15 ಸಾವಿರ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದು, ಈ ಸಂಬಂಧ ಶೀಘ್ರ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
15 ಸಾವಿರ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದು, ಈ ಸಂಬಂಧ ಶೀಘ್ರ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ.ಅಲ್ಲದೆ, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ(ಎಡಿಬಿ) ₹2000 ಕೋಟಿ ನೆರವಿನಿಂದ 500 ಶಾಲೆಗಳು ಸೇರಿ ಮುಂದಿನ ಮೂರು ವರ್ಷಗಳಲ್ಲಿ ₹3500 ಕೋಟಿ ವೆಚ್ಚದಲ್ಲಿ ಒಟ್ಟು 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ (ಕೆಪಿಎಸ್) ಉನ್ನತೀಕರಿಸುವ ಯೋಜನೆಗೆ ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸಲು ನಿರ್ದೇಶನ ನೀಡಿದರು. ಈ ನಿಟ್ಟಿನಲ್ಲಿ ಜೂ.1ರಂದು ಶಿವಮೊಗ್ಗದಲ್ಲಿ ಕೆಪಿಎಸ್ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲು ಸಮ್ಮತಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಇಲಾಖಾ ವಿಷಯಗಳ ಕುರಿತು ಮುಖ್ಯಮಂತ್ರಿ ಸಭೆ ನಡೆಸಿದರು.ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ, ಈ ಬಾರಿಯ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಯಾವುದೇ ಗ್ರೇಸ್ ಅಂಕ ನೀಡದೆ ದಾಖಲೆ ಫಲಿತಾಂಶಗಳು ಬಂದಿವೆ. ಎರಡೂ ಪರೀಕ್ಷೆಗಳಲ್ಲಿ ಕಳೆದ ಬಾರಿಗಿಂತ ಶೇ.13ರಷ್ಟು ಫಲಿತಾಂಶ ಹೆಚ್ಚಾಗಿದೆ. ಅಲ್ಲದೆ, ಫಲಿತಾಂಶದಲ್ಲಿ ಸರ್ಕಾರಿ ಶಾಲೆ, ಪಿಯು ಕಾಲೇಜುಗಳ ಸಾಧನೆಯೂ ಉತ್ತಮಗೊಂಡಿದೆ. ಫಲಿತಾಂಶ ಸುಧಾರಣೆಗೆ ಇಲಾಖೆ ಅನುಸರಿಸಿದ ಕ್ರಮಗಳೇನು? ಎಂದು ವಿವರಿಸಿದರು.
25,000 ಶಿಕ್ಷಕ ಹುದ್ದೆ ಭರ್ತಿಗೆ ಬೇಡಿಕೆ:ಸರ್ಕಾರಿ ಶಾಲೆಗಳಲ್ಲಿ ಇನ್ನಷ್ಟು ಗುಣಮಟ್ಟದ ಶಿಕ್ಷಣ, ಸೌಲಭ್ಯಗಳನ್ನು ಹೆಚ್ಚಿಸಬೇಕಾಗಿದೆ. ಇದಕ್ಕೆ ಮೊದಲನೆಯದಾಗಿ ಖಾಲಿ ಇರುವ 60,000ಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳಲ್ಲಿ ಈ ವರ್ಷ ಕನಿಷ್ಠ 25 ಸಾವಿರ ಹುದ್ದೆಗಳನ್ನಾದರೂ ಭರ್ತಿಗೆ ಅವಕಾಶ ನೀಡುವಂತೆ ಸಚಿವರು ಕೋರಿದರು ಎಂದು ಸಭೆಯಲ್ಲಿದ್ದ ಮೂಲಗಳು ‘ಕನ್ನಡಪ್ರಭ’ಗೆ ಮಾಹಿತಿ ನೀಡಿವೆ.
ಅಲ್ಲದೆ, ರಾಜ್ಯದಲ್ಲಿ ಕೆಪಿಎಸ್ ಶಾಲೆಗಳಲ್ಲಿ ದಾಖಲಾತಿಗೆ ಬೇಡಿಕೆ ಹೆಚ್ಚುತ್ತಿರುವ ಕುರಿತು ಮುಖ್ಯಮಂತ್ರಿ ಅವರಿಗೆ ಮಾಹಿತಿ ಒದಗಿಸಿದ ಸಚಿವರು, ಬಜೆಟ್‌ನಲ್ಲಿ ಘೋಷಿಸಿರುವಂತೆ 800 ಹೊಸ ಕೆಪಿಎಸ್‌ಗಳ ಆರಂಭಕ್ಕೆ ಎಡಿಬಿ ನೆರವಿನ ಜೊತೆಗೆ ಸರ್ಕಾರ, ಕೆಕೆಆರ್‌ಡಿಬಿಯಿಂದ ಅಗತ್ಯ ಆರ್ಥಿಕ ನೆರವು ಒದಗಿಸಲು ಮನವಿ ಮಾಡಿದರು. ಕೆಪಿಎಸ್‌ಗಳಲ್ಲಿ ಎಲ್‌ಕೆಜಿಯಿಂದ 12ನೇ ತರಗತಿ ವರೆಗೆ ಒಂದೇ ಕಡೆ ಶಿಕ್ಷಣ ದೊರೆಯುತ್ತದೆ. ಜೊತೆಗೆ ಕಂಪ್ಯೂಟರ್ ಶಿಕ್ಷಣ, ನೃತ್ಯ, ಸಂಗೀತ ತರಗತಿಗಳನ್ನೂ ಆರಂಭಿಸಲಾಗುತ್ತಿದೆ. ಕೆಪಿಎಸ್‌ಗಳಿಗೆ ವಿಲೀನಗೊಳ್ಳುವ ಸುತ್ತಮುತ್ತಲ ಹಳ್ಳಿಗಳ ಮಕ್ಕಳನ್ನು ಕರೆತರಲು ಶಾಲಾ ಬಸ್ಸುಗಳ ವ್ಯವಸ್ಥೆ ಮಾಡಬೇಕಿದೆ. ಇದಕ್ಕಾಗಿ ಸರ್ಕಾರದಿಂದ ಅಗತ್ಯ ಅನುದಾನ ಒದಗಿಸಲು ಸಚಿವರು ಕೋರಿಕೆ ಇಟ್ಟರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅವರು, ಎರಡೂ ಪರೀಕ್ಷೆಗಳಲ್ಲಿ ದಾಖಲೆ ಫಲಿತಾಂಶ ಬಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಸರ್ಕಾರಿ ಶಾಲೆಗಳಿಗೆ ಬರುವವರು ಬಡವರ ಮಕ್ಕಳು. ಅವರಿಗೆ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲಾ ಅಗತ್ಯ ನೆರವು ನೀಡಲಾಗುವುದು. ಸದ್ಯ ಈ ಬಾರಿ 15,000 ಶಾಲಾ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ ನೀಡಿದ್ದು, ಕೂಡಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೆ ಅನುಮತಿ ನೀಡಲಾಗುವುದು. ಅನುಮತಿ ಪಡೆದು ಅಧಿಸೂಚನೆ ಹೊರಡಿಸಿ ಆದಷ್ಟು ಬೇಗ ನೇಮಕಾತಿ ಪ್ರಕ್ರಿಯ ಪೂರ್ಣಗೊಳಿಸಲು ಕ್ರಮ ವಹಿಸಲು ಸೂಚಿಸಿದರು.
ತಕ್ಷಣ ಟೆಂಡರ್ ಕೈಗೊಳ್ಳಿ:ಹೋಬಳಿಗೊಂದು ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸುವ ನಮ್ಮ ಸರ್ಕಾರದ ಗುರಿ ಉತ್ತಮ ಯೋಜನೆಯಾಗಿದೆ. ಬಜೆಟ್‌ನಲ್ಲಿ ಘೋಷಿಸಿರುವಂತೆ 800 ಶಾಲೆಗಳನ್ನು ಕೆಪಿಎಸ್‌ಗಳಾಗಿ ಉನ್ನತೀಕರಿಸುವ ಯೋಜನೆಗೆ ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸಲು ಕ್ರಮ ವಹಿಸಿ. ಇವುಗಳಿಗೆ ಹಳ್ಳಿಗಳಿಂದ ಕರೆತರಲು ಶಾಲಾ ಬಸ್ ಸೌಲಭ್ಯವನ್ನು ಯಾವ ರೀತಿಯಲ್ಲಿ ಕಲ್ಪಿಸಬಹುದು ಎಂಬ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಿ. ಇದಕ್ಕೆ ಅಗತ್ಯ ಅನುದಾನದ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚಿಸಿದ್ದಾರೆ.
ಸಭೆಯಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್, ಪದವಿ ಪೂರ್ವ ಇಲಾಖೆ ನಿರ್ದೇಶಕ ಭರತ್ ಉಪಸ್ಥಿತರಿದ್ದರು.-ಬಾಕ್ಸ್-
ಉಚಿತವಾಗಿ ನೋಟ್‌ಬುಕ್‌ವಿತರಣೆಗೆ ಮಧು ಮನವಿಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು 2026-27ನೇ ಸಾಲಿನಿಂದ ಮಕ್ಕಳಿಗೆ ಪಠ್ಯಪುಸ್ತಕಗಳ ಜೊತೆ ನೋಟ್‌ಪುಸ್ತಕಗಳನ್ನೂ ಸರ್ಕಾರದಿಂದ ಉಚಿತವಾಗಿ ನೀಡುವುದಾಗಿ ಘೋಷಿಸಲಾಗಿತ್ತು. ಇದರ ಅನುಷ್ಠಾನಕ್ಕೆ ಒಪ್ಪಿಗೆ ನೀಡಬೇಕೆಂದು ಕೂಡ ಇದೇ ವೇಳೆ ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.ಪೋಷಕರಿಂದಲೂ ಉಚಿತ ನೋಟ್‌ಬುಕ್ ವಿತರಣೆಗೆ ಬೇಡಿಕೆ ಬರುತ್ತಿರುವುದರಿಂದ ಆದಷ್ಟು ಬೇಗ ಇದರ ಜಾರಿಗೆ ಸಮ್ಮತಿಸಬೇಕೆಂದು ಕೋರಿದರು. ಇದಕ್ಕೆ ಮುಖ್ಯಮಂತ್ರಿ ಅವರು ಸಕಾರಾತ್ಮಕ ಪ್ರತಿಕ್ರಿಯೆ ರೀತಿಯಲ್ಲಿ ತಲೆ ಅಲ್ಲಾಡಿಸಿದರು. ಆದರೆ, ಸ್ಪಷ್ಟವಾದ ಪ್ರತಿಕ್ರಿಯೆ ಸದ್ಯಕ್ಕೆ ಸಿಗಲಿಲ್ಲ ಎಂದು ತಿಳಿದು ಬಂದಿದೆ.