ಸಾರಾಂಶ
ಸಂವಿಧಾನ ಬದಲಾವಣೆ ವಿಚಾರವಾಗಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸ್ವಾಮೀಜಿಯವರು ಅದನ್ನು ಹೇಳುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂವಿಧಾನ ಬದಲಾವಣೆ ವಿಚಾರವಾಗಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸ್ವಾಮೀಜಿಯವರು ಅದನ್ನು ಹೇಳುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ನ್ಯಾಯವನ್ನು ಒಳಗೊಂಡಿರುವ ಸಂವಿಧಾನವನ್ನು ವಿರೋಧಿಸುವವರು ಅದರ ಬದಲಾವಣೆಯಾಗಬೇಕೆಂಬ ಮಾತುಗಳನ್ನಾಡಿದ್ದಾರೆ ಎಂದರು.
ಪೇಜಾವರ ಶ್ರೀಗಳೂ ಈ ಕುರಿತು ಹೇಳಿಕೆ ನೀಡಿದ್ದಾರಲ್ಲಾ ಎಂಬ ಪ್ರಶ್ನೆಗೆ, ಅವರು ಯಾಕೆ ಹಾಗೆ ಹೇಳಿದರೋ ಗೊತ್ತಿಲ್ಲ. ಆದರೆ, ನಮ್ಮ ಸರ್ಕಾರ ಸಂವಿಧಾನದ ರಕ್ಷಣೆಗೆ ಬದ್ಧವಾಗಿದೆ ಎಂದರು.ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಬಿಜೆಪಿ ಮತ್ತು ಆರೆಸ್ಸೆಸ್‌ನವರು ಸಂವಿಧಾನ ವಿರೋಧಿಗಳು ಎಂದು ಟೀಕಿಸಿದರು. ಪೇಜಾವರ ಶ್ರೀಗಳ ಹೇಳಿಕೆಯನ್ನು ಪಕ್ಷದ ನಾಯಕರೊಬ್ಬರು ಮೆಲುಧ್ವನಿಯಲ್ಲಿ ಪ್ರಸ್ತಾಪಿಸಿದರು. ಆಗ ಮುಖ್ಯಮಂತ್ರಿಯವರು, ಹೌದು ಮೊನ್ನೆ ಮೊನ್ನೆ ಪೇಜಾವರ ಸ್ವಾಮೀಜಿ ಅವರು ಕೂಡ ಸಂವಿಧಾನ ಬದಲಾವಣೆ ಕುರಿತು ಮಾತನಾಡಿದ್ದಾರೆ. ಅದನ್ನು ಹೇಳುವ ಅವಶ್ಯಕತೆ ಏನಿತ್ತು. ಮನುಸ್ಮೃತಿ ಇರಬೇಕು ಅಂತ ಸ್ವಾಮೀಜಿ ಪ್ರತಿಪಾದಿಸುತ್ತಾರೆ.+++ಆದರೆ, ನಾನು ಹೇಳುತ್ತೇನೆ. ದಲಿತರು, ಶೂದ್ರರು, ಅಲ್ಪಸಂಖ್ಯಾತರು, ಮಹಿಳೆಯರು, ಯುವಕರು ಎಲ್ಲರೂ ಸೇರಿ ನಮ್ಮ ಸಂವಿಧಾನವನ್ನು ನಾವು ಉಳಿಸಿಕೊಳ್ಳದೆ ಹೋದರೆ ನಾವ್ಯಾರೂ ಇರುವುದಿಲ್ಲ ಎಂದರು.+++
ಸಂವಿಧಾನ ದಿನದ ಅಂಗವಾಗಿ ಮಂಗಳವಾರ ವಿಧಾನಸೌಧ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.