ಸಾರಾಂಶ
ನವದೆಹಲಿ : ಮೂರು ದಿನಗಳ ದೆಹಲಿ ಪ್ರವಾಸದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರು ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಅವರು ಬುಧವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಜೊತೆ ಒನ್ ಟು ಒನ್ ಮಾತುಕತೆ ನಡೆಸಿದರು.
ಕಾಂಗ್ರೆಸ್ನಲ್ಲಿ ‘ಲಂಚ’ದ ಆಡಿಯೋ ಬಿರುಗಾಳಿ ನಡುವೆ ನಡೆದ ವರಿಷ್ಠರ ಜೊತೆಗಿನ ಈ ಭೇಟಿ ಸಾಕಷ್ಟು ಮಹತ್ವ ಪಡೆದಿದೆ. ಬುಧವಾರ ಬೆಳಗ್ಗೆ ಖರ್ಗೆ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ, ಶಾಸಕರ ಅಸಮಾಧಾನ, ವಸತಿಗಾಗಿ ಲಂಚ ಪ್ರಕರಣ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದರು. ಪಕ್ಷಕ್ಕೆ ಮುಜುಗರ ತರುವಂತಹ ವಿಷಯಗಳ ಕುರಿತು ಬಹಿರಂಗ ಹೇಳಿಕೆ ನೀಡದಂತೆ ಶಾಸಕರಿಗೆ ಎಚ್ಚರಿಕೆ ನೀಡಿ. ಸಮಸ್ಯೆ ಬಂದ ಕೂಡಲೇ ತಕ್ಷಣ ಅದಕ್ಕೆ ಸ್ಪಂದಿಸಿ, ಸಮಸ್ಯೆ ಬಗೆಹರಿಸಿ ಎಂದು ಖರ್ಗೆಯವರು ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.
ಬಳಿಕ, ಸಿದ್ದರಾಮಯ್ಯನವರು ವೇಣುಗೋಪಾಲ್ ಅವರ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದರು. ಅಲ್ಲಿ ಬಿ.ಆರ್.ಪಾಟೀಲ್ ಹೇಳಿಕೆ ಕುರಿತು ಗಂಭೀರ ಚರ್ಚೆ ನಡೆಯಿತು. ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು ಎಂದು ತಿಳಿದು ಬಂದಿದೆ. ಬಳಿಕ. ಸುರ್ಜೇವಾಲ ಅವರನ್ನು ಸಿಎಂ ಭೇಟಿ ಮಾಡಿ, ಮಾತುಕತೆ ನಡೆಸಿದರು.
ಸಿದ್ದು-ಸತೀಶ್ ಜಾರಕಿಹೊಳಿ ಮಾತುಕತೆ:
ದೆಹಲಿಯ ಕರ್ನಾಟಕ ಭವನದಲ್ಲಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಸುಮಾರು 20 ನಿಮಿಷ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು, ಈ ಮಾತುಕತೆ ಕುತೂಹಲ ಮೂಡಿಸಿದೆ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಸತೀಶ್ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
;Resize=(690,390))
;Resize=(128,128))
;Resize=(128,128))
;Resize=(128,128))