ಕನ್ನಡಪ್ರಭ ವಾರ್ತೆ ಬೆಂಗಳೂರು
‘ಮೃತ ಫಲಾನುಭವಿಗಳು, ಕರ್ನಾಟಕದಲ್ಲಿ ನೆಲೆಸಿರುವ ಅನ್ಯ ರಾಜ್ಯಗಳ ಮತದಾರರು ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ, ಬೇರೆ ರಾಜ್ಯದ ಬ್ಯಾಂಕ್ ಖಾತೆಗಳಿಗೆ ಗ್ಯಾರಂಟಿ ಹಣ ಹೋಗುತ್ತಿದೆ. ಅಂಥದ್ದನ್ನು ಪತ್ತೆ ಹಚ್ಚಿ. ಇದೇ ರೀತಿ ಇನ್ನೂ ಯಾವ್ಯಾವ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳ ದುರುಪಯೋಗ ಆಗುತ್ತಿದೆಯೋ ಅದೆಲ್ಲದಕ್ಕೂ ಕೂಡಲೇ ಕತ್ತರಿ ಹಾಕಲು ಕ್ರಮ ಕೈಗೊಳ್ಳಿ. ಆದರೆ, ಒಬ್ಬೇ ಒಬ್ಬ ಅರ್ಹ ಫಲಾನುಭವಿಗೂ ತೊಂದರೆ ಆಗದಂತೆ ನೋಡಿಕೊಳ್ಳಿ...’ಇದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧದಲ್ಲಿ ಶುಕ್ರವಾರ ನಡೆಸಿದ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನೀಡಿರುವ ಸ್ಪಷ್ಟ ನಿರ್ದೇಶನಗಳು.
ಗ್ಯಾರಂಟಿಗಳ ಪೈಕಿ ಗೃಹಜ್ಯೋತಿ ಯೋಜನೆ ಜಾರಿ ವೇಳೆ ಹೆಚ್ಚಿನ ದುರುಪಯೋಗ ಆಗದ ರೀತಿ ಹಿಂದೆಯೇ ಎಚ್ಚರಿಕೆ ವಹಿಸಲಾಗಿದೆ. ಇದೇ ಎಚ್ಚರಿಕೆ ಗೃಹಲಕ್ಷ್ಮಿ ಸೇರಿ ಇತರೆ ಗ್ಯಾರಂಟಿ ಯೋಜನೆಗಳಲ್ಲೂ ಅನುಸರಿಸಿದ್ದರೆ ದುರುಪಯೋಗದ ಪ್ರಮಾಣ ಕಡಿಮೆ ಆಗುತ್ತಿತ್ತು. ಆದರೆ, ಅಷ್ಟು ಎಚ್ಚರಿಕೆ ವಹಿಸದ ಕಾರಣ ದುರುಪಯೋಗ ಹೆಚ್ಚಾಗಿದೆ. ಮೃತಪಟ್ಟಿರುವ ಫಲಾನುಭವಿಗಳಿಗೂ ಗೃಹಲಕ್ಷ್ಮಿ ಹಣ ಹೋಗುತ್ತಿರುವುದು ಪತ್ತೆಯಾಗಿದೆ.ವಾಸದ ಮನೆಗೆ ಗೃಹಜ್ಯೋತಿ ಯೋಜನೆ ಪಡೆದು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ಪ್ರಕರಣಗಳು ಕಂಡುಬಂದಿವೆ. ಇವೆಲ್ಲವೂ ಸಂಪೂರ್ಣ ನಿಲ್ಲಬೇಕು ಎಂದು ಸೂಚಿಸಿದರು. ಈ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಯಲ್ಲಿ ಬರುತ್ತಿರುವ ಎರಡು ಪ್ರಮುಖ ತಾಂತ್ರಿಕ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಕೂಲಂಕಷ ಚರ್ಚೆ ನಡೆಸಲಾಗಿದ್ದು, ಮರಣ ಹೊಂದಿದ ಫಲಾನುಭವಿಗಳ ಸಂಖ್ಯೆ ಸಕಾಲದಲ್ಲಿ ದೊರೆಯದಿರುವ ಬಗ್ಗೆ ಇ-ಕೆವೈಸಿ ಹಾಗೂ ಬ್ಯಾಂಕ್ ಖಾತೆ/ಎನ್‌ಪಿಸಿಐ ನಿಷ್ಕ್ರಿಯವಾಗಿರುವ ಫಲಾನುಭವಿಗಳ ಕುರಿತು ಚರ್ಚೆ ನಡೆಸಲಾಯಿತು.ಅನ್ಯ ರಾಜ್ಯದ ಖಾತೆಗೆ ಗ್ಯಾರಂಟಿ ಹಣ ಬೇಡ:
ಗ್ಯಾರಂಟಿ ಯೋಜನೆಗಳು ನಮ್ಮ ರಾಜ್ಯದ ಜನರು, ಮತದಾರರಿಗೆ ಮಾತ್ರ ಸಿಗಬೇಕು. ಕರ್ನಾಟಕ ರಾಜ್ಯದ ಬ್ಯಾಂಕ್ ಖಾತೆಗಳಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಹಣ ನೀಡಬೇಕು. ಆದರೆ, ಅನ್ಯ ರಾಜ್ಯಗಳ ಮತದಾರರೂ ಕೆಲವೆಡೆ ಯೋಜನೆ ಲಾಭ ಪಡೆಯುತ್ತಿರುವುದು ಕಂಡುಬಂದಿದೆ. ಇತರೆ ರಾಜ್ಯಗಳಲ್ಲಿರುವ ಖಾತೆಗಳಿಗೂ ಹಣ ಹೋಗುತ್ತಿರುವುದು ಪತ್ತೆಯಾಗಿದೆ. ಹಾಗಾಗಿ ಹೊರ ರಾಜ್ಯದಿಂದ ಇಲ್ಲಿಗೆ ಬಂದು ನೆಲೆಸಿ ಗೃಹಲಕ್ಷ್ಮಿ, ಗೃಹ ಜ್ಯೋತಿ ಲಾಭ ಪಡೆಯುತ್ತಿರುವವರ ಮಾಹಿತಿ ಸಂಗ್ರಹಿಸಿ. ಒಟ್ಟಾರೆ ಯಾವ್ಯಾವ ರೀತಿಯಲ್ಲಿ ದುರುಪಯೋಗ ಆಗುತ್ತಿದೆ? ಎಷ್ಟು ಮಂದಿ ಅನರ್ಹರು ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಎಲ್ಲವನ್ನೂ ಪತ್ತೆ ಹಚ್ಚಿ ಕಡಿವಾಣ ಹಾಕಬೇಕು ಎಂದು ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ.
ಗೃಹಲಕ್ಷ್ಮಿ ಹಣ ಜಮೆ ಆದಾಗ ವಾಯ್ಸ್ ಮೆಸೇಜ್ ಬರುತ್ತೆ:
ದುರುಪಯೋಗ, ಅನರ್ಹರ ಪತ್ತೆ ವೇಳೆ ಒಬ್ಬ ಅರ್ಹರಿಗೂ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಹಲವು ಫಲಾನುಭವಿಗಳು ಬ್ಯಾಂಕ್ ಸಾಲ ಪಡೆದಿರುತ್ತಾರೆ. ಸಾಲದ ಖಾತೆಗೆ ಗೃಹಲಕ್ಷ್ಮಿ ಹಣ ಹೋದ ತಕ್ಷಣ ಆ ಹಣ ಸಾಲದ ಮೊತ್ತಕ್ಕೆ ಜಮೆ ಆಗಿಬಿಡುತ್ತದೆ. ಆದ್ದರಿಂದ ಅಂಥ ಫಲಾನುಭವಿಗಳು ಖಾತೆ ಬದಲಾಯಿಸಿರುತ್ತಾರೆ. ಇಂಥ ಫಲಾನುಭವಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ. ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾದ ತಕ್ಷಣ ಅವರ ಮೊಬೈಲ್‌ಗೆ ಧ್ವನಿ ಸಂದೇಶದ ಮೂಲಕ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.ಒಂದೇ ಖಾತೆಗೆ ಹಲವು ಫಲಾನುಭವಿಗಳ ಹಣ:ಒಂದೇ ಬ್ಯಾಂಕ್ ಖಾತೆಯಲ್ಲಿ ಒಬ್ಬರಿಗಿಂತ ಹೆಚ್ಚು ಫಲಾನುಭವಿಗಳು ಗೃಹಲಕ್ಷ್ಮಿ ಹಣ ಪಡೆಯುತ್ತಿರುವುದುನ್ನು ಅಕೌಂಟೆಂಟ್ ಜನರಲ್ ವರದಿ ಬೆಳಕು ಚೆಲ್ಲಿದೆ. ಈ ರೀತಿ ಮೂರು ಲಕ್ಷ ಕಂತುಗಳಲ್ಲಿ ಒಟ್ಟು 60 ಕೋಟಿ ರು. ಹೋಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಒಬ್ಬರೇ ಹಲವು ಖಾತೆಗಳನ್ನು ನೋಂದಾಯಿಸಿರುವುದೂ ಎಜಿ ವರದಿಯಲ್ಲಿ ಉಲ್ಲೇಖವಾಗಿದೆ. ಇದರಿಂದ ಹಿಂದೆ ಪಡೆದ ಅರ್ಜಿಗಳಲ್ಲಿ ಉಲ್ಲೇಖವಾಗಿರುವ ಅಂಶಗಳ ನೈಜತೆ ಪರಿಶೀಲನೆ ಆಗದಿರುವುದು ಕಂಡುಬರುತ್ತಿದೆ.
ಯಾವ ಕಾರಣಕ್ಕಾಗಿ ಈ ರೀತಿ ಒಂದೇ ಖಾತೆಯಲ್ಲಿ ಹಲವು ಫಲಾನುಭವಿಗಳು ಗ್ಯಾರಂಟಿ ಹಣ ಪಡೆಯುತ್ತಿದ್ದಾರೆ ಎಂದು ಪರಿಶೀಲಿಸಬೇಕು. ಮಾಹಿತಿ ಕೊರತೆ, ಅನಕ್ಷರತೆ ಮತ್ತಿತರ ಕಾರಣಗಳಿಂದ ನೈಜ ಫಲಾನುಭವಿಗಳು ಸಂಬಂಧಿಕರಾಗಿದ್ದು ಒಂದೇ ಖಾತೆಗೆ ಹಣ ಹೋಗುತ್ತಿದ್ದರೆ ಅಂಥವರಿಗೂ ತೊಂದರೆ ಆಗಬಾರದು. ಆದರೆ, ಪ್ರತ್ಯೇಕ ಖಾತೆ ತೆರೆಯುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.ಉಳಿದಂತೆ ಸಭೆಯಲ್ಲಿ ಅಧಿಕಾರಿಗಳು ಶಕ್ತಿ ಯೋಜನೆಯಡಿ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಫಲಾನುಭವಿಗಳಾದ ಮಹಿಳೆಯರು ಮೇ ಅಂತ್ಯದವರೆಗೆ 763 ಕೋಟಿ ಟ್ರಿಪ್ ಮಾಡಿದ್ದಾರೆ. ಅವರಿಗೆ ಇದುವರೆಗೆ ವಿನಿಯೋಗಿಸಲಾದ ಟಿಕೆಟ್ ಮೌಲ್ಯ 20,047.69 ಕೋಟಿ ರು. ಇನ್ನು, 2026-27ನೇ ಸಾಲಿನಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿ ಎಲ್ಲ ವಿದ್ಯಾರ್ಥಿಗಳಿಗೂ 10 ಲಕ್ಷ ಉಚಿತ ಬಸ್ ಪಾಸ್‌ಗಳನ್ನು ವಿತರಿಸಲು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೃಹ ಜ್ಯೋತಿ ಯೋಜನೆಯಡಿ ಮೇ ಅಂತ್ಯದವರೆಗೆ 1.65 ಕೋಟಿ ಫಲಾನುಭವಿಗಳು ಯೋಜನೆಯ ಲಾಭ ಪಡೆದಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 11,561 ಕೋಟಿ ರು. ಅನ್ನು ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಜುಲೈ-2023 ರಿಂದ ಡಿಸೆಂಬರ್-2024ರ ವರೆಗೆ ಒಟ್ಟು 72,02,33,970 ಫಲಾನುಭವಿಗಳಿಗೆ ಒಟ್ಟು 11,561.05 ಕೋಟಿ ರು. ಅನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿರುತ್ತದೆ. ನಂತರ 2025ನೇ ಫೆಬ್ರವರಿ ತಿಂಗಳಿನಿಂದ ಇಲ್ಲಿಯವರೆಗೆ ಪ್ರಸ್ತುತ ರಾಜ್ಯದಲ್ಲಿರುವ ಒಟ್ಟು 4,44,67,942 ಫಲಾನುಭವಿಗಳಿಗೆ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ ಎಂದು ಆಯಾ ಇಲಾಖಾ ಅಧಿಕಾರಿಗಳು ಸಭೆಗೆ ಅಂಕಿ-ಅಂಶ ಒದಗಿಸಿದರು.ಉಳ್ಳವರು ಗ್ಯಾರಂಟಿ ಬಿಟ್ಟರೆ ಪ್ರೋತ್ಸಾಹಿಸಿ:ಅನುಕೂಲಸ್ಥರು ಯಾರಾದರೂ ಗ್ಯಾರಂಟಿ ಯೋಜನೆಗಳನ್ನು ಸ್ವಯಂಪ್ರೇರಿತವಾಗಿ ಬಿಟ್ಟು ಕೊಡಲು ಮುಂದಾದರೆ ಅಂಥವರನ್ನು ಪ್ರೋತ್ಸಾಹಿಸಬೇಕು. ಅಂಥವರ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಇನ್ನಷ್ಟು ಉಳ್ಳವರು ಗ್ಯಾರಂಟಿಗಳನ್ನು ಬಿಟ್ಟುಕೊಡುವ ಮೂಲಕ ಇತರೆ ಅರ್ಹ ಫಲಾನುಭವವಿಗಳಿಗೆ ನೆರವಾಗುವಂತೆ ನೋಡಿಕೊಳ್ಳಬೇಕು ಎಂದು ಇದೇ ವೇಳೆ ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಅಲ್ಲದೆ, ಮತಪಟ್ಟಿಯಲ್ಲಿ ಹೆಸರಿರುವ ಮತದಾರರು ಮಾತ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿರುತ್ತಾರೆ. ಆದ್ದರಿಂದ ವಿಶೇಷ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ಫಲಾನುಭವಿಗಳು ತಮ್ಮ ಹೆಸರು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಯಿತು.ಕೇಂದ್ರದ ನೀತಿಗಳಿಂದ ಬಡವರು ಮತ್ತು ಮಧ್ಯಮ ವರ್ಗದವರ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆ, ಬೆಲೆ ಏರಿಕೆಯ ಪರಿಣಾಮಗಳು ಮತ್ತು ತಲಾ ಆದಾಯ ಕುಸಿಯುತ್ತಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಏರ್‌ಟೆಲ್ ಬ್ಯಾಂಕ್‌ನಲ್ಲಿ ಯುಪಿಎ ಖಾತೆಗಳನ್ನು ತೆಗೆದು ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾಗಿವೆ ಎಂದೂ ಇದೇ ವೇಳೆ ಅಧಿಕಾರಿಗಳು ಸಭೆ ಗಮನಕ್ಕೆ ತಂದರು.ಇಂದು ಸಂಪುಟ ಸಭೆದಲ್ಲಿ ಹೊಸ 2 ಖಾತೆ ಬಗ್ಗೆ ಮಹತ್ವದ ಚರ್ಚೆ?:
ರಾಜ್ಯದಲ್ಲಿ ಹೊಸದಾಗಿ ‘ಮುಖ್ಯಮಂತ್ರಿಗಳ ಜನಸ್ಪಂದನ ಮತ್ತು ಜನಹಿತ ಆಡಳಿತ ಇಲಾಖೆ’ ಹಾಗೂ ‘ಅನಿವಾಸಿ ಭಾರತೀಯ ವ್ಯವಹಾರಗಳ ಇಲಾಖೆ’ ರಚಿಸುವ ಬಗ್ಗೆ ಹಾಗೂ ವಿಧಾನಪರಿಷತ್‌ನ ಐದು ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಕುರಿತು ಶನಿವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯುವ ಸಾಧ್ಯತೆಯಿದೆ.ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರವಹಿಸಿಕೊಂಡ ಬಳಿಕ ಎರಡು ನೂತನ ಇಲಾಖೆ ಸ್ಥಾಪಿಸುವ ಕುರಿತು ಘೋಷಣೆ ಮಾಡಿದ್ದರು.ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಸಚಿವ ಸಂಪುಟ ಸಭೆ ಎದುರು ವಿಷಯ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಕಾರ್ಯದರ್ಶಿ ಅವರು ಪತ್ರ ಬರೆದಿದ್ದು, ಬಹುತೇಕ ಶನಿವಾರದ ಸಂಪುಟ ಸಭೆಗೆ ವಿಷಯ ಮಂಡನೆಯಾಗಲಿದೆ.5 ಸ್ಥಾನಗಳಿಗೆ ನಾಮ ನಿರ್ದೇಶನ: ಇನ್ನು ಜು.21ಕ್ಕೆ ಅಡಗೂರು ಎಚ್.ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತರಾಮ್ ಬುಡ್ನಸಿದ್ಧಿ, ಡಾ.ತಳವಾರ್ ಬಾಬಣ್ಣ ಹಾಗೂ ರಮೇಶ್ ಬಾಬು ಅವರ ನಾಮನಿರ್ದೇಶನದ ಅವಧಿ ಮುಕ್ತಾಯವಾಗಲಿದೆ. ಈ ಐದು ಸ್ಥಾನಗಳಿಗೆ ರಾಜ್ಯಪಾಲರ ಮೂಲಕ ನಾಮನಿರ್ದೇಶನಗೊಳ್ಳುವ ಕುರಿತು ಸಹ ಶನಿವಾರದ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ. ಪ್ರಸ್ತುತ ಏಳು ಸದಸ್ಯರಿಗೆ ನಡೆದ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್, ನಾಮನಿರ್ದೇಶನದ ಸ್ಥಾನಗಳಿಗೆ ಸಂಬಂಧಿಸಿ ಸಿದ್ಧತೆ ನಡೆಸಿದೆ. ಈ ಮೂಲಕ ವಿಧಾನಪರಿಷತ್‌ನಲ್ಲಿ ಬಲ ಮತ್ತಷ್ಟು ಹೆಚ್ಚಿಸಿಕೊಳ್ಳಲಿದೆ. ಜತೆಗೆ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆಯೂ ಚರ್ಚೆಯಾಗಲಿದೆ.2,200 ತರಗತಿ ಕೊಠಡಿಗಳ ನಿರ್ಮಾಣ:ಜತೆಗೆ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 360 ಕೋಟಿ ರು. ವೆಚ್ಚದಲ್ಲಿ 2,200 ತರಗತಿ ಕೊಠಡಿಗಳ ನಿರ್ಮಾಣ ಮಾಡುವ ಬಗ್ಗೆ, ಸಾರಿಗೆ ಇಲಾಖೆಯ ವಿವಿಧ ನಿಗಮಗಳಿಂದ ಬಸ್ಸುಗಳ ಖರೀದಿಸುವ ಬಗ್ಗೆ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕರಿಗೆ 63 ಕೋಟಿ ರು. ವೆಚ್ಚದಲ್ಲಿ ಫಾಸ್ಟ್ ಫುಡ್ ಟ್ರಕ್, ಟ್ರೈಲರ್, ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್ ಸೌಲಭ್ಯ ಕಲ್ಪಿಸುವ ಬಗ್ಗೆ ಚರ್ಚೆಯಾಗಲಿದೆ.ಇನ್ನು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ 3.32 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ, ವಾಣಿಜ್ಯ ಉದ್ದೇಶದ ಏಕನಿವೇಶನ ವಿನ್ಯಾಸ ನಕ್ಷೆ ಮಂಜೂರಿ ಮಾಡಿರುವುದಕ್ಕೆ ನಿಯಮಾನುಸಾರ ಪಾಔತಿಸಬೇಕಾಗಿದ್ದ ಶುಲ್ಕ, ಸೆಸ್ ಮತ್ತು ತೆರಿಗೆ ಸೇರಿ ₹45.76 ಲಕ್ಷಗಳಿಗೆ ವಿನಾಯಿತಿ ನೀಡುವ ಬಗ್ಗೆಯೂ ಪ್ರಸ್ತಾಪ ಆಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.