ನಿರ್ವಹಣೆ ಇಲ್ಲದೆ ಮುಚ್ಚಿದ ಸಮುದಾಯ ಶೌಚಾಲಯ

| Published : Aug 11 2024, 01:45 AM IST

ಸಾರಾಂಶ

ಬುರುಡಗುಂಟೆ ಹೃದಯಭಾಗ ಹೀಗಾಗಿ ಇಲ್ಲಿಯೇ ಬ್ಯಾಂಕ್, ಆಸ್ಪತ್ರೆ, ಶಾಲೆಗಳು, ವಿದ್ಯಾರ್ಥಿ ನಿಲಯ, ದಿನಸಿ ಅಂಗಡಿ ಹಾಗೂ ಗ್ರಾಮ ಪಂಚಾಯಿತಿ ಕಚೇರಿಯೂ ಇದೆ. ಸಾರ್ವಜನಿಕರು ವ್ಯವಹಾರಕ್ಕಾಗಿ ನಿತ್ಯ ಬಂದು ಹೋಗುತ್ತಾರೆ. ಆದರೆ ಇಲ್ಲಿ ಶೌಚಾಲಯ ಸೌಲಭ್ಯವೇ ಇಲ್ಲ.

ಕನ್ನಡಪ್ರಭ ವಾರ್ತೆ ಚೇಳೂರುನೂತನ ಚೇಳೂರು ತಾಲೂಕಿನ ವ್ಯಾಪ್ತಿಗೆ ಒಳಪಡುವ ಬುರುಡಗುಂಟೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿರುವ ಸಮುದಾಯ ಶೌಚಾಲಯ ಸಾರ್ವಜನಿಕರ ಬಳಕೆಗೆ ಯೋಗ್ಯವಿಲ್ಲದೆ ಮುಚ್ಚಿದೆ. ಇದರಿಂದಾಗಿ ಸಾರ್ವಜನಿಕರು ಶೌಚಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬುರುಡಗುಂಟೆ ಗ್ರಾಮ ಪಂಚಾಯಿತಿ ಕೇಂದ್ರವು ಪ್ರಸಿದ್ಧ ಗಂಗಮ್ಮ ದೇವಸ್ತಾನ ಹೊಂದಿದ್ದು ಅತ್ಯಂತ ಪ್ರಸಿದ್ಧಿ ಪಡೆದಿದ್ದು ಪೂಜಾ ದಿನಗಳಲ್ಲಿ ನೂರಾರು ಭಕ್ತದಿಗಳು ಬರುತ್ತಾರೆ. ಇದರ ವ್ಯಾಪ್ತಿಗೆ ೧೪ ಗ್ರಾಮಗಳು ಒಳಪಡಲಿದ್ದು, ಎಂಟು ಸಾವಿರಕ್ಕೂ ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.

ಶೌಚಾಲಯ ನಿರ್ಮಾಣ: ಬುರುಡಗುಂಟೆ ಹೃದಯಭಾಗ ಹೀಗಾಗಿ ಇಲ್ಲಿಯೇ ಬ್ಯಾಂಕ್, ಆಸ್ಪತ್ರೆ, ಶಾಲೆಗಳು, ವಿದ್ಯಾರ್ಥಿ ನಿಲಯ, ದಿನಸಿ ಅಂಗಡಿ ಹಾಗೂ ಗ್ರಾಮ ಪಂಚಾಯಿತಿ ಕಚೇರಿಯೂ ಇದೆ. ಸಾರ್ವಜನಿಕರು ವ್ಯವಹಾರಕ್ಕಾಗಿ ನಿತ್ಯ ಬಂದು ಹೋಗುತ್ತಾರೆ. ಜನಪ್ರತಿನಿಧಿಗಳು ೨೦೧೮-೨೦೧೯ನೇ ಸಾಲಿನಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ೨ ಲಕ್ಷ ರು. ವೆಚ್ಚದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸಮುದಾಯ ಶೌಚಾಲಯವನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ಅದು ಸಾರ್ವಜನಿಕರ ಬಳಕೆಗೆ ಯೋಗ್ಯವಿಲ್ಲದೆ ಮುಚ್ಚಿದೆ.

ಇಲ್ಲಿಗೆ ಬರುವ ರೈತರು ಹಾಗೂ ಸಾರ್ವಜನಿಕರು ಮೂತ್ರ ಬಾಧೆ ತೀರಿಸಿಕೊಳ್ಳಲು ಗ್ರಾಪಂ ಎದುರಿಗೆ ಇರುವ ಸಮುದಾಯ ಶೌಚಾಲಯದ ಪಕ್ಕದ ಸಂದಿಯನ್ನು ಹಾಗೂ ದೂರದ ಪೊದೆಗಳು, ಗಿಡಗಂಟಿಗಳ ಬಳಿ ಹೋಗಬೇಕಾಗಿದೆ.ಶೌಚಾಲಯ ನಿರ್ವಹಣೆ ಕೊರತೆ

ಸ್ವಚ್ಛ ಭಾರತ್ ಯೋಜನೆಯಡಿ ನಿರ್ಮಾಣಗೊಂಡ ಸಮುದಾಯ ಶೌಚಾಲಯ ಸ್ವಚ್ಛತೆಯಿಲ್ಲದೆ ಗಬ್ಬು ನಾರುತ್ತಿದೆ. ಪುರುಷರ ಹಾಗೂ ಮಹಿಳೆಯರ ಶೌಚಾಲಯದ ಬಾಗಿಲಿಗೆ ಬೀಗ ಹಾಕಲಾಗಿದೆ. ಇದು ಗ್ರಾಮ ಪಂಚಾಯಿತಿ ಎದುರಲ್ಲೇ ಇದ್ದರೂ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ಸಾರ್ವಜನಿಕರ ಇದನ್ನು ಬಳಸುತ್ತಿಲ್ಲ. ಗ್ರಾಪಂ ಎದುರಿಗೆ ಇರುವ ಸಮುದಾಯ ಶೌಚಾಲಯಕ್ಕೆ ಅಡ್ಡಲಾಗಿ ಇದೆ ಎಂಬ ಕಾರಣಕ್ಕೆ ಅಲ್ಲಿದ್ದ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿ ವರ್ಷ ಕಳೆಯುತ್ತಾ ಬಂದರೂ ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಸ್ವಚ್ಛ ಭಾರತ್ ಯೋಜನೆಯಡಿ ಮೂತ್ರಾಲಯವನ್ನು ನಿರ್ಮಿಸಿದ್ದು, ಇದಕ್ಕೆ ವೆಚ್ಚ ಮಾಡಿದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎನ್ನುತ್ತಾರೆ ನಾಗರಿಕರು.

ಪೊಲೀಸ್‌ ಠಾಣೆಗೆ ಸೇರಿದ ಜಾಗ

ಈ ಬಗ್ಗೆ ಪ್ರತಿಕ್ರಿಯಿಸಿದ ಬುರುಡಗುಂಟೆ ಗ್ರಾಪಂ ಪಿಡಿಒ ಪಣೀಂದ್ರ, ಶೌಚಾಲಯವಿದ್ದ ಸ್ಥಳದಲ್ಲಿ ಮೊದಲು ಹಳೆ ಪೋಲಿಸ್ ಠಾಣೆ ಇತ್ತು. ಆದ್ದರಿಂದ ಜಾಗ ಪೋಲಿಸರಿಗೆ ಸಂಬಂಧಪಟ್ಟಿದ್ದು, ಅವರು ಕಾಂಪೌಂಡ್ ನಿರ್ಮಿಸುವ ಸಾಧ್ಯತೆ ಇದೆ. ಶೌಚಾಲಯದ ಕೀ ಸಹ ನಮ್ಮ ಬಳಿ ಇಲ್ಲ ಎಂದರು.