಂತ್ರ. ಈ ತುಷ್ಟೀಕರಣ ನೀತಿ ಸರ್ಕಾರವನ್ನೇ ಸುಟ್ಟು ಭಸ್ಮ ಮಾಡುತ್ತದೆ. ಹಿಂದು-ಮುಸ್ಲಿಮರು ಸಹೋದರರಂತೆ ಇರುವುದು ಕೆಲವರಿಗೆ ಇಷ್ಟ ಇಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಪಾಲಿಕೆ ಮಾಜಿ ಸದಸ್ಯ ನವೀನ್‌ಚಂದ್ರ, ಉದ್ಯಮಿಗಳಾದ ಕೃಷ್ಣ ಶೆಣೈ, ಮಹೇಶ್‌, ಉಮೇಶ್‌ ಆರಾಧ್ಯ ಇದ್ದರು.