ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ ಎರಡನೇ ವಾರ ಅಥವಾ ಸ್ವಾತಂತ್ರ್ಯ ದಿನಾಚರಣೆ ನಂತರ ಕಲಬುರಗಿಯಲ್ಲಿ ವಿಭಾಗ ಮಟ್ಟದ ಜನಸ್ಪಂದನ ಸಭೆ ನಡೆಸಲು ಉದ್ದೇಶಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಶನಿವಾರ ಇಲ್ಲಿನ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿ.ಎಂ. ಜನಸ್ಪಂದನಾ ಸಭೆ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳೊಂದಿಗೆ ಗುಲ್ಬರ್ಗ ವಿ.ವಿ.ಗೆ ಹೋಗಿ ಸ್ಥಳ ಪರಿಶೀಲನೆ ಮಾಡಲಾಗಿದೆ. ಪೂರ್ವಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಭೆಯ ದಿನಾಂಕ ಸಿ.ಎಂ. ಅಂತಿಮಗೊಳಿಸಲಿದ್ದಾರೆ ಎಂದರು.
ಪ್ರಸಕ್ತ ಆಯವ್ಯಯದಲ್ಲಿ ಘೋಷಿಸಲಾದ ವಚನ ಮಂಟಪ / ಮ್ಯೂಸಿಯಂ, ಎಲೆಕ್ಟ್ರಾನಿಕ್ ಕ್ಲಸ್ಟರ್, ಕೌಶಲ್ಯ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಗುಲಬರ್ಗಾ ವಿ.ವಿ., ಕುಸನೂರ, ಹಡಗಿಲ್ ಹಾರುತಿ, ಕೆರೆ ಭೋಸಗಾ ಕೆರೆ ಬಳಿ ಇಂದು ಜಮೀನು ಪರಿಶೀಲನೆ ಮಾಡಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಯೋಜನೆ ಅನುಷ್ಠಾನಕ್ಕೆ ನೀಲಿ ನಕ್ಷೆ ಸಿದ್ಧಪಡಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.ಕಳೆದ ಸರ್ಕಾರದ ಅವಧಿಯಲ್ಲಿ ನೆಮೆಗುದ್ದಿಗೆ ಬಿದ್ದಿದ್ದ ಪಂಡಿತ್ ದೀನ ದಯಾಳ ಸೌಹಾರ್ದ ವಸತಿ ನಿಲಯ ಬಹುಮಹಡಿ ಸಮುಚ್ಛಯ ಕಾಮಗಾರಿ ಗುಲಬರ್ಗಾ ವಿ.ವಿ. ಆವರಣದಲ್ ಸುಮಾರು 82.56 ಕೋಟಿ ರು. ವೆಚ್ಚದಲ್ಲಿ ಭರದಿಂದ ಸಾಗಿದೆ. ಇಲ್ಲಿ ತಲಾ 500 ಬಾಲಕ-ಬಾಲಕೀಯರ ಸಾಮರ್ಥ್ಯದ ಕಟ್ಟಡ ನಿರ್ಮಿಸಲಾಗುತ್ತಿದ್ದು, 27 ಕೋಟಿ ರೂ. ಖರ್ಚು ಮಾಡಲಾಗಿದೆ. ಚಂಪಾ ಕ್ರೀಡಾಂಗಣ ಸಮಗ್ರ ಅಭಿವೃದ್ಧಿಗೆ 37 ಕೋಟಿ ರು. ವ್ಯಯ ಮಾಡಲಾಗುತ್ತಿದೆ ಎಂದರು.
ಗಾಣಗಾಪೂರ ಅಭಿವೃದ್ಧಿಗೆ ಬದ್ಧ: ಹಿಂದೆ ನಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ ಜಿಲ್ಲೆಯ ಶಕ್ತಿ ಪೀಠ ದೇವಲ ಗಾಣಗಾಪೂರ ಅಭಿವೃದ್ಧಿಗೆ ಕೇಂದ್ರಕ್ಕೆ ನೆರವು ಕೋರಿದರು ಸ್ಪಂದಿಸಿರಲಿಲ್ಲ. ಇದೀಗ ಪ್ರಸಾದ ಯೋಜನೆಯಡಿ ಮತ್ತೆ ಕೇಂದ್ರ ಸರ್ಕಾರಕ್ಕೆ 83.52 ಕೋಟಿ ರು. ಮೊತ್ತದ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರದ ಪ್ರವಾಸೋದ್ಯಮ ಇಲಾಖೆ ಅನುದಾನ ನೀಡಿದಲ್ಲಿ ಅದರ ಜೊತೆಗೆ ರಾಜ್ಯ ಸರ್ಕಾರ ಕೈಜೋಡಿಸಿ ದತ್ತಾತ್ರೇಯಯನ ಕ್ಷೇತ್ರವನ್ನು ಪ್ರವಾಸಿ ಮತ್ತು ಧಾರ್ಮಿಕ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಇನ್ನು ಕಲಬುರಗಿ ಕೋಟೆ ಒತ್ತುವರಿ ತೆರವು ಸಹ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಡೆಯಲಿದ್ದು, ಅಲ್ಲಿನ ನಿವಾಸಿಗಳ ಮನವೊಲಿಕೆ ಕೆಲಸ ನಡೆದಿದೆ ಎಂದರು.ಬೆಳೆ ವಿಮೆ ನೋಂದಣಿಗೆ ಮನವಿ: ಪ್ರಸಕ್ತ ಸಾಲಿನ ಪ್ರಧಾನಮಂತ್ರಿ ಫಸಲ್-ಕರ್ನಾಟಕ ರೈತ ಸುರಕ್ಷಾ ಬೆಳೆ ವಿಮೆ ಯೋಜನೆಯಡಿ ನೊಂದಣಿ ಮಾಡಿಕೊಳ್ಳಲು ಇದೇ ಜು.31 ಕೊನೆ ದಿನವಾಗಿದ್ದು, ಅಲ್ಪ ಪ್ರಮಾಣದ ಪ್ರೀಮಿಯಂ ಹಣ ಪಾವತಿಸಿ ನೊಂದಣಿ ಮಾಡಿಕೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಿಲ್ಲೆಯ ರೈತ ಬಾಂಧವರಲ್ಲಿ ಮನವಿ ಮಾಡಿದರು. ಕಳೆದ ವರ್ಷ ಬೆಳೆ ವಿಮೆ ಯೋಜನೆಯಡಿ ದಾಖಲೆ ಪ್ರಮಾಣದಲ್ಲಿ ಜಿಲ್ಲೆಗೆ ಪರಿಹಾರ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು ಎಂದರು.
ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ಎಂಎಲ್‌ಸಿ ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್ ಇದ್ದರು.