ಸಾರಾಂಶ
ಚನ್ನಪಟ್ಟಣ: ಸಿದ್ದರಾಮಯ್ಯ ಬಳಿಕ ಸಿಎಂ ಆಗುವ ಎಲ್ಲಾ ಅವಕಾಶ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಇದೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲ್ಲಿಸಿದರೆ, ಶಿವಕುಮಾರ್‌ಗೆ ಶಕ್ತಿ ಬರುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದರು.
ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರನ್ನು ಸೋಲಿಸಲು ಕುಮಾರಸ್ವಾಮಿ ಭಾವನನ್ನು ತಂದು ನಿಲ್ಲಿಸಿದರು. ಈ ಕ್ಷೇತ್ರವನ್ನು ಯೋಗೇಶ್ವರ್‌ಗೆ ಬಿಟ್ಟುಕೊಡಬಹುದಿತ್ತು. ಆದರೆ ಅವರ ಮನೆಯವರಿಗೆ ಬಿಟ್ಟು ಬೇರೆ ಯಾರಿಗೂ ಕುಮಾರಸ್ವಾಮಿ ಟಿಕೆಟ್ ಕೊಡಲ್ಲ ಎಂದರು.
ಕುಮಾರಸ್ವಾಮಿ ಟೂರಿಂಗ್ ಟಾಕೀಸ್ ಎಲ್ಲೂ ನಿಲ್ಲಲ್ಲ. ಡಿ.ಕೆ.ಸುರೇಶ್ ಸೋಲನ್ನು ಮರೆಯೋಕೆ ಸಿಪಿವೈ ಗೆಲ್ಲಿಸಿ. ಎಲ್ಲರನ್ನೂ ಮನವೊಲಿಸಿ ಯೋಗೇಶ್ವರ್ ಪರ ಕೆಲಸ ಮಾಡಿ. ಯೋಗೇಶ್ವರ್ ಕ್ಷೇತ್ರಕ್ಕೆ ನೀರು ಕೊಟ್ಟಿದ್ದಾರೆ. ಡಿಕೆಶಿ ಕ್ಷೇತ್ರದ ಜನರಿಗೆ ಟ್ರಾನ್ಸ್‌ಫಾರ್ಮರ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಎರಡು ಬಾರಿ ಗೆದ್ದು ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಇನ್ನೂ ಮೂರು ವರ್ಷ ಇರುತ್ತೆ. ಸಿಪಿವೈ ಗೆದ್ದರೆ ಹೆಚ್ಚಿನ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡ್ತಾರೆ. ಸ್ವಾಭಿಮಾನ ಉಳಿಸಿಕೊಳ್ಳಬೇಕು ಅಂದ್ರೆ ಯೋಗೇಶ್ವರ್ ಗೆಲ್ಲಿಸಿ ಎಂದು ಮನವಿ ಮಾಡಿದರು.
ಎಚ್‌ಡಿಕೆ ಮನೆದೇವರು ದುರ್ಯೋಧನ: ಬಾಲಕೃಷ್ಣ
ಚನ್ನಪಟ್ಟಣ: ಕುಮಾರಸ್ವಾಮಿ ಅವರ ಮನೆ ದೇವರು ದುರ್ಯೋಧನ, ಅವರ ಲಾಂಛನ ನಾಗರಹಾವು. ಇದನ್ನು ಹೇಳಿದ್ದು ಇದೇ ಯಡಿಯೂರಪ್ಪನವರು. ಈಗ ಕಚ್ಚಿಸಿಕೊಳ್ಳೋಕೆ ಜತೆಗೆ ಕರೆದುಕೊಂಡಿದ್ದಾರೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ವ್ಯಂಗ್ಯವಾಡಿದರು.
ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಯಾರನ್ನೂ ಬೆಳೆಸುವ ಕೆಲಸ ಮಾಡಿಲ್ಲ. ಎಲ್ಲಾ ಕಡೆ ಅವರ ಕುಟುಂಬವನ್ನೇ ಪ್ರತಿಷ್ಠಾಪನೆ ಮಾಡ್ತಾರೆ. ನಾವ್ಯಾರು ಒಕ್ಕಲಿಗರ ರೀತಿ ಕಾಣುವುದಿಲ್ವಾ ಎಂದು ಪ್ರಶ್ನಿಸಿದರು.
ನಿಖಿಲ್ ಟೂರಿಂಗ್ ಟಾಕೀಸ್: ಮಂಡ್ಯಕ್ಕೆ ಹೋದರು, ರಾಮನಗರಕ್ಕೆ ಹೋದರು. ಈಗ ಇಲ್ಲಿಗೆ ಬಂದಿದ್ದಾರೆ. ರಾಮನಗರದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ತಂದು ಶಾಸಕನನ್ನಾಗಿ ಸುರೇಶ್ ಮಾಡಿದರು. ಚನ್ನಪಟ್ಟಣದವರಿಗೆ ಸ್ವಾಭಿಮಾನ ಇಲ್ಲ. ತಾಲೂಕಿಗೆ ನೀರುಕೊಟ್ಟ ಸಿಪಿವೈ ಸೋಲಿಸಿದಿರಿ. ನೀರು ಕೊಟ್ಟ ಯೋಗೇಶ್ವರ್‌ಗೆ ವಿಷ ಹಾಕಿದಿರಿ. ನಿಮಗೆ ದೇವರು ಒಳ್ಳೆಯದು ಮಾಡಲ್ಲ. ಈಗ ಸ್ವಾಭಿಮಾನ ಬೆಳೆಸಿಕೊಳ್ಳಿ ಯೋಗೇಶ್ವರ್ ಅವರನ್ನು ಗೆಲ್ಲಿಸಬೇಕು ಎಂದರು.