ರಂಗಯ್ಯನ ಜಲಾಶಯದ ತೂಬು ಸ್ವಚ್ಛತೆ

| Published : Oct 20 2024, 01:54 AM IST

ಸಾರಾಂಶ

ಮೊಳಕಾಲ್ಮುರು: ಕ್ರೇಸ್ ಗೇಟ್‌ಗಳ ಮೂಲಕ ವ್ಯರ್ಥವಾಗಿ ಆಂಧ್ರ ಪಾಲಾಗುತ್ತಿರುವ ರಂಗಯ್ಯನ ದುರ್ಗ ಜಲಾಶಯದ ನೀರನ್ನು ಹಿರೇಕೆರೆಹಳ್ಳಿ ಕೆರೆಗೆ ಹರಿಸಲು ಜಲಾಶಯದ ತೂಬನ್ನು ಸ್ವಚ್ಛಗೊಳಿಸಲು ಮುಳುಗು ತಜ್ಞರು ಮುಂದಾಗಿದ್ದಾರೆ.

ಮೊಳಕಾಲ್ಮುರು: ಕ್ರೇಸ್ ಗೇಟ್‌ಗಳ ಮೂಲಕ ವ್ಯರ್ಥವಾಗಿ ಆಂಧ್ರ ಪಾಲಾಗುತ್ತಿರುವ ರಂಗಯ್ಯನ ದುರ್ಗ ಜಲಾಶಯದ ನೀರನ್ನು ಹಿರೇಕೆರೆಹಳ್ಳಿ ಕೆರೆಗೆ ಹರಿಸಲು ಜಲಾಶಯದ ತೂಬನ್ನು ಸ್ವಚ್ಛಗೊಳಿಸಲು ಮುಳುಗು ತಜ್ಞರು ಮುಂದಾಗಿದ್ದಾರೆ.

ಭದ್ರಾ ಜಲಾಶಯದ ಒಂಬತ್ತು ಮುಳುಗು ತಜ್ಞರ ತಂಡ ರಂಗಯ್ಯನದುರ್ಗ ಜಲಾಶಯದಲ್ಲಿ ಬೀಡು ಬಿಟ್ಟಿದ್ದು, ಕಳೆದೆರಡು ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಜಲಾಶಯದ ತೂಬಿನಲ್ಲಿರುವ ಮಣ್ಣಿನ ಚೀಲಗಳನ್ನು ತೆಗೆಯಲು ಸ್ಕೂಬಾ ಡೈವರ್ ಗಳು ಹರಸಾಹಸ ಪಡುತ್ತಿದ್ದಾರೆ.ತೀವ್ರ ಬರಗಾಲದಿಂದ ತಾಲೂಕಿನ ಏಕೈಕ ಜೀವನಾಡಿ ರಂಗಯ್ಯನ ದುರ್ಗಜಲಾಶವು ದಶಕಗಳ ಕಾಲ ಬರ್ತಿಯಾಗಿರಲಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಉತ್ತಮ ಮಳೆಯಿಂದ ಭರ್ತಿಯಾಗಿತ್ತು. ತೂಬಿನ ಮೂಲಕ ನೀರು ಪೋಲಾಗುತ್ತಿತ್ತು. ಇದರಿಂದಾಗಿ ಮರಳಿನ ಚೀಲ ಹಾಗು ಮಣ್ಣನ್ನು ಹಾಕಿ ತೂಬನ್ನು ಭದ್ರ ಪಡಿಸಿ ನೀರು ಹೊರ ಹೋಗುವುದನ್ನು ತಡೆಯಲಾಗಿತ್ತು. ಆದರೆ ಈ ಬಾರಿ ಸುರಿದ ಭಾರಿ ಮಳೆಯಿಂದ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿ ಕ್ರೇಸ್ ಗೇಟ್ ಗಳನ್ನು ಎತ್ತಿ ನದಿಗೆ ನೀರು ಹರಿಸಲಾಗಿದೆ.

ಚಿನ್ನ ಹಗರಿ ನದಿಯ ಮೂಲಕ ಆಂಧ್ರ ಪಾಲಾಗುತ್ತಿರುವ ಅಪಾರ ಪ್ರಮಾಣದ ನೀರನ್ನು ತೂಬಿನ ಮೂಲಕ ತಾಲೂಕಿನ ಹಿರೇಕೆರೆ ಹಳ್ಳಿ ಕೆರೆಗೆ ಹರಿಸಲು ಸಾರ್ವಜನಿಕರಿಂದ ಆಗ್ರಹಿಸಿದ್ದರು. ಪರಿಣಾಮವಾಗಿ ಸಂಬಂಧಿಸಿದ ಅಧಿಕಾರಿಗಳು ಭದ್ರಾ ಡ್ಯಾಂ ನ ಮುಳುಗು ತಜ್ಞರು ಸಹಾಯ ಪಡೆದು ತೂಬು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.ಈಗಾಗಲೇ 300ಕ್ಕೂ ಮರಳಿನ ಚೀಲಗಳನ್ನು ಮೇಲಕ್ಕೆತ್ತಿರುವ ಮುಳುಗು ತಜ್ಞರ ತಂಡ ಇಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಸ್ಕೂಬಾ ಡೈವರ್‌ಗಳು ಉಸಿರಾಟಕ್ಕಾಗಿ ಆಕ್ಸಿಜನ್ ಸಿಲೆಂಡರ್ ಗಳನ್ನು ಬಳಸಿಕೊಂಡು ಭಾರವಾದ ಚೀಲಗಳನ್ನು ಮೇಲಕ್ಕೆಎತ್ತುತ್ತಿದ್ದಾರೆ.

ಇನ್ನೆರಡು ದಿನಗಳಲ್ಲಿ ಅಷ್ಟು ಚೀಲಗಳನ್ನು ತೆರವುಗೊಳಿಸಿ ತೂಬನ್ನು ಸ್ವಚ್ಛಗೊಳಿಸಿ ತೂಬಿನ ಮೂಲಕ ನೀರು ಹರಿಯಲು ಅನುವು ಮಾಡಿಕೊಡಲಾಗವುದು ಎಂದು ಮುಳುಗು ತಜ್ಞ ಮಹಾದೇವಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.