ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ಕಿಡಿಗೇಡಿಗಳು ಬ್ಲಾಕ್ ಮಾಡಿದ್ದ ಯುಜಿಡಿ ಮ್ಯಾನ್ ಹೋಲ್ ಅನ್ನು ಪುರಸಭಾ ಅಧ್ಯಕ್ಷರ ಸೂಚನೆ ಮೇರೆಗೆ ಸಿಬ್ಬಂದಿಯಿಂದ ತೆರವು ಕಾರ್ಯಾಚರಣೆ ನಡೆಸಲಾಯಿತು.
ಈ ವೇಳೆ ಪುರಸಭಾ ಅಧ್ಯಕ್ಷ ಎ. ಆರ್. ಅಶೋಕ್ ಭೇಟಿ ನೀಡಿ ಪುರಸಭೆಯ ಸಿಬ್ಬಂದಿಗೆ ಸೂಚನೆ ನೀಡಿ ಮ್ಯಾನ್ ಹೋಲ್‌ಗೆ ಹಾಕಿದ್ದ ಕಸ, ಇತರೆ ವಸ್ತುಗಳನ್ನು ತೆಗೆಸಿ ನೀರು ಸರಾಗವಾಗಿ ಹೋಗುವಂತೆ ಮಾಡಿಕೊಟ್ಟರು.ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಅಧ್ಯಕ್ಷ ಅಶೋಕ್, ಪಟ್ಟಣದ ಹೊಳೆ ಬೀದಿಯ ಆರನೇ ವಾರ್ಡ್‌ನಲ್ಲಿ ಯುಜಿಡಿಯ ಮ್ಯಾನ್ ಹೋಲ್‌ಗೆ ಕಿಡಿಗೇಡಿಗಳು ಮರಳು ತುಂಬಿದ ಚೀಲ ಹಾಗೂ ಕಲ್ಲುಗಳನ್ನು ಹಾಕಿ ಯುಜಿಡಿ ನೀರು ಸರಾಗವಾಗಿ ಹೋಗದಂತೆ ಬಂದ್ ಮಾಡಿದ್ದರು. ಇಲ್ಲಿ ನೀರು ಕಟ್ಟಿ ಹೊಲ ಮತ್ತು ಗದ್ದೆಗಳಿಗೆ ಹಾಗೂ ರಸ್ತೆಗೆ ಯುಜಿಡಿ ನೀರು ಹೋಗಿ ಕಲುಷಿತವಾಗಿತ್ತು. ನಮಗೆ ಮಾಹಿತಿ ಬಂದ ತಕ್ಷಣ ನಾವು ಸ್ಥಳಕ್ಕೆ ಹೋಗಿ ನೋಡಿದಾಗ ಯಾರೋ ಕಿಡಿಗೇಡಿಗಳು ಈ ಕೆಲಸ ಮಾಡಿದ್ದು ಕಂಡುಬಂದಿದ್ದು ಇಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಇಲ್ಲಿ ಯಾರಿಗಾದರೂ ಅನುಮಾನ ಬಂದರೆ ನಮಗೆ ತಿಳಿಸಿ, ಅಂತಹವರ ವಿರುದ್ಧ ಕ್ರಮ ಕೈಗೊಂಡು ಎಫ್ಐಆರ್ ಹಾಕಿಸಲಾಗುವುದು ಎಂದು ತಿಳಿಸಿದರಲ್ಲದೆ ಯುಜಿಡಿ ನೀರು ದೇವಸ್ಥಾನದಿಂದ ಕೆಳಗಿನ ಹೊಳೆಬೀದಿಯ ಯುಜಿಡಿ ಯವರೆಗೂ ಹರಿಯುತ್ತದೆ. ಈ ರೀತಿ ಅನಾಗರಿಕರಂತೆ ವರ್ತಿಸಿ ಮ್ಯಾನ್ ಹೋಲ್ ಮುಚ್ಚುವುದು ಇಂತಹ ಕೆಲಸ ಮಾಡಿದರೆ ಸಾಕಷ್ಟು ತೊಂದರೆಯಾಗುವುದಲ್ಲದೆ ಯುಜಿಡಿ ಸಮಸ್ಯೆ ಇನ್ನಷ್ಟು ದೊಡ್ಡದಾಗುತ್ತದೆ. ಆದ್ದರಿಂದ ಯಾರೂ ಇಂತಹ ಕೆಲಸ ಮಾಡಬಾರದು. ಒಂದು ವೇಳೆ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಾರ್ಡಿನ ಸದಸ್ಯರಾದ ಸೌಮ್ಯ ಸುಬ್ರಮಣ್ಯ, ಪುರಸಭೆ ಆರೋಗ್ಯ ಅಧಿಕಾರಿ ಲೋಹಿತ್ ಹಾಗೂ ಸಿಬ್ಬಂದಿ ಹಾಜರಿದ್ದರು.