ಸಾರಾಂಶ
ತಕ್ಷಣ ಸ್ಮಶಾನ ಭೂಮಿಯ ಮೋಜಣಿ ಮಾಡಿ ಒತ್ತುವರಿಯನ್ನು ತೆರವುಗೊಳಿಸಿ ಕೊಟ್ಟು ಅಂತ್ಯ ಸಂಸ್ಕಾರ ವಿಧಿಗಳನ್ನು ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಮನವಿ
ಹಳಿಯಾಳ: ಶತಮಾನಗಳಿಂದ ಬಳಕೆಯಾಗುತ್ತಿದ್ದ ತಮ್ಮ ಸಮುದಾಯದ ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ಚಲವಾದಿ ಸಮುದಾಯದವರು ಆಗ್ರಹಿಸಿದ್ದಾರೆ.
ಶನಿವಾರ ಚಲವಾದಿ ಸಮುದಾಯದ ನಿಯೋಗವು ತಾಲೂಕ ಆಡಳಿತ ಸೌಧಕ್ಕೆ ತೆರಳಿ ಶಿರಸ್ತೇದಾರ್ ಅನಂತ ಚಿಪ್ಪಲಗಟ್ಟಿ ಅವರಿಗೆ ಮನವಿ ಸಲ್ಲಿಸಿತು. ಗುತ್ತಿಗೇರಿ ಹಾಗೂ ಹವಗಿ ಗ್ರಾಮದ ಗಡಿಯಲ್ಲಿನ 25 ಅಡಿ ಅಗಲ ಹಾಗೂ 600 ಅಡಿ ಉದ್ದ ವಿಸ್ತೀರ್ಣವುಳ್ಳ ಯಾರದೇ ಮಾಲೀಕತ್ವವಿರದ ಖಾಲಿ ಜಮೀನನ್ನು ಅನಾದಿಕಾಲದಿಂದಲೂ ಚಲವಾದಿ ಸಮುದಾದಯದ ಪೂರ್ವಜರು ಶವ ಹೂಳಲು ಉಪಯೋಗಿಸುತ್ತಾ ಬಂದಿದ್ದಾರೆ. ಹೀಗಿರುವಾಗ ಕೆಲವು ರೈತರು ಈ ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಿದ್ದು, ತಕ್ಷಣ ಸ್ಮಶಾನ ಭೂಮಿಯ ಮೋಜಣಿ ಮಾಡಿ ಒತ್ತುವರಿಯನ್ನು ತೆರವುಗೊಳಿಸಿ ಕೊಟ್ಟು ಅಂತ್ಯ ಸಂಸ್ಕಾರ ವಿಧಿಗಳನ್ನು ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ತಾಲೂಕು ಚಲವಾದಿ ಸಮುದಾಯದ ಪ್ರಮುಖರು ಹಾಗೂ ಶ್ರೀ ಚವಾಟೆಪ್ಪಾ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಸಜ್ಜನ ಚಲವಾದಿ, ಮಂಜುನಾಥ ಚಲವಾದಿ, ಅಶೋಕ ಕುಕಡೊಳ್ಳಿ, ಚಂದ್ರಕಾಂತ ಆಯಟ್ಟಿ, ರಾಜಪ್ಪ ಕಾಕತೇಕರ ಹಾಗೂ ತುಕಾರಾಮ ಜಾವಳ್ಳಿ ಇದ್ದರು.