ಬೇಲೂರಿನ ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ ಗುಜರಿ ವಾಹನಗಳ ತೆರವು

| Published : Sep 12 2024, 01:54 AM IST

ಬೇಲೂರಿನ ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ ಗುಜರಿ ವಾಹನಗಳ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ಪಟ್ಟಣದ ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್, ಹಳೇಬೀಡು ರಸ್ತೆ,ಹಾಸನ , ಚಿಕ್ಕಮಗಳೂರು ರಸ್ತೆಯ ಫೂಟ್ಪಾತ್‌ನಲ್ಲಿ ಇಟ್ಟಿದ್ದ ಬೋರ್ಡ್ ಹಾಗೂ ಇನ್ನಿತರ ವಸ್ತುಗಳನ್ನು ತೆರವು ಮಾಡಲಾಯಿತು. ಪಟ್ಟಣದ ಹಳೇಬೀಡು, ಹಾಸನ, ಚಿಕ್ಕಮಗಳೂರು ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ವಾಹನ ರಿಪೇರಿ ಸೇರಿದಂತೆ ಹಲವು ಬಗೆಯ ವ್ಯಾಪಾರಿಗಳು ಪಾದಚಾರಿ ಮಾರ್ಗದಲ್ಲಿ ಇಟ್ಟಿದ್ದ ಬೋರ್ಡ್ ಹಾಗೂ ಗುಜರಿಗೆ ಸೇರುವ ಹಳೆಯ ವಾಹನಗಳನ್ನು ನಿಲ್ಲಿಸಿದ್ದು, ಇದರಿಂದ ಜನರಿಗೆ ತೊಂದರೆಯಾಗುತ್ತಿದ್ದ ಕಾರಣ ಪುರಸಭೆ ಅಧ್ಯಕ್ಷ ಎ. ಆರ್‌ ಅಶೋಕ್ ನೇತೃತ್ವದಲ್ಲಿ ಅವುಗಳನ್ನೆಲ್ಲಾ ತೆರವು ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ ಹಳೇಬೀಡು, ಹಾಸನ, ಚಿಕ್ಕಮಗಳೂರು ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ವಾಹನ ರಿಪೇರಿ ಸೇರಿದಂತೆ ಹಲವು ಬಗೆಯ ವ್ಯಾಪಾರಿಗಳು ಪಾದಚಾರಿ ಮಾರ್ಗದಲ್ಲಿ ಇಟ್ಟಿದ್ದ ಬೋರ್ಡ್ ಹಾಗೂ ಗುಜರಿಗೆ ಸೇರುವ ಹಳೆಯ ವಾಹನಗಳನ್ನು ನಿಲ್ಲಿಸಿದ್ದು, ಇದರಿಂದ ಜನರಿಗೆ ತೊಂದರೆಯಾಗುತ್ತಿದ್ದ ಕಾರಣ ಪುರಸಭೆ ಅಧ್ಯಕ್ಷ ಎ. ಆರ್‌ ಅಶೋಕ್ ನೇತೃತ್ವದಲ್ಲಿ ಅವುಗಳನ್ನೆಲ್ಲಾ ತೆರವು ಮಾಡಲಾಯಿತು. ಪಟ್ಟಣದ ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್, ಹಳೇಬೀಡು ರಸ್ತೆ,ಹಾಸನ , ಚಿಕ್ಕಮಗಳೂರು ರಸ್ತೆಯ ಫೂಟ್ಪಾತ್‌ನಲ್ಲಿ ಇಟ್ಟಿದ್ದ ಬೋರ್ಡ್ ಹಾಗೂ ಇನ್ನಿತರ ವಸ್ತುಗಳನ್ನು ತೆರವು ಮಾಡಲಾಯಿತು.

ಅಂಗಡಿಗಳ ಎದುರುಗಡೆ ಹಲವಾರು ವರ್ಷಗಳಿಂದ ಗುಜರಿಗೆ ಕಳಿಸುವ ಹಳೆಯ ಕಾರ್, ಬೈಕ್‌ಗಳನ್ನು ತೆರವುಗೊಳಿಸಿ ಸಂಬಂಧಪಟ್ಟ ಮಾಲೀಕರಿಗೆ ಮತ್ತೆ ರಸ್ತೆ ಪಕ್ಕಗುಜರಿಗೆ ಸೇರಿದ ಹಳೆಯ ವಾಹನಗಳನ್ನು ನಿಲ್ಲಿಸಬಾರದು ಎಂದು ಅಶೋಕ್ ತಾಕೀತು ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುನೆಸ್ಕೋ ಪಟ್ಟಿಗೆ ಸೇರಿಸುವ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವನ್ನು ಸುಂದರವಾಗಿಸಲು ಹಾಗೂ ಸ್ವಚ್ಛತೆಯಿಂದ ಕೂಡಿರಲು ಪುರಸಭೆ ವತಿಯಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಅದರಂತೆ ಮೊದಲಿಗೆ ನೆಹರು ನಗರದಲ್ಲಿ ಅಂಗಡಿ ಹಾಗೂ ಮೆಕ್ಯಾನಿಕ್ ಶಾಪ್ ಮುಂಭಾಗ ಫೂಟ್ಪಾತ್‌ ಒತ್ತುವರಿ ಮಾಡಲಾಗಿದೆ. ಅದನ್ನು ತೆರವುಗೊಳಿಸಿ ಅಂಗಡಿ ಮುಂಭಾಗ ರಸ್ತೆಬದಿಯಲ್ಲಿ ದೊಡ್ಡ ಬೋರ್ಡ್‌ಗಳನ್ನು ನೆಟ್ಟಿದ್ದು ಅದನ್ನು ನಮ್ಮ ಸಿಬ್ಬಂದಿಯ ಜೊತೆ ಸೇರಿ ತೆರವು ಕಾರ್ಯಾಚರಣೆ ಮಾಡಲಾಗಿದೆ. ಅಂಗಡಿಗಳ ಎದುರುಗಡೆ ಹಲವರು ವರ್ಷಗಳಿಂದ ಗುಜರಿಗೆ ಕಳಿಸುವ ಹಳೆಯ ಕಾರ್, ಬೈಕ್‌ಗಳನ್ನು ತೆರವುಗೊಳಿಸಲಾಗಿದೆ. ಫೂಟ್ಪಾತ್‌ನಲ್ಲಿ ನಡೆದಾಡಲು ಅವಕಾಶ ಕೊಡದೆ ದೊಡ್ಡ ಜನರೇಟರ್‌ ಇಟ್ಟಿದ್ದು ಅದನ್ನು ವ್ಯಾಪಾರಿಗಳ ವಿರೋಧದ ನಡುವೆ ತೆಗೆಸಲಾಗಿದೆ ಎಂದರು.

ವರ್ಷಗಳ ಹಿಂದೆ ನಿಷ್ಕ್ರಿಯವಾಗಿ ನಿಂತಿರುವ ವಾಹನಗಳನ್ನು ರಿಪೇರಿ ಮಾಡಲು ತಮ್ಮ ಅಂಗಡಿ ಮುಂಭಾಗದಲ್ಲಿ ನಿಲ್ಲಿಸಿದ್ದಾರೆ. ಇದರಿಂದ ವಾಹನಗಳನ್ನು ಸರಾಗವಾಗಿ ಪಾರ್ಕಿಂಗ್ ಮಾಡಲು ಹರಸಾಹಸ ಪಡಬೇಕಿದೆ. ಪಾದಚಾರಿ ಮಾರ್ಗ ಒತ್ತುವರಿ ಮಾಡಿದ್ದವರ ಮೇಲೆ ಪುರಸಭೆ ಈಗಾಗಾಲೇ ಎಚ್ಚರಿಕೆ ಕೊಟ್ಟು ಅವುಗಳನೆಲ್ಲಾ ತೆರವು ಮಾಡಿಸಲಾಗಿದೆ. ಪಟ್ಟಣದ ದೇವಸ್ಥಾನ ರಸ್ತೆ ಹಾಗೂ ಮುಖ್ಯ ರಸ್ತೆಗಳ ಫೂಟ್ಪಾತ್‌ನಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ ಇಟ್ಟಿದ್ದ ವಸ್ತುಗಳನ್ನು ತೆರವು ಮಾಡಿಸಲಾಗಿದೆ. ಇಷ್ಟಾಗಿ ಇವರು ಇದೇ ರೀತಿ ಮುಂದುವರಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಅವರ ವಸ್ತುಗಳನ್ನು ಪುರಸಭೆ ವಶಕ್ಕೆ ಪಡೆದುಕೊಳ್ಳಲಾಗುತ್ತದೆ ಹಾಗೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದರು.

ನಮ್ಮ ಪುರಸಭೆ ಸದಸ್ಯರು ಎಲ್ಲಾ ಒಟ್ಟಾಗಿ ಈ ತೆರವು ಕಾರ್ಯಾಚರಣೆ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಆದರೆ ಕೆಲವು ಪುರಸಭೆ ಸದಸ್ಯರು ಅಂಗಡಿ ಮಾಲೀಕರಿಗೆ ಕುಮ್ಮಕ್ಕು ನೀಡಿ ಫೂಟ್ಪಾತ್‌ ಜಾಗದಲ್ಲಿ ಅಂಗಡಿ ಸರಂಜಾಮುಗಳನ್ನು ಇಡುವಂತೆ ಉತ್ತೇಜಿಸುತ್ತಿದ್ದು, ಇಂತಹವರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟಾಗುತ್ತಿದೆ. ನಮ್ಮವರೇ ನಮಗೆ ತೊಂದರೆ ಕೊಟ್ಟರೆ ಹೇಗೆ. ನಾವು ಮಾಡುತ್ತಿರುವ ಕೆಲಸಗಳಿಗೆ ತಡೆ ಒಡ್ಡಲು ಶಾಸಕರ ಮೂಲಕ ಒತ್ತಡ ಹೇರಿಸಿದರೂ ನಾವು ಯಾವುದಕ್ಕೂ ಬಗ್ಗದೆ ನಮ್ಮ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಏನೇ ಅಡೆತಡೆ ತಂದರೂ ತಮ್ಮ ಅವಧಿಯಲ್ಲಿ ಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕು ಅದನ್ನು ಮಾಡೇ ಮಾಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್, ಸದಸ್ಯಾದ ಜಗದೀಶ್, ಪ್ರಭಾಕರ್, ಆರೋಗ್ಯಾಧಿಕಾರಿ ಲೋಹಿತ್ ಹಾಗೂ ಸಿಬ್ಬಂದಿ ಹಾಜರಿದ್ದರು.