ಸಾರಾಂಶ
ದೇಶದಲ್ಲಿಯೇ 3ನೇ ವಿಶ್ವವಿದ್ಯಾಲಯವೆಂದು ಖ್ಯಾತಿ ಪಡೆದಿರುವ ಉತ್ತರ ಕರ್ನಾಟಕದ ಏಕೈಕ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಛಿದ್ರಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುನ್ನಾರ ನಡೆಸಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ದೇಶದಲ್ಲಿಯೇ 3ನೇ ವಿಶ್ವವಿದ್ಯಾಲಯವೆಂದು ಖ್ಯಾತಿ ಪಡೆದಿರುವ ಉತ್ತರ ಕರ್ನಾಟಕದ ಏಕೈಕ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಛಿದ್ರಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುನ್ನಾರ ನಡೆಸಿದ್ದು, ಮಂಡ್ಯ ಜಿಲ್ಲೆಯ ವಿಸಿ ಫಾರಂನ ಕೃಷಿ ವಿಶ್ವವಿದ್ಯಾಲಯದಲ್ಲಿ ವಿಲೀನ ಮಾಡುವುದನ್ನು ತಕ್ಷಣಕ್ಕೆ ಕೈ ಬಿಡಬೇಕು.ಮುಂಬರುವ ಬಜೆಟ್‌ನಲ್ಲಿ ತೋಟಗಾರಿಕೆ ವಿವಿಗೆ ₹100 ಕೋಟಿ ಅನುದಾನ ನೀಡುವ ಮೂಲಕ ವಿಶ್ವವಿದ್ಯಾಲಯ ಬಲವರ್ಧನೆಗೆ ಮುಂದಾಗಬೇಕು ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆಗ್ರಹಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬಂದು ಎರಡು ವರ್ಷ ಕಳೆದರೂ ತೋಟಗಾರಿಕೆ ವಿವಿ ಸಿಬ್ಬಂದಿಗೆ ವೇತನ ನೀಡಿದ್ದನ್ನು ಬಿಟ್ಟರೆ ವಿವಿ ಅಭಿವೃದ್ಧಿಗೆ ಹಾಗೂ ಸಂಶೋಧನೆಗೆ ಒಂದು ಪೈಸೆಯೂ ಅನುದಾನ ನೀಡಿಲ್ಲ. ಮಂಡ್ಯ ಜಿಲ್ಲೆಗೆ ಸೀಮಿತವಾಗಿರುವ ಕೃಷಿಸಚಿವ ಚಲುವರಾಯಸ್ವಾಮಿ ಅವರು ತವರು ಜಿಲ್ಲೆಯ ಪ್ರೇಮಕ್ಕೆ ಉತ್ತರ ಕರ್ನಾಟಕದ ಹಕ್ಕು, ಅವಕಾಶ ಕಿತ್ತುಕೊಳ್ಳುವ ಕುತಂತ್ರ ಮಾಡಬಾರದು. ರಾಜಕೀಯ ಪುನರ್ಜನ್ಮ ನೀಡಿದ ಜಿಲ್ಲೆಯನ್ನು ಮುಖ್ಯಮಂತ್ರಿಗಳು ಮರೆಯಬಾರದು ಎಂದು ಹೇಳಿದರು.
ಹಂತ ಹಂತವಾಗಿ ತೋಟಗಾರಿಕೆ ವಿವಿ ಒಡೆದು ಅದನ್ನು ನಿಷ್ಕ್ರಿಯಗೊಳಿಸುವ ಹುನ್ನಾರ ಸರ್ಕಾರದ್ದಾಗಿದೆ. 24 ಜಿಲ್ಲೆಯ ರೈತರಿಗೆ ಅನುಕೂಲವಾಗುವ ತೋಟಗಾರಿಕೆ ಕಾಲೇಜಿನ ಪ್ರಯೋಗಾಲಯ, ಪಿಜಿಗಳನ್ನು ಕಸಿದುಕೊಂಡು ಕೃಷಿ ವಿಶ್ವವಿದ್ಯಾಲಯ ಬಲವರ್ಧನೆಗೆ ಸರ್ಕಾರ ಪ್ರಯತ್ನ ಮಾಡುತ್ತಿದೆ. ಈಗ ಫಲ ಕೊಡುತ್ತಿರುವ ತೋಟಗಾರಿಕೆ ವಿವಿ ಹಾಳು ಮಾಡಲು ಕೃಷಿ ಸಚಿವರು, ಮುಖ್ಯಮಂತ್ರಿಗಳು ಕೈ ಹಾಕಬಾರದು ಎಂದು ಆಗ್ರಹಿಸಿದರು.ಒಂದು ಕನಸು ಇಟ್ಟುಕೊಂಡು 300ಕ್ಕೂ ಅಧಿಕ ಎಕರೆಯಲ್ಲಿ ಬೆಳೆದಿರುವ ತೋಟಗಾರಿಕೆ ವಿವಿ ಈಗ ತೋಟಗಾರಿಕೆ ಪ್ರದೇಶ ಬೆಳವಣಿಗೆಯಾಗಲು ಪ್ರಮುಖ ಪಾತ್ರ ವಹಿಸುತ್ತಿದೆ. ಬೆಳೆಯುತ್ತಿರುವ ವಿವಿಯನ್ನು ಪ್ರೋತ್ಸಾಹಿಸಲು ಅನುದಾನ ನೀಡುವ ಬದಲು ಈ ಭಾಗದ ಜನರಿಗೆ ಅನ್ಯಾಯ ಮಾಡಿ ಕೃಷಿ ಸಚಿವರ ಪ್ರೇಮಕ್ಕೆ ಮೊರೆ ಹೋಗಿ ಮುಖ್ಯಮಂತ್ರಿಗಳು ವಿವಿಯನ್ನು ಛಿದ್ರಗೊಳಿಸಬಾರದು ಎಂದು ಒತ್ತಾಯಿಸಿದರು.
ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕಾಲುವೆ ಫಾರಂನಲ್ಲಿ ನೂತನವಾಗಿ ನಿರ್ಮಾಣವಾಗುವ ಕೃಷಿ ವಿಶ್ವವಿದ್ಯಾಲಯಕ್ಕೆ ಬೇಕಾಗುವ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಿದರೆ ತೋಟಗಾರಿಕೆ ವಿವಿ ಒಡೆಯಲು ಸಮಿತಿ ವರದಿ ಕೊಟ್ಟಿದೆ. ತರಾತುರಿಯಲ್ಲಿ ವರದಿ ತರಿಸಿಕೊಂಡು ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಆದೇಶ ಮಾಡುವ ಆತುರ ಸರ್ಕಾರಕ್ಕೆ ಏನಿತ್ತು. ಈ ಭಾಗದ ಜನ ಮುಖ್ಯಮಂತ್ರಿಯವರಿಗೆ ಏನು ಅನ್ಯಾಯ ಮಾಡಿದ್ದಾರೆ. ಹಿಂದೆಯೂ ಕೃಷ್ಣ ಭೈರೇಗೌಡರು ಕೃಷಿ ಸಚಿವರಾದಾಗ ಸಿಎಂ ಸಿದ್ದರಾಮಯ್ಯ ಇದ್ದಾಗಲೂ ಅದೇ ಕೆಲಸ ಮಾಡಿದ್ದರು. ಆಗ ವಿರೋಧ ವ್ಯಕ್ತವಾದಾಗ ಕೃಷಿ ವಿವಿ ಜೊತೆಗೆ ತೋಟಗಾರಿಕೆ ವಿವಿ ವಿಲೀನ ಮಾಡುವುದನ್ನು ಕೈಬಿಡಲಾಗಿತ್ತು. ಈಗ ಮತ್ತೆ ಶುರು ಮಾಡಿದ್ದಾರೆ. ಇದರಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.