ಸಿಎಂ ಮುಖವಾಡ ಕಳಚಿದೆ, ರಾಜೀನಾಮೆ ನೀಡ್ತಾರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

| Published : Aug 24 2024, 01:34 AM IST / Updated: Aug 24 2024, 06:31 AM IST

BY Vijayendra
ಸಿಎಂ ಮುಖವಾಡ ಕಳಚಿದೆ, ರಾಜೀನಾಮೆ ನೀಡ್ತಾರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಾ ಹಗರಣ ಕೇವಲ 14 ನಿವೇಶನಕ್ಕೆ ಸೀಮಿತವಾದದ್ದಲ್ಲ. ₹ 5000 ಕೋಟಿಗೂ ಮೀರಿದ ಸಾವಿರಾರು ನಿವೇಶನಗಳ ಬಹುದೊಡ್ಡ ಹಗರಣವಾಗಿದೆ. ಸಿಎಂ ತವರು ಜಿಲ್ಲೆಯಲ್ಲಿ ಬಡವರನ್ನು ತಲುಪಬೇಕಿದ್ಧ ₹ 5000 ಕೋಟಿ ಬೆಲೆ ಬಾಳುವ ಸಾವಿರಾರು ಮೂಡಾ ನಿವೇಶನಗಳು ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ಕಾಂಗ್ರೆಸ್ ನಾಯಕರ ಪಾಲಾಗಿವೆ.

ಹುಬ್ಬಳ್ಳಿ/ಧಾರವಾಡ:  ವಾಲ್ಮೀಕಿ ನಿಗಮ ಮತ್ತು ಮೂಡಾ ಹಗರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಾಜವಾದಿ ಮುಖವಾಡ ಕಳಚಿ ಭ್ರಷ್ಟಾಚಾರದ ಕಳಂಕ ಮೆತ್ತಿಕೊಂಡಿದೆ. ಪರಿಣಾಮ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ಕೊಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಸಿಎಂ ಬದಲಾವಣೆ ಕುರಿತಂತೆ ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದಲ್ಲೇ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡಾ ಹಗರಣ ಕೇವಲ 14 ನಿವೇಶನಕ್ಕೆ ಸೀಮಿತವಾದದ್ದಲ್ಲ. ₹ 5000 ಕೋಟಿಗೂ ಮೀರಿದ ಸಾವಿರಾರು ನಿವೇಶನಗಳ ಬಹುದೊಡ್ಡ ಹಗರಣವಾಗಿದೆ. ಸಿಎಂ ತವರು ಜಿಲ್ಲೆಯಲ್ಲಿ ಬಡವರನ್ನು ತಲುಪಬೇಕಿದ್ಧ ₹ 5000 ಕೋಟಿ ಬೆಲೆ ಬಾಳುವ ಸಾವಿರಾರು ಮೂಡಾ ನಿವೇಶನಗಳು ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ಕಾಂಗ್ರೆಸ್ ನಾಯಕರ ಪಾಲಾಗಿವೆ ಎಂದು ಆರೋಪಿಸಿದ ವಿಜಯೇಂದ್ರ, ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ 14 ನಿವೇಶನ ಪಡೆದಿದ್ದಾರೆ. ಸಿಎಂ ಆದ 18 ತಿಂಗಳಲ್ಲಿ ಇದೊಂದು ಬಹುದೊಡ್ಡ ಹಗರಣವಾಗಿದೆ. ಹಾಗಾಗಿ ಬಿಜೆಪಿ ಸಿಬಿಐ ತನಿಖೆಗೆ ಒತ್ತಾಯಿಸುತ್ತಲೇ ಬಂದಿದೆ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ ಎಸ್‌ಐಟಿ ಸಲ್ಲಿಸಿರುವ ಚಾರ್ಜ್‌ಶೀಟನಲ್ಲಿ ನಾಗೇಂದ್ರ ಮತ್ತು ಬಸವರಾಜ ದದ್ದಲ್ ಹೆಸರಿಲ್ಲ. ಅವರನ್ನು ರಕ್ಷಿಸಲು ಮುಂದಾದರು. ಹಾಗಾಗಿ ವಾಲ್ಮೀಕಿ ಮತ್ತು ಮೂಡಾ ಹಗರಣ ಎರಡರಲ್ಲೂ ಎಸ್‌ಐಟಿ ತನಿಖೆಯಿಂದ ನ್ಯಾಯ ನಿರೀಕ್ಷೆ ಅಸಾಧ್ಯ. ಹೀಗಾಗಿ ಸಿಬಿಐಗೆ ವಹಿಸಲಿ ಎಂದು ಒತ್ತಾಯಿಸಿದರು.

ದೆಹಲಿ ಮಟ್ಟದಲ್ಲಿ ಚರ್ಚೆ:

ಸಿಎಂ ಸಿದ್ದರಾಮಯ್ಯ ವಿರುದ್ಧ ಹಗರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದೆಹಲಿ ಮಟ್ಟದಲ್ಲೇ ಚರ್ಚೆ ನಡೆಯುತ್ತಿದೆ. ಅವರ ಪಕ್ಷದ ಹೈಕಮಾಂಡ್‌ ಅವರ ಬದಲಾವಣೆ ಬಗ್ಗೆ ಆಲೋಚಿಸುತ್ತಿದೆ. ಇದರಿಂದ ಸಿದ್ದರಾಮಯ್ಯ ಶಾಸಕರ ಸಭೆ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಈ ಕಾರಣದಿಂದಲೇ ಅವರು ದೆಹಲಿ ನಾಯಕರ ಭೇಟಿಗೆ ಹೋಗಿದ್ದಾರೆ ಎಂದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬಂಡೆಗಲ್ಲಿನಂತೆ ಯಾವಗಲೂ ಸಿಎಂ ಹಿಂದೆ ಇರುತ್ತೇನೆ ಎಂದು ಹೇಳುತ್ತಿದ್ದಾರೆ. ಇವೆಲ್ಲವೂ ಸಿಎಂ ಬದಲಾವಣೆ ವಿಚಾರಕ್ಕೆ ಪುಷ್ಠಿ ನೀಡಿವೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಖಚಿತ ಎಂದು ಭವಿಷ್ಯ ನುಡಿದರು.

ಬೆದರಿಕೆಗೆ ಹೆದರಲ್ಲ:

ಸಿಎಂ ತಮ್ಮ ಮೇಲಿನ ಮುಡಾ ಹಗರಣದಿಂದ ನುಣುಚಿಕೊಳ್ಳಲು ಬಿ.ಎಸ್. ಯಡಿಯೂರಪ್ಪ ಹಾಗೂ ನಮ್ಮ ಕುಟುಂಬದ ವಿರುದ್ಧದ 15ಕ್ಕೂ ಹೆಚ್ಚು ಪ್ರಕರಣಗಳ ದಾಖಲೆ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಎಲ್ಲ ಪ್ರಕರಣಗಳಲ್ಲೂ ನ್ಯಾಯಾಲಯದಿಂದ ನಮಗೆ ನ್ಯಾಯ ಸಿಕ್ಕಿದೆ. ಇಂಥ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದರು.

ಹಿಂದೆ ತಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮೇಲೆ 33 ಪ್ರಕರಣ ದಾಖಲಿಸಿದ್ದರು. ಈಗ ಬಿಜೆಪಿ ನಾಯಕರ ಹಾಗೂ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದು, ತಾಕತ್ತಿದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್‌ನ್ನು ಬಿಜೆಪಿ ಮುಗಿಸುತ್ತದೆ ಎಂಬ ಸಚಿವ ದಿನೇಶ ಗುಂಡೂರಾವ್ ಹೇಳಿಕೆಗೆ, ಯಾರು, ಯಾರನ್ನು ಮುಗಿಸುತ್ತಾರೆ ಎಂಬುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ. ಮುಖ್ಯಮಂತ್ರಿ ನಿಷ್ಕಳಂಕ ರಾಜಕಾರಣಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದ ಜನರಿಗೆ ಅವರು ಹಗರಣಗಳಲ್ಲಿ ಪಾತ್ರವಿರುವುದು ಗೊತ್ತಾಗಿದೆ ಎಂದು ಕುಟುಕಿದರು.

ಸಿಎಂ ಹಾಗೂ ಡಿಸಿಎಂ ಅಧಿಕಾರಕ್ಕೆ ಬಂದು ಇಷ್ಟು ದಿನಗಳಾದರೂ ಉತ್ತರ ಕರ್ನಾಟಕದತ್ತ ಮುಖ ಮಾಡಿಲ್ಲ. ಇಲ್ಲಿಯ ಜನರ ಸಮಸ್ಯೆಗೆ ಸ್ಪಂದಿಸಿಲ್ಲ. ಸರ್ಕಾರಕ್ಕೆ ಉತ್ತರ ಕರ್ನಾಟಕದ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಹಿಂದಿನ ಬಿಜೆಪಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಹಲವಾರು ನೀರಾವರಿ ಯೋಜನೆ ತಂದಿದ್ದರು. ಅದಕ್ಕೂ ಇವರು ಕಲ್ಲು ಹಾಕಿದ್ದಾರೆ ಎಂದು ಆರೋಪಿಸಿದರು.