ಸಾರಾಂಶ
ಶಿರಗುಂಪಿ ಗ್ರಾಮದ ಎಸ್‌ಸಿ ಕಾಲನಿಯಲ್ಲಿ ಅಸ್ವಚ್ಛತೆ
ಕಸದ ವಾಹನವೂ ಬರಲ್ಲ, ಸ್ವಚ್ಛತಾ ಸಿಬ್ಬಂದಿಯೂ ಇಲ್ಲಪರಶಿವಮೂರ್ತಿ ದೋಟಿಹಾಳ
ಕನ್ನಡಪ್ರಭ ವಾರ್ತೆ ಕುಷ್ಟಗಿ2019ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದ ತಾಲೂಕಿನ ಶಿರಗುಂಪಿ ಗ್ರಾಮದ ಎಸ್‌ಸಿ ಕಾಲನಿಯಲ್ಲಿ ಈಗ ಸ್ವಚ್ಛತೆ ಮಾಯವಾಗಿದೆ!
ನಮ್ಮ ಕಾಲನಿಯಲ್ಲಿ ಕಸ ವಿಲೇವಾರಿ ವಾಹನ ಬರುವುದಿಲ್ಲ, ಚರಂಡಿಗಳು ತುಂಬಿ ತುಳುಕುತ್ತಿದ್ದರೂ ಗ್ರಾಪಂ ಸಿಬ್ಬಂದಿ ಸ್ವಚ್ಛತೆ ಮಾಡುತ್ತಿಲ್ಲ, ಗ್ರಾಪಂ ಅಧಿಕಾರಿಗಳು ಸ್ವಚ್ಛತೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ಈ ಕಾಲನಿಯಲ್ಲಿ 80ಕ್ಕೂ ಅಧಿಕ ಕುಟುಂಬಗಳು ವಾಸ ಮಾಡುತ್ತಿವೆ. ಸರಿಯಾದ ರಸ್ತೆ ಇಲ್ಲ, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ರಸ್ತೆಯುದ್ದಕ್ಕೂ ಹರಿಯುವ ತ್ಯಾಜ್ಯದ ನೀರಿನಲ್ಲಿಯೆ ಜನರು ದಿನನಿತ್ಯವಾಗಿ ಸಂಚಾರ ಮಾಡಬೇಕಿದೆ.
ಕಾಲನಿಯ ಮುಖ್ಯರಸ್ತೆಗಳ ಪಕ್ಕದಲ್ಲಿಯೆ ತಿಪ್ಪೆ ರಾಶಿ ಹಾಕಲಾಗಿದೆ. ಈ ತಿಪ್ಪೆ ಪಕ್ಕದಲ್ಲೇ ಚರಂಡಿ ನಿರ್ಮಾಣ ಮಾಡಲಾಗಿದೆ. ಚರಂಡಿ ತುಂಬಿ ತ್ಯಾಜ್ಯದ ನೀರು ಹೊರಗಡೆ ಹರಿಯುತ್ತಿದ್ದರೂ ಗಮನಿಸುತ್ತಿಲ್ಲ. ಈ ಚರಂಡಿಯ ತ್ಯಾಜ್ಯ ನೇರವಾಗಿ ಹಳ್ಳ ಸೇರುತ್ತದೆ. ಚರಂಡಿಯ ಪಕ್ಕದಲ್ಲಿಯೆ ಕೆಲವರು ಮಲ-ಮೂತ್ರ ವಿಸರ್ಜನೆ ಮಾಡುತ್ತಾರೆ.ಈ ಕಾಲನಿ ಅವ್ಯವಸ್ಥೆಯ ಆಗರವಾಗಿದ್ದು, ಚರಂಡಿಯಿಂದ ಬೀರುವ ದುರ್ವಾಸನೆ ಒಂದು ಕಡೆಯಾದರೆ ಇನ್ನೊಂದು ಕಡೆಯಲ್ಲಿ ಬಹಿರ್ದೆಸೆಯ ದುರ್ವಾಸನೆ, ಈ ವಾಸನೆಯಿಂದ ಸ್ಥಳೀಯ ನಿವಾಸಿಗಳು ಬೇಸತ್ತು ಹೋಗಿದ್ದಾರೆ. ಜತೆಗೆ ಸಾಂಕ್ರಾಮಿಕ ರೋಗದ ಭೀತಿಯೂ ಕಾಡುತ್ತಿದೆ.
ಈ ಗ್ರಾಮವೂ ಶಿರಗುಂಪಿ ಗ್ರಾಮದ ಅಧ್ಯಕ್ಷೆ ಸವಿತಾ ಕಾಳೇಶ ಬಡಿಗೇರ ಅವರ ಸ್ವಗ್ರಾಮ ಎನ್ನುವುದು ಗಮನಾರ್ಹ ಸಂಗತಿ.ಶಿರಗುಂಪಿಯ ಎಸ್‌ಸಿ ಕಾಲನಿಯ ಬಗ್ಗೆ ಗ್ರಾಪಂನವರು ನಿರ್ಲಕ್ಷ್ಯ ವಹಿಸಿದ್ದಾರೆ. ಚರಂಡಿಗಳು ತುಂಬಿ ದುರ್ವಾಸನೆ ಬೀರುತ್ತಿದೆ. ಕಸದ ವಾಹನವೂ ನಮ್ಮ ಕಾಲನಿಗೆ ಬರುತ್ತಿಲ್ಲ. ನಾವು ಸಾಂಕ್ರಾಮಿಕ ರೋಗದ ಭೀತಿಯಿಂದ ಬಳಲುವಂತಾಗಿದೆ. ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ವಾರಕ್ಕೊಂದು ದಿನದಂತೆ ಸ್ವಚ್ಛತಾ ಸಿಬ್ಬಂದಿಗೆ ಕಾರ್ಯವನ್ನು ಹಂಚಿಕೊಡಲಾಗಿದೆ. ಶಿರಗುಂಪಿ ಎಸ್‌ಸಿ ಕಾಲನಿಯ ಚರಂಡಿಗಳಲ್ಲಿ ತ್ಯಾಜ್ಯ ತುಂಬಿರುವುದು ಗಮನಕ್ಕಿದೆ. ಜೆಸಿಬಿ ಮೂಲಕ ಹೂಳು ತೆಗೆಸುವ ಕೆಲಸ ಮಾಡಿಸಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಿಡಿಒ ರಾಮಣ್ಣ ದಾಸರ ತಿಳಿಸಿದ್ದಾರೆ.