ಸಾರಾಂಶ
ಜನಸ್ಪಂದನಾ ವಿಭಾಗಕ್ಕೆ ಸಲ್ಲಿಸಿದ್ದ ಹಲವಾರು ಐಪಿಜಿಆರ್‌ಎಸ್ ದೂರುಗಳಿಗೆ ಪದೇ ಪದೇ ಅದೇ ದಾಖಲೆಗಳನ್ನು ಅಪ್ಲೋಡ್ ಮಾಡಿ ದೂರನ್ನು ಮುಕ್ತಾಯ ಮಾಡಿದ್ದು ಅರ್ಜಿದಾರರ ಕುಂದು ಕೊರತೆ ನಿವಾರಣೆಯಾಗಿಲ್ಲ
ಕನ್ನಡಪ್ರಭ ವಾರ್ತೆ ಹಿರಿಯೂರು
ನಗರಸಭೆ ವ್ಯಾಪ್ತಿ ಮೂರನೇ ವಾರ್ಡ್‌ನ ಖಾತೆ ನಂ. 2650-56-2650ರಲ್ಲಿ ಕಟ್ಟಿರುವ ಮನೆಗೆ ಪೂರ್ವ ಪಶ್ಚಿಮದಲ್ಲಿ ಕಾಂಪೌಂಡ್ ಗೋಡೆ ಅತಿಕ್ರಮಣ ಮಾಡಿ ಕಟ್ಟಿದ್ದು ಅದನ್ನು ತೆರವು ಮಾಡಿಸಲು ನಗರಸಭೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ. ರಂಗನಾಥ್ ಆರೋಪಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಇದೇ ಮೇ.2ರಂದು ಅತಿಕ್ರಮಣ ತೆರವುಗೊಳಿಸಲು ಸಲ್ಲಿಸಿದ ಅರ್ಜಿ ಮೇಲೆ ಅಂದಿನ ಪೌರಾಯುಕ್ತರಾದ ಶ್ರೀನಿವಾಸ್ ಜಾಧವ್ ಅತಿ ತುರ್ತು ಎಂದು ನಮೂದಿಸಿ ಆರ್‌ಐ, ಆರ್‌ಓಗೆ ತಕ್ಷಣ ಸ್ಥಳ ಪರಿಶೀಲಿಸಿ ಅತಿಕ್ರಮಣವಾದ ಬಗ್ಗೆ ಖಚಿತಪಡಿಸಿಕೊಂಡು ಮುಂದಿನ ಕ್ರಮಕ್ಕೆ ವರದಿ ಮಂಡಿಸಿರಿ ಎಂದು ಆದೇಶ ಮಾಡಿದ್ದರು.
ಆರ್‌ಐ, ಆರ್‌ಓ ಹಾಗೂ ಜೆಇ, ಎಇಇ ಜಂಟಿ ಸರ್ವೇ ಮಾಡಿ ಒತ್ತುವರಿ ಜಾಗಕ್ಕೆ ಮಾರ್ಕ್ ಮಾಡಿ ನೀಡಿದ ವರದಿ ಮೇರೆಗೆ ಪೌರಾಯುಕ್ತ ಎಚ್.ಮಹಾಂತೇಶ್ 7 ದಿನಗಳ ಒಳಗಾಗಿ ಒತ್ತುವರಿ ತೆರವು ಮಾಡಿಸಿಕೊಡಬೇಕೆಂದು ಮತ್ತೆ ಆರ್‌ಓ ಮತ್ತು ಜೆಇ ಯವರಿಗೆ ಆದೇಶ ಮಾಡಿದ್ದರು. ಆದಾಗ್ಯೂ ನಿಯಮಾನುಸಾರ ಒತ್ತುವರಿ ತೆರವು ಮಾಡಿಸಿಲ್ಲ.ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆ ಸಾರ್ವಜನಿಕ ಏಕೀಕೃತ ಕುಂದುಕೊರತೆ ಜನಸ್ಪಂದನಾ ವಿಭಾಗಕ್ಕೆ ಸಲ್ಲಿಸಿದ್ದ ಹಲವಾರು ಐಪಿಜಿಆರ್‌ಎಸ್ ದೂರುಗಳಿಗೆ ಪದೇ ಪದೇ ಅದೇ ದಾಖಲೆಗಳನ್ನು ಅಪ್ಲೋಡ್ ಮಾಡಿ ದೂರನ್ನು ಮುಕ್ತಾಯ ಮಾಡಿದ್ದು ಅರ್ಜಿದಾರರ ಕುಂದು ಕೊರತೆ ನಿವಾರಣೆಯಾಗಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ನಗರಸಭೆ ಅಧಿಕಾರಿಗಳಿಗೆ ನಿಯಮಾನುಸಾರ ಒತ್ತುವರಿ ತೆರವು ಮಾಡಿಸಿಕೊಡುವಂತೆ ಆದೇಶ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.