ಕನ್ನಡ ರಾಜ್ಯೋತ್ಸವ ಅಂಗವಾಗಿ ಮಹಾ ನಗರ ಪಾಲಿಕೆಯಿಂದ ನವೆಂಬರ್-2024ನ್ನು ಸ್ವಚ್ಛತಾ ಮಾಸವಾಗಿ ಆಚರಿಸುವ ಜತೆಗೆ ಎಲ್ಲಾ 45 ವಾರ್ಡ್‌ಗಳಲ್ಲೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಮೇಯರ್ ಕೆ. ಚಮನ್ ಸಾಬ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡ ರಾಜ್ಯೋತ್ಸವ ಅಂಗವಾಗಿ ಮಹಾ ನಗರ ಪಾಲಿಕೆಯಿಂದ ನವೆಂಬರ್-2024ನ್ನು ಸ್ವಚ್ಛತಾ ಮಾಸವಾಗಿ ಆಚರಿಸುವ ಜತೆಗೆ ಎಲ್ಲಾ 45 ವಾರ್ಡ್‌ಗಳಲ್ಲೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಮೇಯರ್ ಕೆ. ಚಮನ್ ಸಾಬ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯ 45 ವಾರ್ಡ್‌ಗಳಲ್ಲೂ ಇಡೀ ನವೆಂಬರ್ ತಿಂಗಳಲ್ಲಿ ಸ್ವಚ್ಛತಾ ಚಟುವಟಿಕೆ ನಡೆಸಲಾಗುವುದು. ಸ್ವಚ್ಛತಾ ಕಾರ್ಯಕ್ಕೆ ಅಗತ್ಯ ಸಲಕರಣೆ, ವಾಹನ, ಮಾನವ ಸಂಪನ್ಮೂಲವನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳಲಾಗಿದೆ. ಮನೆ ಮುಂದೆ ಬರುವ ಕಸದ ಗಾಡಿಗಳಿಗೆ ಒಣ ಮತ್ತು ಹಸಿ ಕಸವನ್ನು ವಿಂಗಡಿಸಿ ಸಾರ್ವಜನಿಕರು ನೀಡಬೇಕು ಎಂದು ಮನವಿ ಮಾಡಿದರು.

ನಗರದಲ್ಲಿ ಸುಮಾರು 100 ಲೋಡ್‌ಗೂ ಅಧಿಕ ಡಬರೀಜ್‌ (ಕಲ್ಲು, ಮಣ್ಣು, ತಗಡು) ರಾಶಿ ರಾಶಿ ಬಿದ್ದಿದೆ. ಅದನ್ನು ಯಾರೂ ತೆಗೆಯುವುದಿಲ್ಲ. ಅದನ್ನು ತೆಗೆದು, ಸ್ವಚ್ಛಗೊಳಿಸಲು 8 ಟ್ರ್ಯಾಕ್ಟರ್‌, 50 ಕಾರ್ಮಿಕರು, 2 ಜೆಸಿಬಿ ಯಂತ್ರ ಮೀಸಲಿಡಲಾಗಿದೆ. ಪ್ರತಿದಿನ ಒಂದೊಂದು ವಾರ್ಡ್‌ನಲ್ಲಿ ತಂಡ ಸ್ವಚ್ಛತಾ ಕಾರ್ಯ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ರಸ್ತೆ, ಚರಂಡಿಗಳಲ್ಲಿ ರಾತ್ರೋರಾತ್ರಿ ಕಸ ಸುರಿಯುತ್ತಿರುವುದು ಕಂಡು ಬರುತ್ತಿದೆ. ಹಗಲೆಲ್ಲಾ ಸ್ವಚ್ಛವಾಗಿದ್ದ ಜಾಗ ರಾತ್ರೋರಾತ್ರಿ ಕಸದ ಕೊಂಪೆಯಾಗುತ್ತದೆ. ಹೀಗೆ ಕಸ ಹಾಕಿ ನಿರ್ಭೀತಿಯಿಂದ ಮನೆಗೆ ಹೋಗುವವರ ವಿರುದ್ಧ ಪಾಲಿಕೆ ಕಾರ್ಯಾಚರಣೆ ಕೈಗೊಳ್ಳಲಿದೆ. ಅಂತಹವರಿಗೆ ಮೊದಲ ₹500, 2ನೇ ಸಲವಾದರೆ ₹1, ಮೂರನೇ ಬಾರಿಗೆ ₹3 ಸಾವಿರ ದಂಡ ವಿಧಿಸಲಾಗುತ್ತದೆ. ಈ ಕಾರ್ಯಕ್ಕಾಗಿ ನಿವೃತ್ತ ಯೋಧರನ್ನು ಮಾರ್ಷಲ್ ಗಳಾಗಿ ಪಾಲಿಕೆ ನೇಮಿಸಲಿದೆ ಎಂದು ಅವರು ತಿಳಿಸಿದರು.

ಕಸ ಸುರಿಯುವವರಿಗೆ ದಂಡ ವಿಧಿಸುವುದಲ್ಲದೇ, ಅಂತಹವರ ಮನೆಗೆ ಹೋಗಿ ಮಾರ್ಷಲ್‌ಗಳು ಸ್ವಚ್ಛತೆ ಬಗ್ಗೆ ತಿಳಿ ಹೇಳಲಿದ್ದಾರೆ. ಸಾಮಾನ್ಯ ಸಭೆಯಲ್ಲೂ ಮಾರ್ಷಲ್‌ಗಳ ನೇಮಕದ ಬಗ್ಗೆ ಚರ್ಚೆಯಾಗಿದೆ. ಕಾರ್ಮಿಕ ಇಲಾಖೆ ಕಾಯ್ದೆ ಪ್ರಕಾರ ಮಾರ್ಷಲ್‌ಗಳಿಗೆ ವೇತನ, ಪಿಎಫ್‌, ಇಎಸ್‌ಐ ಸೇರಿದಂತೆ ಯಾವೆಲ್ಲಾ ಸೌಲಭ್ಯ ನೀಡಬೇಕೆಂಬ ಬಗ್ಗೆ ಚರ್ಚೆ ನಡೆಸಿದೆ. ಆ ನಂತರ ಮಾರ್ಷಲ್‌ಗಳ ನೇಮಕ ಪ್ರಕ್ರಿಯೆಗೆ ಚುರುಕು ನೀಡುತ್ತೇವೆ. ಕಸ ಸುರಿಯುವವರಿಗೆ ಪಾಲಿಕೆ ಆರೋಗ್ಯ ನಿರೀಕ್ಷಕರಿಗಷ್ಟೇ ದಂಡ ವಿಧಿಸುವ ಅಧಿಕಾರ ಇದೆ. ಅದನ್ನು ಮಾರ್ಷಲ್‌ಗಳಿಗೂ ನೀಡುತ್ತೇವೆ ಎಂದು ಅವರು ಮಾಹಿತಿ ನೀಡಿದರು.

ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರು ಆಸ್ತಿ ತೆರಿಗೆ, ನೀರಿನ ಕರ, ಯುಜಿಡಿ ಶುಲ್ಕ, ಉದ್ದಿಮೆ ಪರವಾನಿಗೆ ಶುಲ್ಕ ಕಾಲಕಾಲಕ್ಕೆ ಪಾವತಿಸಬೇಕು. ಶೇ.50ರಷ್ಟು ಜನರು ತೆರಿಗೆ ಪಾವತಿಸಿದ್ದಾರೆ. ಉಳಿದವರು ನಿಯಮಿತವಾಗಿ ಪಾವತಿಸುತ್ತಿಲ್ಲ. 3-4 ವರ್ಷ ಬಿಟ್ಟಿದ್ದಕ್ಕೆ ತೆರಿಗೆ ಅಧಿಕವಾಗಿದ್ದು, ರಿಯಾಯಿತಿ ನೀಡುವಂತೆ ಕೇಳುತ್ತಾರೆ. ರಿಯಾಯಿತಿ ನೀಡಲು ಅವಕಾಶ ಇಲ್ಲ. ಹಾಗಾಗಿ ಎಲ್ಲರೂ ಪಾಲಿಕೆಗೆ ಕಟ್ಟಬೇಕಾದ ಕಂದಾಯ, ಶುಲ್ಕ ಪಾವತಿಸಬೇಕು. ಒಂದು ವೇಳೆ ತೆರಿಗೆ ಪಾವತಿಸದಿದ್ದರೆ ಅಧಿಕಾರಿಗಳು ಸ್ಥಳದಲ್ಲೇ ದಂಡ ಸಮೇತ ತೆರಿಗೆ, ಶುಲ್ಕ ವಸೂಲಿಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉಪ ಮೇಯರ್ ಶಾಂತಕುಮಾರ ಸೋಗಿ, ಆಯುಕ್ತೆ ರೇಣುಕಾ, ಪಾಲಿಕೆ ಸದಸ್ಯರಾದ ಪಾಮೇನಹಳ್ಳಿ ನಾಗರಾಜ, ಕಬೀರ ಖಾನ್, ಜಗದೀಶ, ಎಂ.ಆರ್.ಸಿದ್ದಿಕ್‌, ಯುವ ಮುಖಂಡ ಮಹಬೂಬ್ ಬಾಷಾ ಇತರರು ಇದ್ದರು. ನವೆಂಬರ್‌ನಿಂದ ಇ-ಸ್ವತ್ತು ಆಂದೋಲನ: ಚಮನ್

ದಾವಣಗೆರೆ: ಪಾಲಿಕೆ ವ್ಯಾಪ್ತಿಯಲ್ಲಿ ನವೆಂಬರ್‌ನಿಂದ ವಾರ್ಡ್‌ವಾರು ಇ-ಆಸ್ತಿ ಆಂದೋಲನ ಆರಂಭಿಸಲಿದ್ದು, ಎಲ್ಲಾ ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿಸಿದ ಚಲನ್‌, ಇಸಿ, ಮನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಮೇಯರ್ ಕೆ. ಚಮನ್ ಸಾಬ್ ಸೂಚಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಿಂದ ಆಂದೋಲನದ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರ ನಿಗದಿತ ದಿನಗಳಿಂದ ಆಯಾ ವಾರ್ಡ್‌ಗಳಲ್ಲಿ ಸ್ಥಳದಲ್ಲೇ ಇ-ಸ್ವತ್ತು ನೀಡಲಾಗುವುದು. ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳಲ್ಲಿ ಬೆಳೆದ ಗಿಡಗಂಟಿಗಳನ್ನು ತಾವೇ ಸ್ವಚ್ಛಗೊಳಿಸಬೇಕು. ತಪ್ಪಿದರೆ ಪಾಲಿಕೆಯಿಂದ ದಂಡ ವಿಧಿಸುವ ಜತೆಗೆ ಪ್ರತಿ ಚದರ ಅಡಿಗೆ ಇಂತಿಷ್ಟು ಹಣ ವಸೂಲು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಲಸಿರಿ ಯೋಜನೆ 14ರ ವಲಯದಲ್ಲಿ ಆರಂಭವಾಗಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಹೆಚ್ಚಿನ ಬಿಲ್ ಬಂದರೆ, ನಳ ಸಂಪರ್ಕ ಮತ್ತಿತರೆ ತೊಂದರೆ ಸೇರಿದಂತೆ ಯಾವುದೇ ಸಮಸ್ಯೆಗೆ ಮೊ: 90365-44419ಗೆ ಕರೆ ಮಾಡಬೇಕು. ಪಾಲಿಕೆ ಮುಖ್ಯ ಕಚೇರಿಯಲ್ಲಿ ಹೆಲ್ಪ್‌ ಡೆಸ್ಕ್‌ ಪ್ರಾರಂಭಿಸುತ್ತಿದ್ದು, ಸಾರ್ವಜನಿಕರು ಏನಾದರೂ ಕುಂದು ಕೊರತೆಗಳಿದ್ದಲ್ಲಿ ಅಥವಾ ಪಾಲಿಕೆಯಿಂದ ನೀಡುವ ಸೇವೆಗಳಲ್ಲಿ ವ್ಯತ್ಯಯ ಉಂಟಾದಲ್ಲಿ ಹೆಲ್ಪ್ ಡೆಸ್ಕ್ ಸಂಪರ್ಕಿಸುವುದು ಎಂದು ತಿಳಿಸಿದರು.