ಸಾರಾಂಶ
- ಕೊಮಾರನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿ ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ್ ಹೇಳಿಕೆ
- - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರುಭ್ರಷ್ಟ ಆಡಳಿತದ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಆ ದೇವರೇ ಬುದ್ಧಿ ಕಲಿಸಬೇಕು ಎಂದು ಶಾಸಕ ಬಿ.ಪಿ. ಹರೀಶ್ ಗೇಲಿ ಮಾಡಿದರು.
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಐತಿಹಾಸಿಕ ಕೆರೆ ಭರ್ತಿಯಾದ ಹಿನ್ನೆಲೆ ಸೋಮವಾರ ಬಾಗಿನ ಅರ್ಪಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಬೆಂಗಳೂರು-ಹರಿಹರ ಹೆದ್ದಾರಿ ಹಾಳಾಗಿ ಗುಂಡಿಗಳು ಬಿದ್ದಿವೆ. ಸೇವಾ ರಸ್ತೆಗಳು ಹಾಳಾಗಿವೆ. ಬೆಂಗಳೂರು ತಲುಪಲು 2 ಗಂಟೆಗಳ ಕಾಲ ಹೆಚ್ಚು ಸಮಯ ಬೇಕಾಗಿದೆ. ಸರ್ಕಾರದ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತ ಆಗಿರುವುದನ್ನು ರಸ್ತೆಗಳೇ ಹೇಳುತ್ತವೆ. ಅವಾಂತರಗಳ ಯೋಜನೆಗಳನ್ನು ಬಿಟ್ಟು ರಾಜ್ಯದ ಆರ್ಥಿಕಮಟ್ಟವನ್ನು ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರವನ್ನು ಹರೀಶ್ ಅವರು ಒತ್ತಾಯಿಸಿದರು.
ಭಂಡತನದಿಂದ ಸಿಎಂ ಆಡಳಿತ:ಈ ಹಿಂದೆಯೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಲ್ಲಿ ರಾಜ್ಯದಲ್ಲಿ ಭಾಜಪಾ ಸರ್ಕಾರ ಉತ್ತಮ ಆಡಳಿತ ನಡೆಸಿದ್ದು ಮುಖ್ಯಮಂತ್ರಿ ಅವರಿಗೂ ತಿಳಿದಿದೆ. ಸಿಎಂ ಸಿದ್ದರಾಮಯ್ಯರ ಮುಡಾ ಹಗರಣ, ಅವರ ಪತ್ನಿಯ ಹೆಸರಲ್ಲಿ ಕ್ಯೆಗಾರಿಕಾ ಪ್ರದೇಶದ ಸೈಟ್ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ವಂಚನೆಗೆ ಸಿಲುಕಿ ಸಿಎಂ ಭಂಡತನಕ್ಕೆ ಬಿದ್ದು ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಮಂತ್ರಿಗಳ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ದೇಶವನ್ನು ತಂದು ನಿಲ್ಲಿಸುವ ಉದ್ದೇಶಗಳಿಗೆ ರಾಜ್ಯದಲ್ಲಿ ತಣ್ಣೀರು ಹಾಕುತ್ತಿದ್ದಾರೆ. ಕಾಂಗ್ರೆಸ್ ಶಾಸಕರೇ ಅನುದಾನಕ್ಕೆ ಆತ್ಮಹತ್ಯೆಗೆ ಸಿದ್ಧರಾಗುವ ಸ್ಥಿತಿ ಬಂದಿದೆ ಎಂದರೆ ಶಾಸಕರಿಗೆ ವಿಶೇಷ ಅನುದಾನಕ್ಕೆ ಪದೇಪದೇ ಪತ್ರ ನೀಡಲಿಕ್ಕೂ ನಾಚಿಕೆ ಆಗುತ್ತಿದೆ. ಜನರೇ ಗ್ಯಾರಂಟಿ ಯೋಜನೆಗಳು ಬೇಡ, ರಾಜ್ಯದಲ್ಲಿ ಅಭಿವೃದ್ಧಿ ಬೇಕು ಎಂದು ದಂಗೆ ಏಳುವ ಪರಿಸ್ಥಿತಿ ಶೀಘ್ರವೇ ಬರುತ್ತದೆ. ರಾಜ್ಯ ದಿವಾಳಿ ಆಗುವ ಮುನ್ನವೇ ಆ ದೇವರೇ ಕಾಂಗ್ರೆಸ್‌ಗೆ ಮತ್ತು ಮುಖ್ಯಮಂತ್ರಿಗೆ ಬುದ್ಧಿ ಕಲಿಸುವ ಕಾಲ ಬೇಗ ಬರಲಿದೆ ಎಂದು ಹೇಳಿದರು.ಭಾಜಪಾ ಮುಖಂಡ ಹನಗವಾಡಿ ವೀರೇಶ್, ಗ್ರಾಮಸ್ಥರಾದ ಎಂ.ಬಸವರಾಜ್, ಅಣ್ಣಪ್ಪ, ಸುನೀಲ್, ಮೂರ್ತಿ, ಹುಗ್ಗಿ ರಂಗಣ್ಣ, ಜಗದೀಶ್ ನಾಯ್ಕ, ಡಿ.ಹನುಮಂತಪ್ಪ, ಆನಂದ್, ಅರುಣ್, ಮೋಹನ್, ಚಿಕ್ಕಣ್ಣ, ಮಹೇಶ್ವರಪ್ಪ, ರಮಣ ಸ್ವಾಮಿ, ರಾಮಚಂದ್ರಪ್ಪ, ರಾಜಾ ನಾಯ್ಕ್, ಮೂರ್ತಿ, ಗುರುರಾಜಾಚಾರ್, ತಹಸೀಲ್ದಾರ್ ಗುರುಬಸವರಾಜ್, ಉಪ ತಹಸೀಲ್ದಾರ್ ರವಿ, ಗ್ರಾಮಾಡಳಿತ ಅಧಿಕಾರಿ ಅಣ್ಣಪ್ಪ ಹಾಗೂ ಗ್ರಾಮಸ್ಥರು ಇದ್ದರು.
- - -ಬಾಕ್ಸ್ * ಅದ್ಧೂರಿ ತೆಪ್ಪೋತ್ಸವ ನಡೆಸುವ ಆಶಯ ರೈತರ ಜೀವನದಲ್ಲಿ ಶಾಂತಿ- ಸುಖ ನೆಮ್ಮದಿ ಕರುಣಿಸಬೇಕು ಎಂದು ಸಂತಸದಿಂದ ಬಾಗಿನ ಅರ್ಪಿಸಿದ್ದೇನೆ. ೨೦೦೯ರಲ್ಲಿ ನನ್ನ ಅವಧಿಯಲ್ಲಿ ತೆಪ್ಪೋತ್ಸವ ನಡೆದಿದೆ. ಹಾಲಿವಾಣ, ದಿಬ್ಬದಹಳ್ಳಿ, ಕೊಮಾರನಹಳ್ಳಿ, ಕೊಪ್ಪ, ಮಲೇಬೆನ್ನೂರು ಗ್ರಾಮಸ್ಥರ ಸಭೆಯಲ್ಲಿ ಸಲಹೆ- ಸೂಚನೆ ಪಡೆದು, ತಾಲೂಕು ಆಡಳಿತದ ಸಹಕಾರದಲ್ಲಿ ೨೦೨೪ರ ಈ ಬಾರಿಯೂ ತೆಪ್ಪೋತ್ಸವ ದೀಪೋತ್ಸವ ಅದ್ಧೂರಿಯಾಗಿ ನಡೆಸಬೇಕೆಂಬ ಆಶಯ ಹೊಂದಿದ್ದೇನೆ ಎಂದು ಶಾಸಕ ಬಿ.ಪಿ. ಹರೀಶ್ ಮನದಾಳ ತೆರೆದಿಟ್ಟರು.
- - - -೨೧ಎಂಬಿಆರ್೧:ಕೊಮಾರನಹಳ್ಳಿ ಕೆರೆ ಭರ್ತಿಯಾಗಿ ಕೋಡಿ ಹರಿದ ಹಿನ್ನೆಲೆ ಸೋಮವಾರ ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ್ ಬಾಗಿನ ಅರ್ಪಿಸಿದರು.