ಕೊಟ್ಟೂರು ಸ್ವಾತಂತ್ರ್ಯ ಯೋಧರ ತವರು

| Published : Aug 15 2024, 01:45 AM IST

ಸಾರಾಂಶ

1933ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕೊಟ್ಟೂರು ಪ್ರಮುಖ ಕೇಂದ್ರವಾಗಿತ್ತು.

ಜಿ.ಸೋಮಶೇಖರ

ಕೊಟ್ಟೂರು: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೊಟ್ಟೂರಿಗರ ಪಾತ್ರ ಅನನ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ಪಟ್ಟಣ, ತಾಲೂಕಿನ 80ಕ್ಕೂ ಹೆಚ್ಚು ಮಂದಿ ತೊಡಗಿಸಿಕೊಂಡಿದ್ದರು ಎಂಬ ಕಾರಣದಿಂದ ಕೊಟ್ಟೂರು ಸ್ವಾತಂತ್ರ್ಯ ಯೋಧರ ತವರು ಎನ್ನುವ ಪ್ರಖ್ಯಾತಿ ಪಡೆದಿದೆ.

ಪಟ್ಟಣದ ಗೊರ್ಲಿ ಶರಣಪ್ಪ ಮತ್ತು ಪತ್ನಿ ರುದ್ರಮ್ಮ, ಸಹೋದರಾದ ಬಣಕಾರ ಸಿದ್ದಲಿಂಗಪ್ಪ, ಬಣಕಾರ ಗೌಡಪ್ಪ, ತೂಲಹಳ್ಳಿ ಶೆಟ್ರು ಗುರುಲಿಂಗಪ್ಪ, ಡಾ.ಅಲಬೂರು ನಂಜಪ್ಪ, ಡಾ.ಸಿದ್ದನಾಥ, ಕೆ.ಎಸ್. ಅಡವಿಗೌಡ, ಕೆಲ್ಸೇರ್ ತಿಮ್ಮಪ್ಪ ಮತ್ತಿತರ 35 ಹೋರಾಟಗಾರರು ಇದ್ದರು. ಅಲ್ಲದೆ, ತಾಲೂಕಿನ ಉಜ್ಜಿಯನಿ ಗ್ರಾಮದ 6 ಜನ, ತೂಲಹಳ್ಳಿಯ ಐವರು, ಹರಾಳು ಗ್ರಾಮದ ನಾಲ್ವರು, ಕೋಗಳಿ ಗ್ರಾಮದ ಇಬ್ಬರು ಮತ್ತು ಕೆ.ಅಯ್ಯನಹಳ್ಳಿಯ ಒಬ್ಬರು ಸೇರಿದಂತೆ 80ಕ್ಕೂ ಅಧಿಕ ಮಂದಿ ಬಳ್ಳಾರಿ ಸೆಂಟ್ರಲ್ ಜೈಲ್ ನಲ್ಲಿ ಹೋರಾಟಗಾರರಾಗಿ ಬಂಧಿಗಳಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರೆಲ್ಲ ಈಗ ಬಹುತೇಕ ನಿಧನರಾಗಿದ್ದಾರೆ.

1933ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕೊಟ್ಟೂರು ಪ್ರಮುಖ ಕೇಂದ್ರವಾಗಿತ್ತು. ಹೋರಾಟಗಾರಾಗಿದ್ದ ಬಣಕಾರ ಗೌಡಪ್ಪ ಗೌಡ, ಡಾ.ಸಿದ್ದನಾಥ ಬಳ್ಳಾರಿಯವರು ದೀನ ಸೇವಾಶ್ರಮ ಸ್ಥಾಪಿಸಿದರು. ಇದೇ ವೇಳೆ ಭಾರತ ವ್ಯಾಯಾಮ ಶಾಲೆಯನ್ನು ಗೊರ್ಲಿ ಶರಣಪ್ಪ ಸ್ಥಾಪಿಸಿದರು. ಇದನ್ನು ಕಮಲಾದೇವಿ ಛಟ್ಟೋಪಾಧ್ಯಾಯರು ಉದ್ಘಾಟಿಸಿದರು.

ಕರ್ನಾಟಕ ಉಚಿತ ವಾಚನಾಲಯ, ವೀರಶೈವ ವಿದ್ಯಾಭಿವೃದ್ಧಿ ಹಾಸ್ಟೆಲ್ ಸ್ವಾತಂತ್ರ್ಯ ಹೋರಾಟಗಾರರ ಕಾರ್ಯ ಚಟುವಟಿಕೆಗಳಲ್ಲಿ ಪ್ರಮುಖವಾಗಿತ್ತು. ಮದ್ಯಪಾನ ನಿಷೇಧ, ವಿದೇಶಿ ವಸ್ತುಗಳ ಬಹಿಷ್ಕಾರ, ಅಸ್ಪೃಶ್ಯತಾ ನಿವಾರಣೆ, ಚಲೇಜಾವ್ ಚಳವಳಿ, ಖಾದಿ ಪ್ರಚಾರ, ಅಸಹಕಾರ ಚಳವಳಿ, ಮತ್ತಿತರ ಹೋರಾಟಗಳಿಗೆ ಪ್ರಮುಖ ಸ್ಥಳವಾಗಿತ್ತು.

ಗಾಂಧಿ ತೋಟ:

ಮಹಾತ್ಮ ಗಾಂಧೀಜಿ 1934ರಲ್ಲಿ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಹೋರಾಟವನ್ನು ಮನಗಂಡು ಕೊಟ್ಟೂರಿಗೆ ಆಗಮಿಸಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ ಹೋರಾಟಗಾರರಲ್ಲಿ ಸ್ಫೂರ್ತಿ ತುಂಬಿದರು. ಹರಿಜನ ಕೇರಿಯಲ್ಲಿದ್ದ ದೀನ ಸೇವಾಶ್ರಮಕ್ಕೆ ಭೇಟಿ ಕೊಟ್ಟು ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ಗಮನಿಸಿದ್ದರು. ಗಾಂಧೀಜಿ ಕೊಟ್ಟೂರಿಗೆ ಬಂದ ಕಾರಣಕ್ಕಾಗಿ ತೋಟನ ಗೌಡ ಎಂಬ ಸ್ವಾತಂತ್ರ್ಯ ಹೋರಾಟಗಾರ ತಮ್ಮ 6 ಎಕರೆ ತೋಟವನ್ನು ದೀನ ಸೇವಾಶ್ರಮಕ್ಕೆ ದಾನ ನೀಡಿದರು. ಅದಕ್ಕೆ ಗಾಂಧಿ ತೋಟ ಎಂದು ಹೆಸರಿಟ್ಟರು.

ತೇರಿನ ಮೇಲೆ ರಾಷ್ಟ್ರಧ್ವಜ:

ಇಲ್ಲಿನ ಕೊಟ್ಟೂರೇಶ್ವರ ರಥೋತ್ಸವ ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರೀಯ ಉತ್ಸವವಾಗಿತ್ತು. ರಥವನ್ನು ಎಳೆಯುವಾಗ ಇಬ್ಬರು ಯುವಕರು 80 ಅಡಿಗಿಂತ ಎತ್ತರದ ತೇರನ್ನು ಏರಿ ಕಳಸದ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದರು. ಇದು ಐತಿಹಾಸಿಕ ಸಂಗತಿಯಾಗಿ ದಾಖಲೆಯಾಗಿದೆ.

ಈ ಸಲದ ಸ್ವಾತಂತ್ರ್ಯೋತ್ಸವಕ್ಕೆ ಕೊಟ್ಟೂರು ಸೇರಿದಂತೆ ವಿವಿಧೆಡೆ ಮಹನೀಯರ ಹೋರಾಟ, ಕೊಡುಗೆಗಳನ್ನು ಸ್ಮರಿಸಿ ಕ್ಷೇತ್ರದೆಲ್ಲೆಡೆ ಲಕ್ಷ ಸಸಿ ನೆಡುವ ಅಭಿಯಾನ ಕೈಗೊಂಡಿದ್ದೇವೆ. ಈ ಮೂಲಕ ಅವರಿಗೆ ನಮನ ಸಲ್ಲಿಸುತ್ತಿದ್ದೇವೆ ಎನ್ನುತ್ತಾರೆ ಶಾಸಕ ಕೆ.ನೇಮಿರಾಜ್ ನಾಯ್ಕ್.

ಸ್ವಾತಂತ್ರ್ಯ ಚಳವಳಿಯಲ್ಲಿ ನಮ್ಮ ತಂದೆ, ದೊಡ್ಡಪ್ಪ ಮತ್ತಿತರರು ತೊಡಗಿಸಿಕೊಂಡಿದ್ದರು ಎಂಬುದು ನಮಗೆ ಹೆಮ್ಮೆ. ರಾಷ್ಟ್ರ ಹೋರಾಟಕ್ಕಾಗಿ ಶ್ರಮಿಸಿದ ಎಲ್ಲ ಮಹನೀಯರಿಗೆ ಕೋಟಿ ಕೋಟಿ ನಮನ ಎನ್ನುತ್ತಾರೆ ಸ್ವಾತಂತ್ರ್ಯ ಹೋರಾಟಗಾರರ ಪುತ್ರ ಕೊಟ್ಟೂರು ಬಣಕಾರ ಕೆಂಚಪ್ಪ.