ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ತಾವು ವೀಕ್ಷಕರಾಗಿರುವ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಬಹುದಾದ ಮೂರರಿಂದ ಐವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಮುಂದಿನ ಒಂದು ವಾರದೊಳಗೆ ಸಿದ್ಧಪಡಿಸಿ ಪಕ್ಷಕ್ಕೆ ಸಲ್ಲಿಸಿ ಎಂದು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಾದ ಗುರಿಯನ್ನು ಹೈಕಮಾಂಡ್ ನೀಡಿದೆ. ಅದಕ್ಕೆ ತಕ್ಕಂತೆ ಕಾರ್ಯತಂತ್ರ ರೂಪಿಸಬೇಕು. ಇದಾಗ ಬೇಕಾದರೆ ಮೊದಲು ಸಂಭಾವ್ಯರ ಪಟ್ಟಿ ಸಿದ್ಧವಾಗಬೇಕು. ಈ ಬಗ್ಗೆ ಈ ಹಿಂದೆಯೇ ಸೂಚನೆ ನೀಡಿದ್ದರೂ ಹಲವು ಸಚಿವರು ಇನ್ನೂ ಪಟ್ಟಿ ಸಿದ್ಧಪಡಿಸಿಲ್ಲ. ಇನ್ನಾದರೂ ತಳ ಮಟ್ಟಕ್ಕಿಳಿದು ಪರಿಶೀಲನೆ ನಡೆಸಿ ಗೆಲ್ಲುವ ಸಂಭಾವ್ಯರ ಪಟ್ಟಿ ಸಿದ್ಧಪಡಿಸಿ ಎಂಬ ಸೂಚನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಲೋಕಸಭಾ ಚುನಾವಣೆ ಸಿದ್ಧತೆ ಕುರಿತು ಚರ್ಚಿಸಲು ಶನಿವಾರ ಸ್ವಗೃಹ ಕಾವೇರಿಯಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದ ವೇಳೆ ಮುಖ್ಯಮಂತ್ರಿಯವರು ಈ ತಾಕೀತು ಮಾಡಿದರು ಎನ್ನಲಾಗಿದೆ.ಲೋಕಸಭಾ ಚುನಾವಣೆಗಾಗಿ ಎಲ್ಲ 28 ಕ್ಷೇತ್ರಗಳಿಗೂ ಒಬ್ಬೊಬ್ಬ ಸಚಿವರನ್ನು ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ. ಅವರು ತಮಗೆ ನೀಡಿದ ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಲಾಗಿತ್ತು. ಆದರೆ, ಕೆಲ ಕ್ಷೇತ್ರಗಳಲ್ಲಿ ನಿಧಾನಗತಿಯಲ್ಲಿ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಇದರ ಬಗ್ಗೆ ಹೈಕಮಾಂಡ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಹೀಗಾಗಿ, ಎಲ್ಲರೂ ಅರ್ಹ ಅಭ್ಯರ್ಥಿ ಆಯ್ಕೆ ಬಗ್ಗೆ ಹೆಚ್ಚಿನ ಗಮನಕೊಡಬೇಕು. ಸ್ಥಳೀಯ ನಾಯಕರು, ಕಾರ್ಯಕರ್ತರ ಅಭಿಪ್ರಾಯದಂತೆ ಪ್ರತಿ ಕ್ಷೇತ್ರದಿಂದ ಗೆಲ್ಲಬಹುದಾದ 3 ರಿಂದ 5 ಮಂದಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ಕೊಡಬೇಕು ಎಂದು ಸಿದ್ದರಾಮಯ್ಯ ಸಚಿವರಿಗೆ ಸೂಚಿಸಿದರು.ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ನಂತರ ಅವರಲ್ಲಿ ಯಾರು ಅಭ್ಯರ್ಥಿಯಾಗಲು ಸೂಕ್ತ ಹಾಗೂ ಗೆಲ್ಲುವ ಅಭ್ಯರ್ಥಿ ಯಾರು ಎಂಬ ಬಗ್ಗೆ ಬೂತ್ ಮತ್ತು ತಾಲೂಕು ಮಟ್ಟದಲ್ಲಿ ಸರ್ವೇ ನಡೆಸಬೇಕು. ಆ ಸರ್ವೇ ವರದಿಯನ್ನೂ ತಮಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಬೇಕು ಎಂದೂ ತಿಳಿಸಿದರು.ಸರ್ಕಾರದ ಪರ ಅಭಿಪ್ರಾಯ ಮೂಡಿಸಿ:ಗ್ಯಾರಂಟಿ ಯೋಜನೆಗಳು ಈಗಾಗಲೇ ರಾಜ್ಯಾದ್ಯಂತ ಯಶಸ್ವಿಯಾಗಿವೆ. ಅದರ ಬಗ್ಗೆ ಜನರು ಉತ್ತಮ ಅಭಿಪ್ರಾಯವನ್ನೂ ಹೊಂದಿದ್ದಾರೆ. ಆದರೂ, ಇನ್ನಷ್ಟು ಪರಿಣಾಮಕಾರಿಯಾಗಿ ಜನಾಭಿಪ್ರಾಯ ಮೂಡಿಸಬೇಕು. ಅದರಲ್ಲೂ ಸರ್ಕಾರದ ವರ್ಚಸ್ಸು ಹೆಚ್ಚುವಂತಹ ಕೆಲಸಗಳನ್ನು ಉಸ್ತುವಾರಿ ಸಚಿವರು ಮಾಡಬೇಕು. ಅದರ ಜತೆಗೆ ಬರ ನಿರ್ವಹಣೆಯತ್ತ ಹೆಚ್ಚಿನ ಗಮನಕೊಡಬೇಕು ಹಾಗೂ ಕೇಂದ್ರ ಸರ್ಕಾರ ಬರ ಪರಿಹಾರ ನೀಡದಿರುವುದು, ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಜನರಿಗೆ ಮನದಟ್ಟು ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಸಚಿವರಿಗೆ ಹೇಳಿದರು.20 ಸ್ಥಾನ ಗೆಲ್ಲುವುದು ನಮ್ಮ ಗುರಿ:
ಸಭೆಯುದ್ದಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ 20 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಏನೆಲ್ಲ ತಯಾರಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ ಕಾಂಗ್ರೆಸ್ ಸುಲಭವಾಗಿ ಗೆಲ್ಲಬಹುದಾದ ಕ್ಷೇತ್ರಗಳು, ಸ್ವಲ್ಪ ಕಷ್ಟ ಎನ್ನುವಂತಹ ಹಾಗೂ ಗೆಲ್ಲಲು ಅಸಾಧ್ಯ ಎನ್ನುವಂತಹ ಕ್ಷೇತ್ರಗಳ ಪಟ್ಟಿ ಮಾಡಿ ಯಾವ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಕೊಡಬೇಕು ಎಂಬ ಬಗ್ಗೆ ಕಾರ್ಯತಂತ್ರ ರೂಪಿಸುವ ಬಗ್ಗೆಯೂ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.ಒಟ್ಟಾರೆ ಹೈಕಮಾಂಡ್‌ಗೆ ನಾವು ಮಾತು ನೀಡಿದಂತೆ ರಾಜ್ಯದಲ್ಲಿ ಕನಿಷ್ಠ 20 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಬೇಕು. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಸಚಿವರು ಈಗಿನಿಂದಲೇ ಮಾಡಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸಚಿವರಿಗೆ ತಿಳಿಸಿದ್ದಾರೆ.