ಬೆಳಗಾವಿಯ ಚಳಿಗಾಲದ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವವರಿಂದ ಮನವಿ ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಪಾಳಿ ನಿಗದಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ

ಬೆಳಗಾವಿಯ ಚಳಿಗಾಲದ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವವರಿಂದ ಮನವಿ ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಪಾಳಿ ನಿಗದಿ ಮಾಡಿದ್ದಾರೆ.

ಪ್ರತಿ ಬಾರಿ ಅಧಿವೇಶನದ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ದೃಷ್ಟಿಯಿಂದಾಗಿ ವಿವಿಧ ಸಂಘ-ಸಂಸ್ಥೆಗಳು ಪ್ರತಿಭಟನೆ ನಡೆಸುತ್ತವೆ. ಈ ಬಾರಿ ಕಬ್ಬು, ಮೆಕ್ಕೆಜೋಳ ಬೆಲೆ ಕುಸಿತ ಸೇರಿ ವಿವಿಧ ಸಮಸ್ಯೆಗಳ ನಿವಾರಣೆಗಾಗಿ ರೈತ ಸಮೂಹ ಪ್ರತಿಭಟನೆ ನಡೆಸುತ್ತಿದೆ.

ನಿಗದಿಯಾಗಿರುವ ಸಚಿವರ ವಿವರ:

-ಡಿ.8: ಶಿಕ್ಷಣ ಸಚಿವ ಮಧು, ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪೂರ್‌, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

-ಡಿ.9: ಕೃಷಿ ಸಚಿವ ಚಲುವರಾಯಸ್ವಾಮಿ, ಆರೋಗ್ಯ ಸಚಿವ ದಿನೇಶ್‌, ಲೋಕೋಪಯೋಗಿ ಸಚಿವ ಸತೀಶ್‌

-ಡಿ.10: ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ.ಮಹದೇವಪ್ಪ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಅರಣ್ಯ ಸಚಿವ ಈಶ್ವರ್‌ ಖಂಡ್ರೆ

- ಡಿ.11: ಜವಳಿ ಸಚಿವ ಶಿವಾನಂದ ಪಾಟೀಲ್‌, ವಸತಿ ಸಚಿವ ಜಮೀರ್‌ ಅಹಮದ್‌, ಆರ್‌ಡಿಪಿಆರ್‌ ಸಚಿವ ಪ್ರಿಯಾಂಕ್‌

- ಡಿ.12: ಸಣ್ಣ ಕೈಗಾರಿಕೆ ಸಚಿವ ದರ್ಶನಾಪೂರ್‌, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

- ಡಿ.15: ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುನಿಯಪ್ಪ, ನಗರಾಭಿವೃದ್ಧಿ ಸಚಿವ ಸುರೇಶ್‌

- ಡಿ.16: ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌, ಪೌರಾಡಳಿತ ಸಚಿವ ರಹೀಂ ಖಾನ್‌, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ

-ಡಿ.17: ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್‌, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್‌

-ಡಿ.18: ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷೀ ಹೆಬ್ಬಾಳ್ಕರ್‌, ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪೂರ್‌

- ಡಿ.19: ಇಂಧನ ಸಚಿವ ಕೆ.ಜೆ. ಜಾರ್ಜ್‌, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್‌, ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಭೋಸರಾಜು

=-

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಅವರ ಬೇಡಿಕೆಗಳ ಕುರಿತು ಚರ್ಚೆ ನಡೆಸುವ ಉದ್ದೇಶದೊಂದಿಗೆ ಪ್ರತಿದಿನ ತಲಾ ಮೂವರು ಸಚಿವರನ್ನು ಪ್ರತಿಭಟನಾಕಾರರ ಭೇಟಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ನಿಗದಿತ ಸಚಿವ ಮುಖ್ಯಮಂತ್ರಿ ಅವರ ಪರವಾಗಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸಿ, ನಂತರ ಅದನ್ನು ಸಿಎಂ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ.ವಿಕೋಪಕ್ಕೆ ಹೋಗುವುದನ್ನು ತಡೆಯಲು ಕ್ರಮ:ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆಗಾಗಿ ನಿಗದಿ ಮಾಡಿರುವ ಸ್ಥಳದಲ್ಲಿ ನೂರಾರು ಪ್ರತಿಭಟನೆಗಳು ನಡೆಯುತ್ತವೆ. ಹೀಗೆ ನಡೆಯುವ ಪ್ರತಿಭಟನೆಗಳತ್ತ ಸಚಿವರು, ಅಧಿಕಾರಿಗಳು ಅಷ್ಟಾಗಿ ಗಮನಕೊಡುವುದಿಲ್ಲ. ಎರಡ್ಮೂರು ದಿನಗಳಿಗೊಮ್ಮೆ ಯಾರಾದರೊಬ್ಬರು ಸಚಿವರು ಪ್ರತಿಭಟನಾ ಸ್ಥಳಕ್ಕೆ ಹೋಗಿ ಅಲ್ಲಿ ಪ್ರತಿಭಟನಾಕಾರರನ್ನು ಮಾತನಾಡಿಸಿ ಮನವಿ ಸ್ವೀಕರಿಸಿ ಬರುತ್ತಿದ್ದರು. ಒಂದೊಮ್ಮೆ ಮನವಿ ಸ್ವೀಕರಿಸುವಲ್ಲಿ ವಿಳಂಬವಾಗಿ, ಮುಖ್ಯಮಂತ್ರಿ ಅವರ ಗಮನಕ್ಕೆ ಬರದ ಕಾರಣ ಪ್ರತಿಭಟನಾಕಾರರು ವಿಕೋಪ ತಿರುಗಿ ಸುವರ್ಣ ವಿಧಾನಸೌಧ ಮುತ್ತಿಗೆಯಂತಹ ಪ್ರಕರಣಗಳೂ ನಡೆದಿವೆ. ಅದರಲ್ಲೂ ಈ ಬಾರಿ ರೈತರ ಪ್ರತಿಭಟನೆ ಕುರಿತಂತೆ ಸಾಕಷ್ಟು ನಿಗಾವಹಿಸಲಾಗಿದೆ.ಹೀಗಾಗಿ ಪರಿಸ್ಥಿತಿ ಹತೋಟಿಯಲ್ಲಿರುವಂತೆ ಮಾಡಲು ಪ್ರತಿದಿನ ತಲಾ ಮೂವರು ಸಚಿವರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಅವರಿಂದ ಮನವಿ ಸ್ವೀಕರಿಸಬೇಕು. ಜತೆಗೆ ಪ್ರತಿಭಟನಾಕಾರರೊಂದಿಗೆ ಚರ್ಚಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಬೇಕು. ಒಂದು ವೇಳೆ ಒಪ್ಪಲಿಲ್ಲ ಎಂದಾದರೆ, ಪ್ರತಿಭಟನಾಕಾರರ ಸಮಸ್ಯೆಯ ಗಂಭೀರತೆ ಅರಿತು ಸಮಸ್ಯೆಯನ್ನು ಕೂಡಲೇ ಸಿಎಂ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎಂಬ ಉದ್ದೇಶದೊಂದಿಗೆ ಸಚಿವರನ್ನು ನೇಮಿಸಲಾಗಿದೆ.

- ಮನವಿ ಸ್ವೀಕರಿಸಲು ಸಚಿವರಿಗೆ ಸೂಚಿಸಿದ ಸಿಎಂ- ನಿತ್ಯ 3 ಸಚಿವರನ್ನು ಮನವಿ ಸ್ವೀಕರಿಸಲು ನಿಗದಿ