ಸಾರಾಂಶ
ಹೊಳೆಆಲೂರ: ಸ್ವಚ್ಛ ಭಾರತ ಮಿಷನ್‌ನಡಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಅಭಿಯಾನಕ್ಕೆ ರೋಣ ತಾಲೂಕಿನಲ್ಲಿ ಮತ್ತಷ್ಟು ವೇಗ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ರೋಣ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಅವರು ಗ್ರಾಮಕ್ಕೆ ಭೇಟಿ ನೀಡಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಗ್ರಾಮದಲ್ಲಿನ ಅಂಗಡಿ–ಮುಂಗಟ್ಟುಗಳಿಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿದರು. ಸ್ವಚ್ಛತಾ ವಾಹನಗಳ ಮೂಲಕ ಕಸದ ಸರಿಯಾದ ವಿಲೇವಾರಿ ವಿಧಾನ, ಕುಡಿಯುವ ನೀರಿನ ಗುಣಮಟ್ಟದ ಕಾಪಾಡುವಿಕೆ ಹಾಗೂ ಪ್ಲಾಸ್ಟಿಕ್ ನಿಷೇಧದ ಬಗ್ಗೆ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಅರಿವು ಮೂಡಿಸಿದರು.ಸ್ವಚ್ಛತೆ ನಮ್ಮ ಜವಾಬ್ದಾರಿ ಮಾತ್ರವಲ್ಲ, ಅದು ನಮ್ಮ ಆರೋಗ್ಯ ಮತ್ತು ಪರಿಸರದ ರಕ್ಷಣೆಗೆ ಮೂಲಭೂತ. ಪ್ಲಾಸ್ಟಿಕ್ ಬದಲಿಗೆ ಕಾಗದ ಚೀಲಗಳು ಹಾಗೂ ಬಟ್ಟೆಯ ಚೀಲಗಳ ಬಳಕೆಯನ್ನು ಉತ್ತೇಜಿಸುವಂತೆ ಗ್ರಾಮಸ್ಥರಿಗೆ ಕರೆ ನೀಡಿದರು.ಈ ವೇಳೆ ಗ್ರಾಮಸ್ಥರು, ಅಂಗಡಿ ಮಾಲೀಕರು ಹಾಗೂ ಪಂಚಾಯಿತಿ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡು, ಕಸ ವಿಲೇವಾರಿಯ ವಿಧಾನಗಳನ್ನು ಪ್ರಾಯೋಗಿಕವಾಗಿ ಕಲಿತುಕೊಂಡರು. ಅಧಿಕಾರಿಗಳು ಕುಡಿಯುವ ನೀರಿನ ಮಾದರಿ ಪರೀಕ್ಷೆ ಹಾಗೂ ಶುದ್ಧತೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ವಿವರಿಸಿದರು. ಸ್ವಚ್ಛ ಭಾರತ ಮಿಷನ್‌ನಡಿ ಹೊಳೆಆಲೂರನ್ನು ಮಾದರಿ ಗ್ರಾಮವನ್ನಾಗಿ ರೂಪಿಸುವ ಸಂಕಲ್ಪ ಮಾಡಿದರು.
ಗ್ರಾಪಂ ಕಚೇರಿಗೆ ಭೇಟಿ ನೀಡಿದ ಅವರು, ಸಾಮಾಜಿಕ ಲೆಕ್ಕ ಪರಿಶೋಧನೆ, ಸ್ಥಳೀಯ ಲೆಕ್ಕ ಪರಿಶೋಧನೆ, ಮನರೇಗಾ ಯೋಜನೆಯಡಿ ಉದ್ಯೋಗ ಸೃಷ್ಟಿ, ಸಿಬ್ಬಂದಿ ಹಾಜರಾತಿ ಸೇರಿದಂತೆ ವಿವಿಧ ವಿಷಯಗಳ ಪ್ರಗತಿ ಪರಿಶೀಲಿಸಿದರು. ಈ ಮೂಲಕ ಪಂಚಾಯಿತಿ ಕಾರ್ಯವೈಖರಿಯನ್ನು ಪಾರದರ್ಶಕಗೊಳಿಸುವ ಜತೆಗೆ ಸ್ವಚ್ಛತಾ ಯೋಜನೆಗಳಲ್ಲಿ ಇರುವ ಲೋಪಗಳನ್ನು ಸರಿಪಡಿಸಲು ಸೂಚಿಸಿದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಗಿರಿತಮ್ಮನ್ನವರ ಹಾಗೂ ಸಿಬ್ಬಂದಿ ಇದ್ದರು.