ಸಾರಾಂಶ
- ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನವೀಕರಣ ಅನುಮತಿ !
- ಫಾರ್ಮಾ ಕಂಪನಿಗಳ ಲಾಬಿಗೆ ಮಣಿಯುತ್ತಿದೆಯೇ ಮಂಡಳಿ ?- ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ
- ಕನ್ನಡಪ್ರಭ ಸರಣಿ ವರದಿ ಭಾಗ : 141ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಲವು ವಿಷಕಾರಿ ಕೆಮಿಕಲ್ ಕಂಪನಿಗಳಿಂದ ಜನ-ಜಲ ಜೀವಕ್ಕೆ ಕುತ್ತು ಎಂಬುದಾಗಿ ಜನರ ಆರೋಪಗಳು, ಅಲ್ಲಿನ ದುಸ್ಥಿತಿ ಮುಂತಾದವುಗಳ ಬಗ್ಗೆ ಪರಿಶೀಲನೆ ನಡೆಸಿ, ಅಂತಹ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದ್ದಿಲ್ಲದೆ ಅನುಮತಿ ವಿಸ್ತರಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.
ಕೆಮಕಲ್ ತ್ಯಾಜ್ಯ ಕಂಪನಿಗಳಿಂದ ಉಂಟಾಗುತ್ತಿರುವ ಮಾಲಿನ್ಯಕಾರಕ ವಾತಾವರಣದ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ತಂಡ ನೀಡಿದ ವರದಿಯಲ್ಲಿ ಕಂಪನಿಗಳ ನ್ಯೂನತೆಗಳು ಕಂಡು ಬಂದ ಬಗ್ಗೆ ತಿಳಿಸಲಾಗಿತ್ತು. ಐದು ರಾಜ್ಯಗಳಿಂದ ಕೆಮಿಕಲ್ ತ್ಯಾಜ್ಯ ಸಂಗ್ರಹಿಸಿ, ಬೇಕಾಬಿಟ್ಟಿಯಾಗಿ ಹಳ್ಳಕೊಳ್ಳಗಳು, ಕೆರೆ, ನದಿಗಳಿಗೆ ಬಿಡುತ್ತಿರುವ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಕೆಮಿಕಲ್ ಕಂಪನಿಗಳ ಬಗ್ಗೆ ವ್ಯಾಪಕ ದೂರು ಹಿನ್ನೆಲೆಯಲ್ಲಿ ತಾಂತ್ರಿಕ ಸಮಿತಿ ಭೇಟಿ ನೀಡಿ, ಸಿದ್ಧಪಡಿಸಿದ ವರದಿಯಲ್ಲಿ ಬಯಲಾಗಿತ್ತು. ಆದರೆ, ನಾಮ್ ಕೆ ವಾಸ್ತೆಯಂತೆ ವರದಿ ಪಡೆದ ಮಂಡಳಿ, ಮತ್ತೈದು ವರ್ಷಗಳಿಗೆ ಪರವಾನಗಿ ಅನುಮತಿ ನೀಡಿರುವುದು ವಿಚಿತ್ರ ಎನ್ನಲಾಗುತ್ತಿದೆ.ಪರವಾನಗಿ ನವೀಕರಣ ನೆಪದಲ್ಲಿ ಕಂಪನಿಗಳ ತಪಾಸಣೆ ಹಾಗೂ ಕಠಿಣ ಕ್ರಮಗಳ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದಂತೆ ಮಾಡಲಾಗುತ್ತದೆ. ಲೋಪದೋಷಗಳು ಹಾಗೂ ಷರತ್ತುಗಳ ಉಲ್ಲಂಘನೆ ಹೆಸರಲ್ಲಿ ನೋಟಿಸ್ ಮುಂತಾದ ಎಚ್ಚರಿಕೆ ಪತ್ರಗಳ ನೀಡಿದಂತೆ ಮಾಡಿದಾಗ, ಪ್ರಭಾವ ಬಳಸಿಕೊಳ್ಳುವ ಇಂತಹ ಕಂಪನಿಗಳು ಎಲ್ಲವೂ ಸರಿಯಿದೆ ಎಂಬ ಚಿತ್ರಣ ನೀಡಿ ಪರವಾನಗಿ ನವೀಕರಿಸಿಕೊಳ್ಳುತ್ತಿರುವುದು ಪರಿಸರ ಅಧಿಕಾರಿಗಳು ಹಾಗೂ ಮಂಡಳಿ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿಸುತ್ತದೆ.
ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಷರತ್ತುಗಳ ಉಲ್ಲಂಘಿಸಿ, ಜನ-ಜಲ ಜೀವಗಳಿಗೆ ಕಂಟಕವಾಗಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಎಲ್ಲವೂ ಸರಿಯಿದೆ ಎಂದು ಷರಾ ಬರೆದು ಅನುಮತಿ ಮತ್ತೆ ನವೀಕರಿಸಲಾಗುತ್ತಿರುವುದರ ಹಿಂದೆ ಕೆಮಿಕಲ್ ಕಂಪನಿಗಳ ಉದ್ಯಮಿಗಳ ಲಾಬಿ ಕಾರಣ ಎನ್ನಲಾಗುತ್ತಿದೆ.ಈ ಮಧ್ಯೆ, ಮತ್ತೇ 32ಕ್ಕೂ ಹೆಚ್ಚು ಫಾರ್ಮಾ ಕಂಪನಿಗಳಿಗೆ ಅನುಮತಿ ಹಾಗೂ ಹಾಲಿ ಕೆಲವು ಕಂಪನಿಗಳಿಗೆ ನವೀಕರಣಕ್ಕೆ ಮಂಡಳಿಯ ಕೆಲವರು ನೀಡಿದ ಸಲಹೆಯಂತೆ ಪೂರಕ ವಾತಾವರಣ ಸೃಷ್ಟಿಸಲಾಗುತ್ತಿದೆ. ಕೈಗಾರಿಕಾ ಪ್ರದೇಶದಲ್ಲಿನ ವಾತಾವರಣ ಜೀವಕ್ಕೆ ಮಾರಕವಾಗಿಲ್ಲ, ಇಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ, ಹಳ್ಳಕೊಳ್ಳ- ಕೆರೆ ನದಿಗಳಿಗೆ ತ್ಯಾಜ್ಯ ಬಿಡದೇ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ, ಕಂಪನಿಗಳು ಸರ್ಕಾರದ ಷರತ್ತುಗಳನ್ನು ಪಾಲಿಸುತ್ತಿವೆ ಎಂಬುದಾಗಿ ವರದಿ ಸಿದ್ಧಗೊಳ್ಳುತ್ತಿದೆ. ಷರತ್ತುಗಳ ಉಲ್ಲಂಘಿಸಿವೆ ಎಂದು ಕೆಲವು ದಿನಗಳ ಹಿಂದಷ್ಟೇ ನೋಟಿಸ್ ನೀಡಲಾಗಿತ್ತು. ಈಗೆಲ್ಲವೂ ಸರಿಯಾಗುತ್ತಿದೆ ಎಂಬುದಾಗಿ ಪರಿಸರ ಅಧಿಕಾರಿಗಳ ವರದಿಗಳು ಸರ್ಕಾರದ ಮೇಲ್ಮಟ್ಟದಲ್ಲಿ ಕಳುಹಿಸಲಾಗಿದೆ. ಇದರ ಉದ್ದೇಶ, ಮತ್ತೆ ಹೆಚ್ಚಿನ ಕಂಪನಿಗಳಿಗೆ ಅನುಮತಿಸಲಾಗುವುದು ಎಂದು "ಕನ್ನಡಪ್ರಭ "ಕ್ಕೆ ನಂಬಲರ್ಹ ಮೂಲಗಳು ತಿಳಿಸಿವೆ.
..ಕೋಟ್....ಕಂಪನಿಗಳ ಆರಂಭಕ್ಕೆ ಅಥವಾ ನವೀಕರಣ ಸಂದರ್ಭಗಳಲ್ಲಿ ನೀಡಲಾಗುವ ಪರಿಸರ ಪ್ರಭಾವದ ಮೌಲ್ಯಮಾಪನ (ಎನ್ವಾರೋನ್ಮೆಂಟಲ್ ಇಂಪ್ಯಾಕ್ಟ್ ಅಸ್ಸೆಸ್ಮೆಂಟ್) ವರದಿಗಳಲ್ಲಿರುವುದು ಬೇರೆ, ವಾಸ್ತವ ಕಂಡು ಬರುತ್ತಿರುವುದೇ ಬೇರೆ. ಆದರೆ, ಕಾಗದದಲ್ಲೇ ಸ್ವಚ್ಛ ಹಾಗೂ ಪರಿಶುದ್ಧ ವಾತಾವರಣ ತೋರಿಸುತ್ತಿರುವ ಅಧಿಕಾರಿಗಳು, ವಿಷಕಾರಿ ಕಂಪನಿಗಳ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿರುವುದು ವಿಪರ್ಯಾಸ.
-ಶ್ರೀಶೈಲ ಆಲದಹಳ್ಳಿ, ಪರಿಸರ ಹೋರಾಟಗಾರ, ಸಂಡೂರು. (26ವೈಡಿಆರ್10)-
26ವೈಡಿಆರ್9: ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ.