ಬರ ನಿರ್ವಹಣೆ, ಸಾರ್ವಜನಿಕ ಕುಂದುಕೊರತೆ ಆಲಿಸಲು ಹೊಸದಾಗಿ ರಚಿಸಿರುವ ಪ್ರಜಾಸೇವೆ ಇಲಾಖೆ ಕುರಿತು ಶಾಸಕರಿಗೆ ಮಾರ್ಗದರ್ಶನ ನೀಡಲಾಗಿದ್ದು, ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಪಾರದರ್ಶಕ ಆಡಳಿತ ಮತ್ತು ರಾಜ್ಯದ ಹಿತಕ್ಕೆ ಶ್ರಮಿಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬರ ನಿರ್ವಹಣೆ, ಸಾರ್ವಜನಿಕ ಕುಂದುಕೊರತೆ ಆಲಿಸಲು ಹೊಸದಾಗಿ ರಚಿಸಿರುವ ಪ್ರಜಾಸೇವೆ ಇಲಾಖೆ ಕುರಿತು ಶಾಸಕರಿಗೆ ಮಾರ್ಗದರ್ಶನ ನೀಡಲಾಗಿದ್ದು, ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಪಾರದರ್ಶಕ ಆಡಳಿತ ಮತ್ತು ರಾಜ್ಯದ ಹಿತಕ್ಕೆ ಶ್ರಮಿಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಗೃಹ ಕಚೇರಿ ಕೃಷ್ಣಾದಲ್ಲಿ ವಿವಿಧ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಬಗ್ಗೆ ಪಕ್ಷದ ಶಾಸಕರು ಹಾಗೂ ಹಿಂದಿನ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳೊಂದಿಗೆ ಆರ್ಥಿಕ ಸ್ಥಿತಿಗತಿ ಅವಲೋಕಿಸಿ ಸ್ಪಂದಿಸುವ ಭರವಸೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಅಭಿವೃದ್ಧಿ ಕೆಲಸಗಳಲ್ಲಿ ಹಿಂದೆ ಬೋಗಸ್ ಬಿಲ್‌ಗಳ ತಯಾರಿಯಂತಹ ಅಕ್ರಮ ನಡೆದಿದೆ. ಪಾರದರ್ಶಕವಾಗಿ ಕಾಮಗಾರಿಗಳಿಗೆ ಅವಕಾಶ ನೀಡಬೇಕು ಎಂದು ಸೂಚಿಸಲಾಗಿದೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪ್ರತಿ ಜಿಲ್ಲೆಯಲ್ಲಿ ವಸತಿ, ನಿವೇಶನ ರಹಿತರಿಗಾಗಿ ಕಂದಾಯ ಇಲಾಖೆಯಿಂದ 50 ಸಾವಿರ ನಿವೇಶನ ಹಂಚಿಕೆಗೆ ತೀರ್ಮಾನಿಸಿದ್ದಾರೆ. ಇದಕ್ಕಾಗಿ ಸರ್ಕಾರಿ ಜಮೀನುಗಳ ಗುರುತಿಸಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಬಡವರಿಗೆ ಸೈಟ್ ಹಂಚುವ ಈ ಯೋಜನೆಗೆ ಶಾಸಕರು ಸಹಕರಿಸಬೇಕು ಎಂದು ತಿಳಿಸಲಾಗಿದೆ. ಗ್ರಾಮೀಣ, ತಾಲೂಕುಗಳಿಂದ ಜನರ ವಲಸೆ ತಪ್ಪಿಸಲು ಸ್ಥಳೀಯ ಮಟ್ಟದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಆದ್ಯತೆ ನೀಡುವಂತೆ ಶಾಸಕರಿಗೆ ಸಲಹೆ ನೀಡಿದ್ದೇನೆ ಎಂದರು ತಿಳಿಸಿದರು.ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಪ್ರತಿಪಕ್ಷಗಳ ಆರೋಪ ಕುರಿತ ಪ್ರಶ್ನೆಗೆ, ವಿರೋಧ ಪಕ್ಷದವರಿಗೆ ಬಡವರು, ಬರದ ಬಗ್ಗೆ ಕಾಳಜಿ ಇಲ್ಲ. ಅವರಿಗೆ ರಾಜಕೀಯ ಮುಖ್ಯ. ಸದನದಲ್ಲಿ ಬರ, ನೆರೆ ಸೇರಿದಂತೆ ಜನಸಾಮಾನ್ಯರ ಬವಣೆಗಳ ಬಗ್ಗೆ ಚರ್ಚೆ ಮಾಡದೆ ಕಾಲಹರಣ ಮಾಡಿದರು ಎಂದರು.
ಸರ್ಕಾರ ಬರ ನಿರ್ವಹಣೆಗೆ ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದೆ. ಕುಡಿಯುವ ನೀರಿಗೆ 1 ಕೋಟಿ ರೂ. ನೀಡಲಾಗಿದೆ. ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಶೀಘ್ರ 100ಕ್ಕೂ ಹೆಚ್ಚು ಬರಪೀಡಿತ ತಾಲೂಕುಗಳನ್ನು ಸಚಿವ ಸಂಪುಟದ ಒಪ್ಪಿಗೆ ಪಡೆದು ಘೋಷಿಸಲಿದ್ದಾರೆ. ಭವಿಷ್ಯದಲ್ಲಿ ಮತ್ತಷ್ಟು ತಾಲೂಕುಗಳನ್ನು ಬರಗಾಲ ಪೀಡಿತ ಘೋಷಣೆ ಮಾಡುವ ಬಗ್ಗೆ ಸರ್ಕಾರ ನಿರ್ಣಯ ಮಾಡಲಿದ್ದು, ಕೇಂದ್ರಕ್ಕೆ ಬರ ಪರಿಹಾರಕ್ಕಾಗಿ ನಿಯೋಗದೊಂದಿಗೆ ತೆರಳಿ ಮನವಿ ಮಾಡಲಿದ್ದೇವೆ ಎಂದರು.ತಿಂಗಳಲ್ಲಿ 2 ದಿನ ಸಚಿವರ ಜಿಲ್ಲಾ ಸಭೆಗೆ ಸೂಚನೆ:
ಜನಸಾಮಾನ್ಯರ ಕುಂದು-ಕೊರತೆ, ಅಹವಾಲುಗಳನ್ನು ಅವರ ಮನೆಬಾಗಿಲಲ್ಲೇ ಆಲಿಸಿ ಪರಿಹಾರ ಒದಗಿಸುವ ಸಲುವಾಗಿ ಹೊಸ ಪ್ರಜಾಸೇವಾ ಇಲಾಖೆ ರಚಿಸಲಾಗಿದೆ. ಹೊಸ ಸರ್ಕಾರದ ಚಿಂತನೆ, ಯೋಜನೆಗಳ ಬಗ್ಗೆ ಶಾಸಕರು ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದು ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಪ್ರತಿಯೊಬ್ಬರ ಸಚಿವರು ತಿಂಗಳ ಮೊದಲ ಹಾಗೂ ಮೂರನೇ ಶನಿವಾರದಂದು ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಸಂಬಂಧ ಸಭೆ ನಡೆಸಲು ಸೂಚಿಸಲಾಗಿದೆ. ನಂತರ ಹೋಬಳಿ ಮಟ್ಟದಲ್ಲಿ ಈ ರೀತಿ ರಾಜ್ಯದ ಎಲ್ಲಾ 224 ಕ್ಷೇತ್ರಕ್ಕೆ ಸಚಿವರು ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಆಯಾ ಶಾಸಕರು ಪಂಚಾಯತಿ ಮಟ್ಟದಲ್ಲೂ ಜನರ ಸಮಸ್ಯೆಗಳನ್ನು ಆಲಿಸಿ, ಜನರ ಭಾವನೆ ಅರಿತು, ಸರ್ಕಾರಕ್ಕೆ ತಿಳಿಸಲು ಅನುಕೂಲವಾಗುವಂತೆ ಪ್ರಜಾಸೇವೆ ಇಲಾಖೆ ರಚಿಸಲಾಗಿದೆ. ಈ ಬಗ್ಗೆ ಶಾಸಕರಿಗೆ ಮಾರ್ಗದರ್ಶನ ನೀಡಲಾಗಿದೆ ಎಂದು ವಿವರಿಸಿದರು.
ಸ್ಥಳದಲ್ಲಿ ಸಮಸ್ಯೆ ಪರಿಹರಿಸಲು ಸಾಧ್ಯವಾಗದ ವಿಚಾರಗಳನ್ನು ಪ್ರಜಾಸೇವಾ ಇಲಾಖೆಗೆ ಸಲ್ಲಿಸಬೇಕು. ಆ ಇಲಾಖೆಯು ಇತರೆ ಎಲ್ಲ ಇಲಾಖೆಗಳ ಸಮಸ್ವಯದೊಂದಿಗೆ ಜನರ ಸಮಸ್ಯೆಗೆ ಪರಿಹಾರ ನೀಡಲು ಕಾಲಮಿತಿಯಲ್ಲಿ ಕ್ರಮ ವಹಿಸಲಿದೆ ಎಂದು ತಿಳಿಸಿದರು.