‘ಅಧಿಕಾರ ಶಾಶ್ವತ ಅಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತು ಸತ್ಯ. ಅಧಿಕಾರ ಬಿಡುವುದು ಪಕ್ಕಾ. 30 ತಿಂಗಳ ನಂತರ ಬಿಡಬಹುದು, ಅದಕ್ಕೂ ಮೊದಲು ಬಿಡಬಹುದು. ಯಾವಾಗಲೋ ಒಂದು ಸಲ ಬಿಡಲೇಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರು/ಮಂಗಳೂರು : ‘ಅಧಿಕಾರ ಶಾಶ್ವತ ಅಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತು ಸತ್ಯ. ಅಧಿಕಾರ ಬಿಡುವುದು ಪಕ್ಕಾ. 30 ತಿಂಗಳ ನಂತರ ಬಿಡಬಹುದು, ಅದಕ್ಕೂ ಮೊದಲು ಬಿಡಬಹುದು. ಯಾವಾಗಲೋ ಒಂದು ಸಲ ಬಿಡಲೇಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬಳಿಕ ಮಂಗಳೂರಿನಲ್ಲಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ಯಾವತ್ತಿದ್ದರೂ ಅಧಿಕಾರ ಬಿಡಬೇಕು. ಹತ್ತು ವರ್ಷದ ನಂತರವಾದರೂ ಬಿಡಬೇಕು. ಅಧಿಕಾರ ಶಾಶ್ವತ ಅಲ್ಲ ಎಂದು ಹೇಳಿಕೆ ನೀಡಿದ್ದೇನೆ. ಯಾವಾಗ ಅಧಿಕಾರ ಬಿಡಬೇಕೆಂದು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು.

ಬೆಂಗಳೂರಲ್ಲಿ ಹೇಳಿದ್ದೇನು?:

ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಶಾಶ್ವತ ಅಲ್ಲ ಎಂಬ ವೈರಾಗ್ಯದ ಮಾತು ಆಡಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಹೌದಲ್ಲವೇ? ಸಿದ್ದರಾಮಯ್ಯ ಅವರು ಹೇಳಿರುವುದು ಸತ್ಯವಿದೆ. ಅಧಿಕಾರ ಬಿಟ್ಟು ಕೊಡುವುದು ಪಕ್ಕಾ. ಆದರೆ 30 ತಿಂಗಳ ನಂತರವೋ? ಅದಕ್ಕೂ ಮೊದಲೋ? ಈ ಅವಧಿ ಆದ ಮೇಲೆಯೋ ಅಥವಾ ಹತ್ತು ಬಾರಿ ಮುಖ್ಯಮಂತ್ರಿ ಆದ ಮೇಲೆಯೋ ಯಾವಾಗಲೋ ಒಂದು ಸಲ ಬಿಡಲೇಬೇಕಲ್ಲವೇ ಎಂದು ಪ್ರಶ್ನಿಸಿದರು.

30 ತಿಂಗಳ ಬಳಿಕ ಬಿಡಬೇಕು ಎಂದು ಮಾನಸಿಕವಾಗಿ ಖಚಿತವಾಗಿದ್ದಾರಾ? ಎಂಬ ಪ್ರಶ್ನೆಗೆ, ‘ಅಧಿಕಾರ ಹಂಚಿಕೆ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಯಾವುದೇ ಸಂಧಾನಸೂತ್ರದ ಬಗ್ಗೆ ನಮಗೆ ಗೊತ್ತಿಲ್ಲ. ಹೈಕಮಾಂಡ್‌ ಹೇಳಿದಂತೆ ಎಲ್ಲರೂ ನಡೆಯುತ್ತಾರೆ’ ಎಂದು ಹೇಳಿದರು.

ಎಲ್ಲವೂ ಸುಖಾಂತ್ಯವಾಗಿ ನಡೆಯಬೇಕು. ಹೈಕಮಾಂಡ್‌ ಇದನ್ನು ಯಾವ ರೀತಿ ಬಗೆಹರಿಸುತ್ತದೆ ಎಂದು ಶಾಸಕರು ಕಾದು ನೋಡುತ್ತಿದ್ದಾರೆ. ಪಕ್ಷದಲ್ಲಿ ಒಳ್ಳೆಯ ವಾತಾವರಣ ಇರಬೇಕು ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ಸ್ಪಷ್ಟಪಡಿಸಿದರು.

ದಲಿತ ಮುಖ್ಯಮಂತ್ರಿ ಅಪ್ರಸ್ತುತ:

ದಲಿತ ಮುಖ್ಯಮಂತ್ರಿ ಚರ್ಚೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ‘ನಾನು ಮತ್ತು ಗೃಹ ಸಚಿವ ಪರಮೇಶ್ವರ್‌ ನಿನ್ನೆ ಸಭೆ ನಡೆಸಿದ್ದೇವೆ. ಆದರೆ ಈ ಸಂದರ್ಭದಲ್ಲಿ ದಲಿತ ಮುಖ್ಯಮಂತ್ರಿಯ ಬಗ್ಗೆ ಚರ್ಚೆಯಾಗಿಲ್ಲ. ನಮ್ಮ ಸಭೆಗಳು ನಿರಂತರ. ಈ ಅವಧಿಗೆ ದಲಿತ ಮುಖ್ಯಮಂತ್ರಿಯಾಗಲು ಅವಕಾಶ ಇಲ್ಲ. ಹೀಗಾಗಿ ಅದು ಅಪ್ರಸ್ತುತ’ ಎಂದರು.

ಪರಮೇಶ್ವರ್‌ ಅವರು ಹಿರಿಯ ನಾಯಕರಿದ್ದಾರೆ, ಅವರಿಗೆ ಅವಕಾಶ ಸಿಗಬೇಕು ಎಂದು ನಾನು ಹೇಳಿಕೆ ನೀಡಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ ಎಂದು ಹೇಳಿದರು.

ಸಿಎಂ ಹೇಳಿಕೆಗೆ ಸಮರ್ಥನೆ:

ರಾಜಕೀಯ ಶಾಶ್ವತ ಅಲ್ಲ ಹಾಗೂ ಹೈಕಮಾಂಡ್‌ ಹೇಳಿದಾಗ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ನಾನು ಸಮರ್ಥಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಸತೀಶ್ ಜಾರಕಿಹೊಳಿ ಉತ್ತರಿಸಿದರು.