ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯದಲ್ಲಿ ಗ್ಯಾರಂಟಿ ಹೆಸರಿನಲ್ಲಿ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಬಡವರ ರಕ್ತವನ್ನು ತಿಗಣೆ ರೀತಿಯಲ್ಲಿ ಹೀರುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಎಲ್ಲ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದು ಎಂದುಕೊಂಡಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎರಡಂಕಿಯನ್ನೂ ದಾಟದ ಕಾಂಗ್ರೆಸ್ ಸೋಲಿನ ಕೋಪಕ್ಕೆ ಈಗ ಬೆಲೆ ಏರಿಕೆ ಪರ್ವ ಶುರುವಾಗಿದೆ. ಇನ್ನೂ ಮೇಲೆ ರಾಜ್ಯದಲ್ಲಿ ಬೆಲೆ ಏರಿಕೆ ನೋಡಬಹುದು ಎಂದು ಕಿಡಿಕಾರಿದರು. ಸಿಮೆಂಟ್, ಕಬ್ಬಿಣ ಸೇರಿದಂತೆ ಎಲ್ಲ ಸಾಮಗ್ರಿಗಳ ಬೆಲೆ ಏರಿಕೆ ಮಾಡಿದ್ದಲ್ಲದೇ ಹಾಲಿನ ಬೆಲೆ ₹2 ಏರಿಕೆ ಮಾಡಿದ್ದಾರೆ. ಕಳೆದ ವರ್ಷ ₹3 ಹೆಚ್ಚಿಸಲಾಗಿತ್ತಾದರೂ ಈಗ ಮತ್ತೆ ಬೆಲೆ ಏರಿಕೆ ಮಾಡಿದ್ದಾರೆ. ಬೆಳಗ್ಗೆ ಮಕ್ಕಳಿಗೆ ಹಾಲು ಕುಡಿಯಲು ಹೊರೆಯಾದರೆ, ಸಂಜೆ ಕೆಲಸ ಮಾಡಿ ಬರುವವರಿಗೆ ಆಲ್ಕೋಹಾಲ್ ಕುಡಿಯಲು ಹೊರೆಯಾಗಿದೆ ಎಂದು ದೂರಿದರು.ಚುನಾವಣೆ ಮೊದಲು ಬೆಲೆ ಕಡಿಮೆ ಮಾಡುವ ಭರವಸೆ ನೀಡಿದ್ದರು. ಸಿಎಂ ಸಿದ್ದರಾಮಯ್ಯಗೆ ಎಷ್ಟು ನಾಲಿಗೆ ಇದೆ. ನಮ್ಮಗೆ ಮಾನ, ಮಾರ್ಯಾದೆ ಇಲ್ಲಾ ಎಂದಿದ್ದರು. ಈಗ ಕಾಫಿ, ಟೀ ಕುಡಿಯಲು ಸಿದ್ದರಾಮಯ್ಯ ಸರ್ಕಾರ ಕಲ್ಲು ಹಾಕಿದೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ. ನಾಲ್ಕು ರಾಜ್ಯಗಳ ಚುನಾವಣೆಗೆ ಕಪ್ಪ ಕಾಣಿಕೆ ಕೊಡಲು ಏರಿಕೆ ಮಾಡಿದೆ. ರಾಹುಲ್ ಗಾಂಧಿಗೆ ಕಪ್ಪ ಕಾಣಿಕೆ ಕೊಡಲಿದ್ದಾರೆ. ಈ ರೀತಿ ಲೂಟಿ ಹೊಡೆಯುವ ಲೂಟಿಕೊರ ತಂಡಕ್ಕೆ ಮುಂಬರುವ ಜಿಪಂ, ತಾಪಂ, ಬೆಂಗಳೂರು ಪಾಲಿಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದು ಹರಿಹಾಯ್ದರು.ಬಡವರನ್ನು ಸರ್ವನಾಶ ಮಾಡಲು ಬೆಲೆ ಏರಿಕೆ ಮಾಡುತ್ತಿದ್ದಾರೆ. ಇದೇನಾ ಸಿದ್ದರಾಮಯ್ಯ ನುಡಿದಂತೆ ನಡೆದಿರೋದು. ಜನರ ಶಾಪ್ ನಿಮಗೆ ತಟ್ಟಲಿದೆ. ಬಸ್ ದರ ಏರಿಕೆಗೂ ಈ ಸರ್ಕಾರ ತಯಾರಿ ಮಾಡಿಕೊಂಡಿದೆ. ಅಧಿಕಾರಿಗಳಿಂಸ ಈಗಾಗಲೇ ವರದಿ ತರೆಸಿಕೊಂಡ ಮಾಹಿತಿ ಇದೆ. ಈ ಸರ್ಕಾರ ಅಲಿಬಾಬಾ ಮತ್ತು ಕಳ್ಳರ ಸರ್ಕಾರ ಎಂದು ದೂರಿದರು. ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ವಿಧಾನಸೌಧದಿಂದ ಸಿಎಂ ಮನೆಗೆ ಮುತ್ತಿಗೆ ಕಾರ್ಯಕ್ರಮ ಇದೆ. ಮನೆಯಿಂದ ಸಿಎಂ ಹೊರಬರದಂತೆ ದಿಗ್ಭಂದನ ಹಾಕುತ್ತೇವೆ. ಜು.3 ಅಥವಾ ಜು.4 ರಂದು ಮುತ್ತಿಗೆ ಹಾಕಲು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.ಪ್ರಜ್ವಲ್ ರೇವಣ್ಣ ಪ್ರಕರಣ ವೈಯಕ್ತಿಕ ವಿಚಾರ ಇದೆ. ನೀವು ಎಸ್ಸಿ ಗಳಿಗೆ ಮೀಸಲಿಟ್ಟ ಹಣ ಲೂಟಿ ಹೊಡೆದಿದ್ದರಲ್ಲ. ₹187 ಕೋಟಿ ಹಣವನ್ನು ಕಾಂಗ್ರೆಸ್
ಸರ್ಕಾರದ ಅವಧಿಯಲ್ಲಿ ಆಗಿದೆ. ಅದರ ಬಗ್ಗೆ ಏನು ಹೇಳುತ್ತಿರಿ ಎಂದು ಪ್ರಿಯಾಂಕ್ ಖರ್ಗೆಗೆ ಪ್ರಶ್ನಿಸಿದರು.ಕಳೆದ 20 ವರ್ಷಗಳಿಂದ ಡಿಕೆಶಿ ಚನ್ನಪಟ್ಟಣಕ್ಕೆ ಹೆಜ್ಜೆ ಇಟ್ಟಿಲ್ಲ, ಚುನಾವಣೆಗಾಗಿ ಹೊರಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲೇ ಬಿಜೆಪಿಗೆ 20 ಸಾವಿರ ಲೀಡ್ ಬಂದಿದೆ. ಡಿಕೆಶಿ ನಾಟಕಗಳನ್ನು ಚನ್ನಪಟ್ಟಣದ ಜನ ನೋಡಿದ್ದಾರೆ. ಚನ್ನಪಟ್ಟಣ ಜನ ಡಿಕೆ ಶಿವಕುಮಾರ, ಡಿಕೆ ಸುರೇಶಗೆ ಬೆಂಬಲಿಸಲ್ಲ. ಲೋಕಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಮಾನ, ಮಾರ್ಯಾದೆ ಹೋಗಿದೆ. ಹೀಗಿದ್ದರೂ ಚನ್ನಪಟ್ಟಣದತ್ತ ಮುಖ ಮಾಡುತ್ತಿದ್ದಾರೆ ಎಂದರೆ ಇವರೆಂಥ ಜನ ಅನ್ನೋದು ಜನರಿಗೆ ಅರ್ಥ ಆಗಿದೆ. ಡಿಕೆಶಿ ನಾಟಕ ಚನ್ನಪಟ್ಟಣದಲ್ಲಿ ನಡೆಯಲ್ಲ, ಮೈತ್ರಿ ಅಭ್ಯರ್ಥಿಯೇ ಅಲ್ಲಿ ಗೆಲ್ಲುವುದು ಎಂದು ಭವಿಷ್ಯ ನುಡಿದರು.ಡಿಸಿಎಂ ಹೆಚ್ಚಳ ಸಂಬಂಧ ಕಾಂಗ್ರೆಸ್ ನಾಯಕರ ಬೇಡಿಕೆ ವಿಚಾರಕ್ಕೆ ಸರ್ಕಾರ ಬಂದಾಗಿನಿಂದ ಈ ಒಳಜಗಳ ಇದ್ದೆ ಇದೆ. ಲೋಕಸಭೆ ಚುನಾವಣೆಯಲ್ಲಿ 142 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿದೆ. ಮುಂದೆ ನಮ್ಮ ಸರ್ಕಾರ ಬರಲ್ಲ ಎಂಬ ಭಾವನೆಯಿಂದ ಡಿಸಿಎಂಗೆ ಪಟ್ಟುಹಿಡಿತಿರಬಹುದು. ಏನೇನು ಆಗಬೇಕೋ ಇದೆ ಸರ್ಕಾರದಲ್ಲಿ ಆಗೋಣ ಎಂದು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್‌ನಲ್ಲಿ ಐದಾರು ಜನ ಡಿಸಿಎಂ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ. ಈ ಜಗಳದ ಮೂಲ ಸೂತ್ರದಾರರೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದರು.ಸಿದ್ದರಾಮಯ್ಯನವರು ತಮ್ಮ ಖುರ್ಚಿ ಉಳಿಸಿಕೊಳ್ಳಲು ಡಿಸಿಎಂ ಚರ್ಚೆ ಮುನ್ನಲೆಗೆ ತಂದಿದ್ದಾರೆ. ಸಿದ್ದರಾಮಯ್ಯನವರೇ ಡಿ.ಕೆ.ಸುರೇಶ ಅವರನ್ನು ಸೋಲಿಸಿದ್ದಾಗಿದೆ. ಹಿಂದೆ ಪರಮೇಶ್ವರರನ್ನು ಸೋಲಿಸಿದ್ದಾರೆ. ಸಿಎಂ ಸ್ಥಾನ ಗಟ್ಟಿ ಮಾಡಿಕೊಳ್ಳಲು ಡಿಸಿಎಂ ಸ್ಥಾನ ಹೆಚ್ಚಳದ ಆಟ ಆಡುತ್ತಿದ್ದಾರೆ. ಕಾಂಗ್ರೆಸ್ ಈಗ ಗೊಂದಲದ ಗೂಡಾಗಿದೆ, ಒಗ್ಗಟ್ಟು ಇಲ್ಲದಂತಾಗಿದೆ ಎಂದು ಲೇವಡಿ ಮಾಡಿದರು. ಕೋಟ್...ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಹಣವೇ ಇಲ್ಲದಕ್ಕೆ ತೆರಿಗೆ ಹೆಚ್ಚಳ ಮಾಡ್ತಿದ್ದಾರೆ. ಜಿಪಂ, ತಾಪಂ ಚುನಾವಣೆ ಬಳಿಕ ಬಸ್ ದರವನ್ನು ಹೆಚ್ಚಳ ಆಗುವುದಿದೆ. ಜಿಪಂ, ತಾಪಂ ಚುನಾವಣೆಯಲ್ಲಿ ಯಾರೂ ಗೆಲ್ಲದಂತೆ ನೋಡಿಕೊಳ್ಳಬೇಕು. ಈ ಪಾಠ ಕಲಿಸಿದರೇ ಬೆಲೆ ಏರಿಕೆಯಿಂದ ಹಿಂದೆ ಸರಿಯುತ್ತಾರೆ. ಕಾಂಗ್ರೆಸ್ ಕುತಂತ್ರಿ ಬುದ್ಧಿಯಿಂದ ರಾಜ್ಯದ ಜನ ಎಚ್ಚರಿಕೆಯಿಂದ ಇರಬೇಕು.
-ಆರ್.ಅಶೋಕ, ವಿಪಕ್ಷ ನಾಯಕ.