ಮೂಲಸೌಕರ್ಯಗಳಿಲ್ಲದೇ ಬಾಗಿಲು ಮುಚ್ಚಿದ ಸಣ್ಣ ಕೈಗಾರಿಕೆಗಳು

| Published : Nov 26 2023, 01:15 AM IST

ಮೂಲಸೌಕರ್ಯಗಳಿಲ್ಲದೇ ಬಾಗಿಲು ಮುಚ್ಚಿದ ಸಣ್ಣ ಕೈಗಾರಿಕೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕೆಎಸ್‌ಎಸ್‌ಐಡಿಸಿ (ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ)ಯ ದಿವ್ಯ ನಿರ್ಲಕ್ಷದಿಂದ ಪಟ್ಟಣದ ಮಾಸೂರು ರಸ್ತೆಯ ಪಕ್ಕದಲ್ಲಿರುವ ಕೈಗಾರಿಕೆ ಪ್ರದೇಶದಲ್ಲಿ ಮೂಲ ಸೌರ್ಕಯಗಳ ಕೊರತೆಯಿಂದ ಕೆಲವು ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿವೆ.೧೯೮೩-೮೪ರಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಗ್ರಾಮೀಣ ಪ್ರದೇಶದಲ್ಲಿ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಸ್ಥಾಪಿಸಿದರು. ಈ ಮೂಲಕ ಪಟ್ಟಣದಲ್ಲಿ ನಿಗಮದ ಶಾಖೆಯನ್ನು ಆರಂಭಿಸಲಾಗಿತ್ತು.

ರವಿ ಮೇಗಳಮನಿ

ಕನ್ನಡಪ್ರಭ ವಾರ್ತೆ ಹಿರೇಕೆರೂರು

ಕೆಎಸ್‌ಎಸ್‌ಐಡಿಸಿ (ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ)ಯ ದಿವ್ಯ ನಿರ್ಲಕ್ಷದಿಂದ ಪಟ್ಟಣದ ಮಾಸೂರು ರಸ್ತೆಯ ಪಕ್ಕದಲ್ಲಿರುವ ಕೈಗಾರಿಕೆ ಪ್ರದೇಶದಲ್ಲಿ ಮೂಲ ಸೌರ್ಕಯಗಳ ಕೊರತೆಯಿಂದ ಕೆಲವು ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿವೆ.

೧೯೮೩-೮೪ರಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಗ್ರಾಮೀಣ ಪ್ರದೇಶದಲ್ಲಿ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಸ್ಥಾಪಿಸಿದರು. ಈ ಮೂಲಕ ಪಟ್ಟಣದಲ್ಲಿ ನಿಗಮದ ಶಾಖೆಯನ್ನು ಆರಂಭಿಸಲಾಗಿತ್ತು.

ನಿಗಮದಿಂದ ಪಟ್ಟಣದ ಹೊರವಲಯದ ವಡ್ಡಿನಕಟ್ಟಿ ಬಸವೇಶ್ವರ ದೇವಸ್ಥಾನದ ಬಳಿ ೫ ಎಕರೆ ಜಾಗವನ್ನು ಗುರುತಿಸಿ ಅದಕ್ಕೆ ಸಣ್ಣ ಕೈಗಾರಿಕಾ ಪ್ರದೇಶ ಎಂದು ನಾಮಕರಣ ಮಾಡಲಾಗಿತ್ತು. ಅಂದು ಈ ಪ್ರದೇಶದಲ್ಲಿ ₹೧೫ ಲಕ್ಷ ವೆಚ್ಚದಲ್ಲಿ ನಿಗಮ ೪ ಶೆಡ್ ನಿರ್ಮಿಸಲಾಗಿತ್ತು. ತಾಲೂಕು ಕೇಂದ್ರಗಳಿಗೆ ಕೈಗಾರಿಕೆ ಬಂದೇ ಬಿಟ್ಟವು, ನಿರುದ್ಯೋಗಿ ಯುವಕ -ಯುವತಿಯರಿಗೆ ಉದ್ಯೋಗ ದೊರೆಯುತ್ತೆ ಎಂಬ ಕನಸಿಗೆ ಬಳಿಕ ತಣ್ಣಿರು ಎರಚಿದಂತಾಯಿತು. ಅಂತಹ ಯಾವುದೇ ಕೈಗಾರಿಕೆ ಚಟುವಟಿಕೆಗಳು ಇಲ್ಲಿ ನಡೆಯಲಿಲ್ಲ.

ಕೈಗಾರಿಕೆ ಆರಂಭಿಸುವುದಾಗಿ ಅರ್ಜಿ ಸಲ್ಲಿಸಿದವರಿಗೆ ೫ ಎಕರೆಯಲ್ಲಿ ಕೈಗಾರಿಕೆಗೆ ಅನುಗುಣವಾಗಿ ನಿವೇಶನ ಹಂಚಿಕೆಯಾಗಿವೆ. ಕಳೆದ ೪ ವರ್ಷಗಳ ಈಚೆಗೆ ಮೊಳೆ, ಅಡಿಕೆ ತಟ್ಟೆ, ಸಿಮೆಂಟ್ ಇಟ್ಟಿಗೆ ತಯಾರಿಕೆ, ಔಷಧಿ ತಯಾರಿಕೆ, ಮುರುಡೇಶ್ವರ ಎಂಜಿನಿಯರಿಂಗ್ ವರ್ಕ್ಸ್, ಪ್ಲಾಸ್ಟಿಕ್ ಕೊಡಪಾನ ಮತ್ತು ಬಕೆಟ್ ತಯಾರಿಕೆಯ, ಗಾರ್ಮೆಂಟ್, ಫ್ಯಾಕ್ಟರಿ ಸೇರಿದಂತೆ ಸಣ್ಣ ಕೈಗಾರಿಕೆಗಳು ಆರಂಭಗೊಂಡಿದ್ದವು.

ಪ್ರಸ್ತುತ ಸಿಮೆಂಟ್ ಇಟ್ಟಿಗೆ ತಯಾರಿಕೆ, ಔಷಧಿ ತಯಾರಿಕೆ, ಮುರುಡೇಶ್ವರ ಎಂಜಿನಿಯರಿಂಗ್ ವರ್ಕ್ಸ್, ಪ್ಲಾಸ್ಟಿಕ್ ಕೊಡಪಾನ ಮತ್ತು ಬಕೆಟ್ ತಯಾರಿಕೆಯ ಕೈಗಾರಿಕೆ ಘಟಕಗಳು ಹೊರತು ಪಡಿಸಿ ಉಳಿದ ಎಲ್ಲ ಕೈಗಾರಿಕೆ ಉದ್ಯಮಗಳು ಮೂಲಸೌರ್ಕಯಗಳ ಕೊರತೆಯಿಂದ ಸ್ಥಗಿತವಾಗಿವೆ. ಹೀಗಾಗಿ ಶೆಡ್‌ಗಳು ಖಾಲಿ ಬಿದ್ದು ಜಾಗದ ಮುಂಭಾಗದಲ್ಲಿ ಮುಳ್ಳು ಕಂಟಿಗಳು ಬೆಳೆದ ನಿಂತಿವೆ. ಪಟ್ಟಣದಿಂದ ಕೇವಲ ೨ ಕಿಮೀ ದೂರದಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ರಸ್ತೆಗಳು ತೀರಾ ಹದಗೆಟ್ಟಿವೆ.

ಸರಿಯಾದ ಬೀದಿ ದೀಪಗಳಿಲ್ಲ:

ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಬೀದಿ ದೀಪಗಳಿಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಈ ರಸ್ತೆಗಳಲ್ಲಿ ಓಡಾಡಲು ಕಷ್ಟಪಡುತ್ತಿದ್ದಾರೆ. ರಸ್ತೆಯ ಮೇಲೆಯ ಮುಳ್ಳು ಕಂಟೆಗಳು ಬೆಳೆದಿದ್ದರಿಂದ ಹಾವು, ಚೇಳು, ವಿವಿಧ ಸರಿಸೃಪಗಳು ಕಾಣಿಸಿಕೊಳ್ಳುತ್ತಿರುವುದರಿಂದ ಕಾರ್ಮಿಕರು ಭಯ ಪಡುತ್ತಾ ಓಡಾಡುವ ಸ್ಥಿತಿ ಇದೆ.

ಇಲ್ಲಿ ಕೈಗಾರಿಕೆಗೆ ಬೇಕಾದ ಮೂಲಭೂತ ಸೌರ್ಕಗಳನ್ನು ನಿಗಮ ಮಾಡಿಕೊಡುತ್ತಿಲ್ಲ. ಉದ್ಯಮದಲ್ಲಿ ನಷ್ಟ ಅನುಭವಿಸಿದ್ದರಿಂದ ಎರಡು ಮೂರು ವರ್ಷ ತೆರಿಗೆ ಪಾವತಿಸಲು ಆಗಿರಲಿಲ್ಲ. ಆದರೆ ನಿಗಮದವರು ಬಡ್ಡಿ ಸಮೇತ ತೆರಿಗೆ ಕಟ್ಟಿಸಿಕೊಂಡಿದ್ದಾರೆ ಎನ್ನುತ್ತಾರೆ ಸಿಮೆಂಟ್ ಇಟ್ಟಿಗೆ ಉದ್ಯಮಿ ತೋಟೇಶಪ್ಪ ಹಳಕಟ್ಟಿ.

ಕೈಗಾರಿಕೆ ಪ್ರದೇಶಕ್ಕೆ ಹೋಗಲು ಹಾಗೂ ಸರಕು ಸಾಕಾಣಿಕೆ ಮಾಡಲು ಸರಿಯಾದ ರಸ್ತೆಯ ವ್ಯವಸ್ಥೆಯನ್ನು ಕೆಎಸ್‌ಎಸ್‌ಐಡಿಸಿ ನಿಗಮ ಮಾಡಿಕೊಟ್ಟಿಲ್ಲ. ಬೀದಿ ದೀಪಗಳಿಲ್ಲ, ವಿದ್ಯುತ್ ಸರಬರಾಜು ಮಾಡುವ ಟಿ.ಸಿ. ಸುತ್ತ ಗಿಡಗಂಟಿಗಳು ಬೆಳೆದಿವೆ. ಕುಡಿಯುವ ನೀರು, ಚಂರಡಿ, ಕೈಗಾರಿಕೆ ಸುತ್ತಮುತ್ತ ಕಾಂಪೌಡ್ ನಿರ್ಮಿಸಿಲ್ಲ. ಮಳೆಗಾಲದಲ್ಲಿ ಇಡೀ ಕೈಗಾರಿಕಾ ಪ್ರದೇಶ ಕೆರೆಯಂತೆ ಭಾಸವಾಗುತ್ತದೆ ಉದ್ಯಮಿ ದುರಗಪ್ಪ ನೀರಲಗಿ.