ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ರಾಜ್ಯದ ಅಭಿವೃದ್ಧಿ ವಿಚಾರವಾಗಿ ಚರ್ಚಿಸುವ ಸೌಜನ್ಯ ಮುಖ್ಯಮಂತ್ರಿಗಳು ಸೇರಿದಂತೆ ಮಂತ್ರಿಮಂಡಲದ ಯಾವೊಬ್ಬ ಸದಸ್ಯರಿಗೂ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.ತಾಲೂಕಿನ ಕನಗನಮರಡಿ ಗ್ರಾಮದ ಶ್ರೀಅಂಕನಾಥದೇವಸ್ಥಾನ ದೇವಸ್ಥಾನದ ಲೋಕಾರ್ಪಣೆ ನೆರವೇರಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಆಂಧ್ರಪ್ರದೇಶ, ಚತ್ತಿಸಗಡ್, ಜಾರ್ಖಾಂಡ್ ರಾಜ್ಯ ಸೇರಿದಂತೆ ಅನೇಕ ರಾಜ್ಯಗಳು ಮುಖ್ಯಮಂತ್ರಿಗಳು ಆಯಾ ರಾಜ್ಯಗಳ ಅಭಿವೃದ್ಧಿ ವಿಚಾರವಾಗಿ ಚರ್ಚಿಸುತ್ತಿದ್ದಾರೆ ಎಂದರು.
ನಾನು ಕೇಂದ್ರದ ಸಚಿವನಾಗಿ ಏಳು ತಿಂಗಳು ಕಳೆಯುತ್ತಿವೆ. ಈವರೆಗೂ ನಮ್ಮ ರಾಜ್ಯದ ಸಿಎಂ ಸೇರಿದಂತೆ ಯಾವೊಬ್ಬ ಮಂತ್ರಿಯೂ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನನ್ನೊಂದಿಗೆ ಚರ್ಚಿಸುವ ಪ್ರಯತ್ನವನ್ನು ಮಾಡದೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ನನ್ನನ್ನು ಟಾರ್ಗೆಟ್ ಮಾಡಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲು ಧೈರ್ಯವಿಲ್ಲ ಎಂದು ಟೀಕಿಸುತ್ತಾರೆ. ನನಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರೊಂದಿಗೂ ಚರ್ಚಿಸುವ ಶಕ್ತಿಯನ್ನು ಮಂಡ್ಯ ಜಿಲ್ಲೆಯ ಜನತೆ ನೀವು ನೀಡಿದ್ದೀರಾ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ನಾನು ಕೇಂದ್ರ ಸಚಿವನಾದ ಬಳಿಕ ರಾಜ್ಯದ ಕುದುರೆಮುಖ ಕಾರ್ಖಾನೆಯನ್ನು ಅಭಿವೃದ್ಧಿಪಡಿಸಲು ಸಹಿ ಹಾಕಿದರೆ, ರಾಜ್ಯ ಸರ್ಕಾರ ಅಲ್ಲಿ ಕೆಲಸ ಮಾಡುತ್ತಿದ್ದ 1700 ಮಂದಿ ಕೆಲಸಗಾರನ್ನು ತೆಗೆದುಹಾಕಿ ಅಡ್ಡಿಪಡಿಸಿದರು. ನನ್ನ ನಿರ್ಧಾರಕ್ಕೆ ಬೆಂಬಲ ನೀಡಿದ್ದರೆ ಇನ್ನೂ 2 ಸಾವಿರ ಮಂದಿಗೆ ಉದ್ಯೋಗ ದೊರೆಯುತ್ತಿತ್ತು ಎಂದರು.ಮುಚ್ಚುವ ಹಂತದಲ್ಲಿದ್ದ ಆಂಧ್ರಪ್ರದೇಶದ ಸ್ಟೀಲ್ ಕಾರ್ಖಾನೆಯನ್ನು 11,440 ಕೋಟಿ ರು. ಅನುದಾನ ಕೊಟ್ಟು ಪುನಶ್ಚೇತನ ಮಾಡುತ್ತಿದ್ದೇವೆ. ರಾಜ್ಯದ ಭದ್ರವತಿ ಸ್ಟೀಲ್ ಕಂಪನಿಯನ್ನು 10-15 ಸಾವಿರ ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಲು ಕ್ರಮವಹಿಸಿದ್ದೇನೆ. ನೀವು ಕೊಟ್ಟಿರುವ ಶಕ್ತಿಯಿಂದ ಹಲವು ರಾಜ್ಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದರು.
ಸ್ವತಂತ್ರ್ಯ ಬಂದು 50 ವರ್ಷಗಳ ವರೆಗೂ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ನವರೇ ಅಧಿಕಾರದಲ್ಲಿದ್ದರು. ಅವರು ಏನು ಕೊಡುಗೆ ಕೊಟ್ಟಿದ್ದಾರೆ. ನಮ್ಮ ರಾಜ್ಯದ ಹಣದಿಂದ ಡ್ಯಾಂ ಕಟ್ಟಿ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ ಎಂದು ಹರಿಹಾಯ್ದರು.ನಾನು ರಾಜ್ಯಕ್ಕೆ ಬಂದರೆ ನೀವು ಯಾಕೆ ರಾಜ್ಯಕ್ಕೆ ಬರ್ತೀರ ಎನ್ನುತ್ತಾರೆ. ಮಂಡ್ಯಕ್ಕೆ ಬಂದರೂ ಮಂಡ್ಯಕ್ಕೆ ಏಕೆ ಬರ್ತೀರಿ ಅಂತ ಟೀಕಿಸುತ್ತಾರೆ. ನಾನು ರಾಜ್ಯಕ್ಕೆ ಬಂದರೆ ಅವರಿಗೆ ಹೊಟ್ಟೆಉರಿ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯದಲ್ಲಿ ಎರಡು ತಿಂಗಳಿಂದ ಬಾಣಂತಿಯರ ಸಾವುಗಳು ಒಂದರಿಂದ ಒಂದರಂತೆ ನಡೆಯುತ್ತಿವೆ. ಇವುಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಕ್ರಮ ತಗೆದುಕೊಂಡಿಲ್ಲ. ಇನ್ನೂ ಎಷ್ಟು ಮಂದಿ ಬಾಣಂತಿಯರು ಸಾಯಬೇಕು ಎಂದು ಪ್ರಶ್ನೆ ಮಾಡಿದರು.ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮರೆಯಬಾರದು. ಆದರೆ, ಇಂದು ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಹೆತ್ತ ತಂದೆಯನ್ನೇ ಕೊಲೆ ಮಾಡುತ್ತಿದ್ದಾರೆ. ತಂಗಿ ಮೇಲೆಯೇ ಅತ್ಯಾಚಾರಗಳು ನಡೆಯುತ್ತಿವೆ. ಎಲ್ಲರು ನಮ್ಮ ಪೂರ್ವಿಕರು ನಡೆಸುತ್ತಿದ್ದ ಜೀವನ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಅವರು ತಾಯಿ ಹೃದಯ ಹೊಂದಿರುವ ನಾಯಕರು. ಮುಖ್ಯಮಂತ್ರಿಗಳಾಗಿ ಕೆಲಸ ಮಾಡುವವಾಗ ರಾಜ್ಯದ ರೈತರು ಜನರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ್ದಾರೆ. ರೈತರ ಸಾಲಮನ್ನಾ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ನೀಡಿದ್ದಾರೆ ಎಂದರು.ಎಚ್.ಡಿ.ದೇವೇಗೌಡರು ಪ್ರಧಾನಮಂತ್ರಿಯಾಗಿ ರಾಜ್ಯಕ್ಕೆ ಹಲವಾರು ನೀರಾವರಿ ಕೊಡುಗೆ ನೀಡಿದ್ದಾರೆ. ಅವರ ಕೃಪೆಯಿಂದ ಪಾಂಡವಪುರ, ಕೆ.ಆರ್.ಪೇಟೆ, ನಾಗಮಂಗಲ, ಮದ್ದೂರಿನ ಜನತೆ ಹೇವಮಾತಿ ನೀರಿನ ಸೌಲಭ್ಯ ಪಡೆದಿದ್ದೇವೆ. ಪಂಜಾಬ್ ರೈತರು ಭತ್ತದ ತಳಿಗೆ ದೇವೇಗೌಡರ ಹೆಸರನ್ನೇ ಇಟ್ಟಿದ್ದಾರೆ. ಇದು ಎಚ್.ಡಿ.ದೇವೇಗೌಡರು ರೈತ ಸಮುದಾಯದ ಅಭಿವೃದ್ಧಿಗೆ ಕೊಟ್ಟ ಕೊಡುಗೆಯಾಗಿದೆ ಎಂದು ಬಣ್ಣಿಸಿದರು.
ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಮಂತ್ರಿ, ಮುಖ್ಯಮಂತ್ರಿ ಸ್ಥಾನವನ್ನು ಯಾರಾದರೂ ಏರುತ್ತಾರೆ. ಆದರೆ, ನಾಯಕನಾಗುವುದು ಕಷ್ಟ. ಅದು ಅವರ ವ್ಯಕ್ತಿತ್ವ, ಯೋಗ್ಯತೆ, ಅಂತಸತ್ವದಿಂದ ಮಾತ್ರ ಸಾಧ್ಯ. ಹಾಗೆ ಕುಮಾರಸ್ವಾಮಿ ಅವರು ಅಂತಸತ್ವ, ವ್ಯಕ್ತಿತ್ವದಿಂದ ನಾಯಕರಾಗಿ ಬೆಳೆದು 12 ಶತಮಾನದಲ್ಲಿ ಬಸವಣ್ಣ, ಡಾ.ರಾಜಣ್ಣ ಹೊರತುಪಡಿಸಿ ಕುಮಾರಣ್ಣ ಎಂಬ ಹೆಸರುಗಳಿಸಿದ್ದಾರೆ. ದೇವಸ್ಥಾನದ ಅಭಿವೃದ್ದಿಗೆ ಸಿ.ಎಸ್.ಪುಟ್ಟರಾಜು ಅವರು ಹೆಚ್ಚಿನ ಸಹಕಾರ ನೀಡಿದ್ದಾರೆ ಎಂದು ಬಣ್ಣಿಸಿದರು.ಸಮಾರಂಭದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಡಾ.ನಿರ್ಮಾಲಾನಂದನಾಥಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ದರು. ದೇವಸ್ಥಾನ ಸಮಿತಿ ಸದಸ್ಯರು, ಗ್ರಾಮದ ಯಜಮಾನರು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.