ಸಾರಾಂಶ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಸಿಎಂ ಸಿದ್ದರಾಮಯ್ಯ ಪತ್ರ. ರಾಯಚೂರಿನಲ್ಲಿ ಕಳೆದ 628 ದಿನಗಳಿಂದ ಏಮ್ಸ್‌ಗಾಗಿ ಹೋರಾಟ ನಡೆಸುತ್ತಿರುವ ಜನಪ್ರತಿನಿಧಿಗಳು ಹಾಗೂ ಹೋರಾಟಗಾರರಿಗೆ ಆನೆ ಬಲ ತಂದು ಕೊಟ್ಟಿದೆ.
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯನ್ನು ರಾಯಚೂರು ಜಿಲ್ಲೆಗೆ ಮಂಜೂರು ಮಾಡಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಪತ್ರ ಬರೆದಿರುವುದು, ಜಿಲ್ಲೆಯ ಜನರ ಏಮ್ಸ್ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ರಾಜ್ಯದಲ್ಲಿ ಏಮ್ಸ್ ಸ್ಥಾಪಿಸುವ ಪ್ರಸ್ತಾವ ನೆನೆಗುದಿಗೆ ಬಿದ್ದಿದ್ದು, ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಗೆ ಬರುವ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಗೆ ಆಯ್ಕೆಯಾಗಿರುವ ರಾಯಚೂರು ಜಿಲ್ಲೆಯ ಆರೋಗ್ಯ, ಶಿಕ್ಷಣ ಮತ್ತು ತಲಾ ಆದಾಯ ಮಟ್ಟದಲ್ಲಿ ತೀರಾ ಹಿಂದುಳಿದಿದೆ. ಇಂತಹ ಸ್ಥಳದಲ್ಲಿ ಉನ್ನತ ಮಟ್ಟದ ಸಂಸ್ಥೆಯ ಸ್ಥಾಪಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಫೆ.2ರಂದು ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ ರಾಯಚೂರು ಜಿಲ್ಲೆಗೆ ಏಮ್ಸ್ ನೀಡಲು ಕ್ರಮವಹಿಸಬೇಕು ಎಂದು ಸಿಎಂ ಪತ್ರದಲ್ಲಿ ಮನವಿ ಮಾಡಿದ್ದಾರೆ.ಮುಖ್ಯಮಂತ್ರಿಯವರು ಬರೆದಿರುವ ಪತ್ರದಲ್ಲಿ ರಾಯಚೂರು ಏಮ್ಸ್ ಸ್ಥಾಪನೆಗೆ ರಾಯಚೂರು ಆತ್ಯಂತ ಸೂಕ್ತ ಸ್ಥಳ ಎಂದು ಹೇಳಿರುವುದು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹೋರಾಟಗಾರರಿಗೆ ಆನೆ ಬಲ ತಂದು ಕೊಟ್ಟಿದೆ.ಕಳೆದ 628 ದಿನಗಳಿಂದ ಹೋರಾಟ
ಜಿಲ್ಲೆಗೆ ಏಮ್ಸ್ ಮಂಜೂರು ಮಾಡಲು ಆಗ್ರಹಿಸಿ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ರಾಯಚೂರು ಏಮ್ಸ್ ಮಂಜೂರಾತಿ ಹೋರಾಟ ಸಮಿತಿಯಿಂದ ಕಳೆದ 628 ದಿನಗಳಿಂದ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ಸ್ಥಳೀಯ ಶಾಸಕರು,ಸಚಿವರಿಗೆ ಮನವಿ ಸಲ್ಲಿಸಾಗಿದೆ. ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರದ ಸಿದ್ದರಾಮಯ್ಯ 2023, ಜು.17ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ್ ಮಾಂಡವಿಯಾಗೆ ಪತ್ರ ಬರೆದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನೇತೃತ್ವದಲ್ಲಿ ಸಚಿವ, ಶಾಸಕ ಹಾಗೂ ಹೋರಾಟ ಸಮಿತಿ ನಿಯೋಗವು ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನ ಭೇಟಿಯಾಗಿ ಮನವಿ ಸಲ್ಲಿಸಿದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಈಗ ಮತ್ತೆ ಸಿಎಂ ಸಿದ್ದರಾಮಯ್ಯ ಜಿಲ್ಲೆ ಮೇಲೆ ಮುತುವರ್ಜಿ ವಹಿಸಿ ವಿತ್ತ ಸಚಿವ ನಿರ್ಮಲಾ ಸೀತರಾಮನ್‌ಗೆ ಸೋಮವಾರ ಬರೆದ ಮನವಿಯಲ್ಲಿ ಪ್ರಸಕ್ತ ಕೇಂದ್ರ ಬಜೆಟ್‌ನಲ್ಲಿ ರಾಯಚೂರಿಗೆ ಏಮ್ಸ್ ನೀಡಬೇಕು ಎಂದು ಕೋರಿದ್ದಾರೆ. ಕೇಂದ್ರ ಸರ್ಕಾರದ ಈ ಅವಧಿಯ ಕೊನೆ ಬಜೆಟ್‌ನಲ್ಲಿ ಆದರು ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿರುವ ಏಮ್ಸ್ ದೊರೆಯಲಿದೆಯೆ ಕಾದು ನೋಡಬೇಕಾಗಿದೆ.