ಹಿರೇಕೆರೂರಿನ ಶುದ್ಧ ಕುಡಿವ ನೀರಿನ ಘಟಕಗಳು ಸ್ಥಗಿತ : ಗ್ರಾಮೀಣರ ಪರದಾಟ

| Published : Apr 15 2024, 01:22 AM IST / Updated: Apr 15 2024, 12:51 PM IST

ಹಿರೇಕೆರೂರಿನ ಶುದ್ಧ ಕುಡಿವ ನೀರಿನ ಘಟಕಗಳು ಸ್ಥಗಿತ : ಗ್ರಾಮೀಣರ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಬರಗಾಲ ಛಾಯೆಯಿಂದ ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡು ಗ್ರಾಮೀಣ ಜನರು ನೀರಿಗಾಗಿ ಪರಿತಪಿಸುವಂತಾಗಿದೆ.

ರವಿ ಮೇಗಳಮನಿ

 ಹಿರೇಕೆರೂರು:  ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಬರಗಾಲ ಛಾಯೆಯಿಂದ ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡು ಗ್ರಾಮೀಣ ಜನರು ನೀರಿಗಾಗಿ ಪರಿತಪಿಸುವಂತಾಗಿದೆ.

ನೀರಿನ ಬರ ಶುದ್ಧ ನೀರಿನ ಘಟಕಗಳಿಗೂ ತಟ್ಟಿದ್ದು, ಬಹುತೇಕ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ನೀರಿಲ್ಲದೇ ಬಂದ್ ಆಗಿವೆ. ಇನ್ನು ಕೆಲವು ಗ್ರಾಮಗಳಲ್ಲಿ ಯಂತ್ರಗಳು ಕೆಟ್ಟಿದ್ದು, ನೀರಿಲ್ಲದ ಕಾರಣ ಅವುಗಳ ರಿಪೇರಿಗೂ ಮುಂದಾಗಿಲ್ಲ. ಶುದ್ಧ ನೀರು ಬಳಕೆ ಮಾಡುತ್ತಿದ್ದವರು ಬೇರೆ ಗ್ರಾಮಗಳಿಗೆ ಹೋಗಿ ನೀರು ತರಬೇಕಾಗಿದೆ. ಇನ್ನು ಕೆಲವರು ಶುದ್ಧ ನೀರಿನ ಸಹವಾಸವೇ ಬೇಡ ಎಂದು ಮಾಮೂಲಿ ನೀರನ್ನೇ ಅವಲಂಬಿಸಿದ್ದಾರೆ. 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದ್ದು, ಅವುಗಳಿಗೆ ಸರಬರಾಜು ಆಗುವ ಬೋರ್‌ವೆಲ್‌ಗಳಲ್ಲಿ ನೀರಿಲ್ಲ. ಹೀಗಾಗಿ ಈ ಘಟಕಗಳೂ ನಿರುಪಯುಕ್ತವಾಗಿವೆ. ಇನ್ನೂ ಕೆಲವು ಘಟಕಗಳು ನೀರು ಇದ್ದರೂ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ.

ಗ್ರಾಮೀಣ ಭಾಗದ ಜನರ ಆರೋಗ್ಯದ ದೃಷ್ಟಿಯಿಂದ ಲಕ್ಷಾಂತರ ರು. ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಆದರೆ ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ಅವು ಸ್ಥಗಿತಗೊಂಡು ಸಾರ್ವಜನಿಕರು ನೀರಿಗಾಗಿ ಪರದಾಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ಶುದ್ಧ ಕುಡಿಯುವ ನೀರಿಗಾಗಿ ಹಿರೇಕೆರೂರು ಪಟ್ಟಣಕ್ಕೆ ಬರಬೇಕಾದ ಪರಿಸ್ಥಿತಿ ಒದಗಿದೆ.

ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಪ್ರಾರಂಭಗೊಂಡಾಗಿಂದ ಜನರು ಅದನ್ನೇ ಬಳಸುತ್ತಿದ್ದರು. ಈಗ ಕೆಲವರು ಪಟ್ಟಣದಿಂದ ನೀರು ತಂದು ಸೇವಿಸುತ್ತಿದ್ದಾರೆ. ಇನ್ನು ಕೆಲವರು ಹಳ್ಳಿಗಳಲ್ಲಿ ಲಭ್ಯವಿರುವ ಬೋರ್‌ವೆಲ್ ನೀರು ಬಳಸುತ್ತಿದ್ದಾರೆ. ಮಕ್ಕಳ ಮತ್ತು ವಯೋವೃದ್ಧರ ಮೇಲೆ ಅದರ ಪರಿಣಾಮ ಉಂಟಾಗುತ್ತಿದ್ದು, ಶೀತ, ನೆಗಡಿ ಹಾಗೂ ಜ್ವರ ಕಾಣಿಸಿಕೊಂಡು ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಬೇಕು. 

ಸ್ಥಗಿತಗೊಂಡಿರುವ ಘಟಕ ಸುಸ್ಥಿತಿಗೆ ತಂದು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂಬುದು ಸಾರ್ವಜನಿಕರ ಆಗ್ರಹ.ಡಮ್ಮಳ್ಳಿ ಗ್ರಾಮದಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ತಾಂತ್ರಿಕ ಕಾರಣ ಹಾಗೂ ನೀರು ಪೂರೈಕೆಯ ಅಭಾವದಿಂದ ಸ್ಥಗಿತಗೊಂಡಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಗಮನಕ್ಕೆ ತರಲಾಗಿದೆ ಬೆಟಕೇರೂರ ಪಿಡಿಒ ಪಿ.ಎಂ. ಹಿರೇಮಠ ಹೇಳಿದರು.ನಮ್ಮೂರಲ್ಲಿ ಶುದ್ಧ ನೀರಿನ ಘಟಕ ಸ್ಥಗಿತಗೊಂಡು ವರ್ಷ ಆಗುತ್ತಾ ಬಂತು, ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೂ ಚಿಕ್ಕೇರೂರ ಅಥವಾ ಹಿರೇಕೆರೂರಿಗೆ ಹೋಗಿ ಫಿಲ್ಟರ್ ನೀರು ತರುತ್ತಿದ್ದಾರೆ ಡಮ್ಮಳ್ಳಿ ಗ್ರಾಮಸ್ಥ ರಾಜು ಸುಣ್ಣದಕೊಪ್ಪ ಹೇಳಿದರು.