ಹಗರಿಬೊಮ್ಮನಹಳ್ಳಿ: ಪರಿಸರದ ಸ್ವಚ್ಛತೆ ಹಾಗೂ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಭವಿಷ್ಯದ ಪೀಳಿಗೆಯ ಉತ್ತಮ ಆರೋಗ್ಯಕ್ಕೆ ಪರಿಸರ ಸಂರಕ್ಷಣೆ ಪೂರಕವಾಗಿದೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿಚಿಡಿ ಕೊಟ್ರೇಶ್ ಪ್ರತಿಪಾದಿಸಿದರು.

ಪಟ್ಟಣದ ಈಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಯುವ ಮೋರ್ಚಾದಿಂದ ಗುರುವಾರ ಆಯೋಜಿಸಲಾಗಿದ್ದ ಸಂಘಟನಾತ್ಮಕ ಸಭೆ, ಸ್ವಚ್ಛತಾ ಅಭಿಯಾನ ಮತ್ತು ತಾಯಿಯ ಹೆಸರಲ್ಲಿ ಸಸಿ ನೆಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಿತರಾಗಿ ಯುವ ಮೋರ್ಚಾ ಕಾರ್ಯಕರ್ತರು ಪರಿಸರ ಸ್ವಚ್ಛತೆಗೆ ಮುಂದಾಗಬೇಕು. ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ತಾಯಿಯ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮವು ತಾಯಿಗೆ ಗೌರವ ಸೂಚಿಸುವುದಲ್ಲದೇ ಪರಿಸರ ಕಾಳಜಿಯನ್ನೂ ಸಮುದಾಯದಲ್ಲಿ ವ್ಯಕ್ತಪಡಿಸಿದಂತಾಗಿದೆ. ಪ್ರತಿಯೊಬ್ಬರು ಕನಿಷ್ಠ ಒಂದು ಸಸಿ ನೆಡುವ ಮೂಲಕ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕೋರಿದರು.

ಯುವ ಮೋರ್ಚಾ ಸಹಿತ ಪಕ್ಷದ ಪ್ರತಿ ಹಂತದ ಕಾರ್ಯಕರ್ತರು ಪಕ್ಷ ನಿಷ್ಠೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಶ್ರಮಿಸಬೇಕು. ಭಾರತದ ದೀರ್ಘಾವಧಿಯ ಪ್ರಧಾನಮಂತ್ರಿಯಾಗಿ ಉತ್ತಮ ಆಡಳಿತ ನೀಡಿರುವ ನರೇಂದ್ರ ಮೋದಿ ಅವರಿಗೆ ಭಾರತದ ಜನತೆ ಮುಂದಿನ ದಿನಗಳಲ್ಲೂ ಅಧಿಕಾರ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿಗಳಾದ ಕೆ.ಎಚ್.ಎಂ. ಸಚಿನಕುಮಾರ್, ಸಂಗಮೇಶ್ ಕಡೇಮನಿ, ಹಗರಿಬೊಮ್ಮನಹಳ್ಳಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಮಾಲವಿ, ಎಚ್.ರಾಘವೇಂದ್ರ, ಮಹಾಂತೇಶ್, ಮಣಿಕಂಠ, ಶಶಿಕುಮಾರ್, ಸಂದೀಪ್ ಬ್ಯಾಟಿ, ವಿಕಾಸ್ ರೆಡ್ಡಿ, ಚಿರಂಜೀವಿ, ಗುರು, ಪರಮೇಶ್ವರನಾಯ್ಕ, ಪ್ರಕಾಶ್ ಹಾಗೂ ಜಿ.ವೀರೇಶ್ ಮತ್ತಿತರರಿದ್ದರು.


ಹಗರಿಬೊಮ್ಮನಹಳ್ಳಿಯ ಈಶ್ವರ ದೇವಸ್ಥಾನದ ಆವರಣದಲ್ಲಿ ವಿಜಯನಗರ ಜಿಲ್ಲಾ ಯುವ ಮೋರ್ಚಾ ವತಿಯಿಂದ ತಾಯಿಯ ಹೆಸರಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಗುರುವಾರ ಚಾಲನೆ ನೀಡಿದರು.