ಸಾರಾಂಶ
ಶಿವಕುಮಾರ ಕುಷ್ಟಗಿ ಗದಗ
ನಿತ್ಯವೂ ಸಾವಿರಾರು ರೈತರು ತಮ್ಮ ಕೃಷಿ ಉತ್ಪನ್ನ ಮಾರಾಟಕ್ಕೆ ಬರುವ ಸ್ಥಳವಾಗಿರುವ ಗದಗ ಎಪಿಎಂಸಿ ಆವರಣದಲ್ಲಿ ರಾಶಿ ರಾಶಿ ಕಸ ತುಂಬಿದ್ದು, ಇದನ್ನು ತೆಗೆದು ಸ್ವಚ್ಛಗೊಳಿಸುವವರು ಯಾರು? ಎನ್ನುವ ಪ್ರಶ್ನೆಗೆ ಉತ್ತರವೇ ಇಲ್ಲದಂತಾಗಿದೆ. ಆದರೆ ವಾಸ್ತವದಲ್ಲಿ ನಿತ್ಯವೂ ಸಂಗ್ರಹವಾಗುವ ಹಸಿ ಕಸದಿಂದ ಅತೀವ ಸಮಸ್ಯೆ ಸೃಷ್ಟಿಯಾಗಿದೆ.ಕೊರೋನಾ ಸಂದರ್ಭದಲ್ಲಿ ಸಗಟು ತರಕಾರಿ ಹಾಗೂ ಹೂವಿನ ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸಿದ ನಂತರ ನಿತ್ಯವೂ ಟನ್‌ಗಟ್ಟಲೇ ಕೊಳೆತ ತರಕಾರಿ, ಬಾಡಿದ ಹೂವು ಅಂಗಡಿಗಳ ಮಾಲೀಕರು ಎಪಿಎಂಸಿ ಆವರಣದಲ್ಲಿಯೇ ಹಾಕುತ್ತಿದ್ದು, ಇದರಿಂದ ಆವರಣದಲ್ಲಿ ವಿಪರೀತ ದುರ್ನಾತ ಸೃಷ್ಟಿಯಾಗುತ್ತಿದೆ.
ತೀವ್ರ ಹಗ್ಗಜಗ್ಗಾಟ: ವಿದ್ಯುತ್ ದೀಪ, ರಸ್ತೆ ಪೂರ್ಣ ಪ್ರಮಾಣದಲ್ಲಿ ಮಾಡಿಕೊಡಿ ಎಂದು ನಗರಸಭೆಗೆ ಕೃಷಿ ಉತ್ಪನ್ನ ಮಾರುಕಟ್ಟೆಯ (ಎಪಿಎಂಸಿ) ಲಿಖಿತ ಪತ್ರ ಬರೆದಿದೆ, ನೀವು ಮೊದಲು ತೆರಿಗೆ ಪಾವತಿಸಿ ನಂತರ ಸೌಕರ್ಯದ ಬಗ್ಗೆ ಬೇಡಿಕೆ ಮಾಡಿ ಎಂದು ಎಪಿಎಂಸಿಗೆ ನಗರಸಭೆಯ ಪ್ರತಿಕ್ರಿಯೆ ನೀಡಿದೆ. ಗದಗ ಎಪಿಎಂಸಿಯಲ್ಲಿ ಕಳೆದ ಕೆಲವು ವರ್ಷಗಳಿಂದ ರಸ್ತೆ, ವಿದ್ಯುತ್ ದೀಪ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳೇ ಇಲ್ಲದಂತಾಗಿದೆ. ಈ ವಿಷಯವಾಗಿ ನಗರಸಭೆ ಮತ್ತು ಎಪಿಎಂಸಿ ನಡುವೆ ನಿರಂತರ ಪತ್ರ ವ್ಯವಹಾರ ಮಾತ್ರ ನಡೆಯುತ್ತಿದ್ದು ಕಾಮಗಾರಿಗಳು ಮಾತ್ರ ನಡೆಯುತ್ತಿಲ್ಲ. ಇದರಿಂದ ರೈತರಿಗೆ ಮಾತ್ರ ತೀವ್ರ ತೊಂದರೆಯಾಗುತ್ತಿದೆ.ರೈತರಿಗೆ ತೀವ್ರ ತೊಂದರೆ: ರಾಜ್ಯದಲ್ಲಿಯೇ ಅತೀ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆಯಾಗಿರುವ ಗದಗನ ರೈತರು ಅಕ್ಟೋಬರ್ ಮೊದಲ ವಾರದಿಂದಲೇ ಈರುಳ್ಳಿ ಮಾರಾಟಕ್ಕೆ ಗದಗ ಎಪಿಎಂಸಿಗೆ ಬರುವುದು ವಾಡಿಕೆ. ಇದರೊಟ್ಟಿಗೆ ಒಣಮೆಣಸಿನಕಾಯಿ ಮಾರಾಟ ಕೂಡಾ ಪ್ರತಿ ವರ್ಷ ಬಲು ಜೋರಾಗಿಯೇ ನಡೆಯುತ್ತದೆ. ರೈತರು ಮಾರಾಟಕ್ಕೆ ತಂದಿರುವ ಈರುಳ್ಳಿ ಸೇರಿದಂತೆ ವಸ್ತುಗಳು ಮಾರಾಟವಾಗಿ, ಅವುಗಳ ತೂಕವಾಗಬೇಕಾದರೆ ತಡರಾತ್ರಿಯವರೆಗೂ ಸಮಯ ಬೇಕಾಗುತ್ತದೆ. ಇನ್ನು ಬೆಳಗಿನ ಟೆಂಡರ್‌ಗಾಗಿ ರೈತರು ತಡರಾತ್ರಿಯೇ ಎಪಿಎಂಸಿಗೆ ಆಗಮಿಸುವ ಹಿನ್ನೆಲೆಯಲ್ಲಿ, ಕುಡಿವ ನೀರು, ಶೌಚಾಲಯದಲ್ಲಿ ನೀರಿನ ವ್ಯವಸ್ಥೆ, ಬೀದಿ ದೀಪಗಳು ಹೀಗೆ ಮೂಲಭೂತ ಸೌಲಭ್ಯಗಳಿಂದ ರೈತರು ವಂಚಿತರಾಗುತ್ತಿದ್ದಾರೆ.
ಎಪಿಎಂಸಿ ಆವರಣ ಶುಚಿಗೊಳಿಸುವುದು ಕಷ್ಟಸಾಧ್ಯ: ಎಪಿಎಂಸಿ ಕಾಯ್ದೆ ತಿದ್ದುಪಡಿಯಾದ ನಂತರ ಮಾರುಕಟ್ಟೆ ಶುಲ್ಕ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದ್ದರಿಂದ ಬೀದಿ ದೀಪ ನಿರ್ವಹಣೆ, ಗಟಾರು ಸ್ವಚ್ಛತೆ, ಪ್ರಾಂಗಣ ಸ್ವಚ್ಛತೆ ಮತ್ತು ಸಮಿತಿಯ ಕಾರ್ಯ ನಿರ್ವಹಿಸುವಲ್ಲಿ ಸಮಸ್ಯೆ ಎದುರಾಗಿದೆ. ಎಪಿಎಂಸಿಯಲ್ಲಿ ತಾಂತ್ರಿಕ ಸಿಬ್ಬಂದಿ ಇಲ್ಲದಿರುವುದರಿಂದ ದೀಪಗಳ ನಿರ್ವಹಣೆ ಅಸಾಧ್ಯ. ಕೇವಲ 5 ಜನ ಸ್ವಚ್ಛತಾ ಕಾರ್ಮಿಕರು ಇರುವುದರಿಂದ 150 ಎಕರೆ ಎಪಿಎಂಸಿ ಆವರಣ ಶುಚಿಗೊಳಿಸುವುದು ಕಷ್ಟಸಾಧ್ಯವಾಗಿದೆ ಎಪಿಎಂಸಿ ಅಧಿಕಾರಿಗಳು ಪತ್ರ ಬರೆದಿದ್ದಾರೆ.20 ವರ್ಷಗಳಿಂದ ತೆರಿಗೆ ಪಾವತಿಸಿಲ್ಲ: ಎಪಿಎಂಸಿಯಿಂದ ನಗರಸಭೆ ಕಳೆದ 20 ವರ್ಷಗಳಿಂದ ತೆರಿಗೆ ಪಾವತಿಸಿಲ್ಲ. ಹಾಗಾಗಿ ಮೊದಲು ತೆರಿಗೆ ಪಾವತಿಸಬೇಕು. ಆಸ್ತಿ ತೆರಿಗೆ ಇಲ್ಲದೇ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಿಲ್ಲ. ಸ್ವಯಂ ಘೋಷಿತ ಆಸ್ತಿ ತೆರಿಗೆ ಆಗಿರುವುದರಿಂದ ಖುದ್ದಾಗಿ ವ್ಯಾಪಾರಸ್ಥರೇ ಆಸ್ತಿ ತೆರಿಗೆ ಪಾವತಿಸಬೇಕು. ತದ ನಂತರ ಎಪಿಎಂಸಿ ಆವರಣ ಅಭಿವೃದ್ಧಿ ಸಹಜವಾಗಿಯೇ ಸಾಧ್ಯವಾಗುತ್ತದೆ ಎನ್ನುವುದು ನಗರಸಭೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಬಹಳಷ್ಟು ಬಾಕಿ: 2015 ರವರೆಗೆ ತೆರಿಗೆ ಪರಿಪೂರ್ಣಗೊಳಿಸಲಾಗಿದೆ, ತದನಂತರ ನಗರಸಭೆಯಿಂದ ತೆರಿಗೆ ಪಾವತಿ ಸೃಷ್ಟಿಸಲಾಗಿಲ್ಲ. ಈಗ ಏಕಾಏಕಿ ₹9 ಲಕ್ಷ ತೆರಿಗೆ ಹಾಗೂ ₹ 9 ಲಕ್ಷ ದಂಡ ವಿಧಿಸಿ ₹ 18 ಲಕ್ಷ ಪಾವತಿಸಲು ತಿಳಿಸಿದ್ದಾರೆ. ಇದು ಎಪಿಎಂಸಿಗೆ ಕಷ್ಟ ಸಾಧ್ಯ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ವಿನಾಯಿತಿ ಕೇಳುವ ಚಿಂತನೆಯಲ್ಲಿ ಎಪಿಎಂಸಿಗೆ ಇದೆ. ಗಣಕೀಕೃತ ತೆರಿಗೆ ವ್ಯವಸ್ಥೆ ಜಾರಿಯಲ್ಲಿದೆ. ಹಾಗಾಗಿ ವಿನಾಯಿತಿ ಅಸಾಧ್ಯ. ನಿಯಮದ ಪ್ರಕಾರ ತೆರಿಗೆ ಪಾವತಿಸಲು ತಿಳಿಸಲಾಗಿದೆ. ಹಲವು ಬಾರಿ ಎಪಿಎಂಸಿ ಪ್ರಾಂಗಣದಲ್ಲಿರುವ ಆಸ್ತಿ ಮಾಲೀಕರ ಬಳಿ ತೆರಳಿ ತೆರಿಗೆ ಪಾವತಿಸುವಂತೆ ಮನವಿ ಮಾಡಿ ನೋಟಿಸ್ ಕೂಡ ನೀಡಲಾಗಿದೆ.ತರಕಾರಿ ಮಾರುಕಟ್ಟೆ ಈ ಮೊದಲು ಎಪಿಎಂಸಿ ಪ್ರಾಂಗಣ ಹೊರಗಿತ್ತು. ಈಗ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಿದ್ದಾರೆ. ಇದರಿಂದ ನಿತ್ಯವೂ ಹೆಚ್ಚಿನ ಹಸಿ ಕಸ ಸೃಷ್ಟಿಯಾಗುತ್ತಿದೆ ಇದರ ಸ್ವಚ್ಛತೆ ಎಪಿಎಂಸಿಯೇ ನಿರ್ವಹಿಸುತ್ತಿದೆ. ನಗರಸಭೆಯ ಸ್ವಚ್ಛತೆ ಕಾರ್ಯದ ಸಹಕಾರ ಅಗತ್ಯವಿದೆ. ಎಪಿಎಂಸಿಯ ಹಲವು ವರ್ತಕರು ತೆರಿಗೆ ಪಾವತಿಸುತ್ತಿದ್ದಾರೆ. ಆದರೆ, ಯಾವುದೇ ಮೂಲ ಸೌಕರ್ಯ ನಗರಸಭೆ ಒದಗಿಸಿಲ್ಲ. ಈ ಕುರಿತು ಪತ್ರ ಬರೆಯಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಸುವರ್ಣಾ ವಾಲೀಕಾರ ತಿಳಿಸಿದ್ದಾರೆ.
ತರಕಾರಿ ಮಾರುಕಟ್ಟೆಯಲ್ಲಿ ನಿತ್ಯವೂ ಸಾಕಷ್ಟು ವೇಸ್ಟ್ ತರಕಾರಿ, ಹೂವು ಸೃಷ್ಟಿಯಾಗುವ ಹಿನ್ನೆಲೆಯಲ್ಲಿ ಪ್ರತಿ ದಿನವೂ ಅದನ್ನು ಸ್ವಚ್ಛಗೊಳಿಸಬೇಕು. ಆದರೆ ದೀಪಾವಳಿ ನಂತರ ಸ್ವಚ್ಛತೆ ಮಾಡದೇ ಇರುವ ಹಿನ್ನೆಲೆಯಲ್ಲಿ ಮಾರಾಟಕ್ಕೆ ಬರುವ ರೈತರಿಗೆ, ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ರೈತರಾದ ನಾಗೇಶ ಬೂದಿಹಾಳ, ಮಲ್ಲಪ್ಪ ಕುಬೇರಹಳ್ಳಿ ಹೇಳಿದ್ದಾರೆ.