ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಮೈಸೂರಿನ ಮುಡಾ ಪ್ರಕರಣದಲ್ಲಿ ಮೇಲ್ನೋಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪು ಮಾಡಿದಂತೆ ಕಾಣುತ್ತದೆ. ಸದ್ಯಕ್ಕೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಅರಕಲಗೂಡು ಶಾಸಕ ಎ. ಮಂಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವರು ಕುಶಾಲನಗರ ಸಮೀಪ ಹುಲುಗುಂದ ಬಳಿ ಶುಕ್ರವಾರ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಡಾ ಸಮಗ್ರ ತನಿಖೆಯಾಗಿ ಎಲ್ಲವೂ ಹೊರಬರಬೇಕು. ಆಗ ಮಾತ್ರ ಸಮರ್ಪಕ ನ್ಯಾಯ ದೊರಕಲು ಸಾಧ್ಯ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ಮೇಲೆ ಎಫ್‌ಐಆರ್ ಆಗಿದೆ. ಎಫ್ಐಆರ್ ಆದ ಮೇಲೆ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಬೇಕಿತ್ತು, ಅದರ ಬದಲು 14 ಸೈಟ್‌ಗಳನ್ನು ವಾಪಸ್ ಕೊಟ್ಟಿದ್ದಾರೆ. ಅಂದರೆ ತಪ್ಪು ಮಾಡಿರುವುದು ಸಾಬೀತಾದಂತೆ ಅಲ್ಲವೇ ಎಂದು ಶಾಸಕ ಮಂಜು ಪ್ರಶ್ನಿಸಿದರು.ರಾಜಿನಾಮೆ ಕೊಟ್ಟು ತನಿಖೆ ಎದುರಿಸಲಿ: ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ರಾಜಿನಾಮೆ ನೀಡಿದ್ದಾರೆ ಇದು ಕೂಡ ಆರೋಪಕ್ಕೆ ಪುಷ್ಠಿ ದೊರೆತಂತಾಗಿದೆ. ಹಿಂದೆ ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ, ದೇವೇಗೌಡರ ಮೇಲೆಲ್ಲಾ ಆರೋಪಗಳು ಬಂದಿದ್ದವು. ಆಗ ಅವರು ರಾಜಿನಾಮೆ ಕೊಟ್ಟು ತನಿಖೆಗೆ ಮುಂದಾಗಿದ್ದರು. ಅದೇ ರೀತಿ ಸಿದ್ದರಾಮಯ್ಯನವರು ಕೂಡ ಅವರು ತೋರಿದ ಹಾದಿಯ ರೀತಿಯಲ್ಲಿ ನಡೆದು ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಡಲಿ. ತನಿಖೆ ನಡೆದು ತಪ್ಪಿಲ್ಲ ಎಂದು ಸಾಬೀತಾದರೆ ಮತ್ತೆ ಸಿಎಂ ಆಗುವ ಸಾಧ್ಯತೆ ಇದ್ದೇ ಇದೆ ಎಂದು ಹೇಳಿದರು.
ಮೂಡದಲ್ಲಿ ಸುಮಾರು 5 ಸಾವಿರ ಕೋಟಿ ರು. ಮೌಲ್ಯದ ಸರ್ಕಾರಿ ಆಸ್ತಿ ಏರುಪೇರಾಗಿರುವ ಸಾಧ್ಯತೆ ಇರುವುದಾಗಿ ಸಂಶಯ ವ್ಯಕ್ತಪಡಿಸಿದ ಶಾಸಕ ಮಂಜು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ತಪ್ಪಿತಸ್ಥರು ಯಾವುದೇ ಪಕ್ಷದವರಾಗಿರಲಿ, ಎಷ್ಟೇ ಪ್ರಭಾವಿಗಳಾಗಲಿ ಅವರ ಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.ಹಾಸನ ಲೋಕಸಭಾ ಚುನಾವಣೆಯಲ್ಲಿ 7 ಕೋಟಿ ರು. ಹಣ ಹಂಚಿದ್ದಾರೆಂಬ ಆಡಿಯೋ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಮಂಜು, ನೈಜ ಆಡಿಯೋ ಆಧರಿಸಿ ಮಾಧ್ಯಮಗಳು ವರದಿ ಮಾಡಿದೆ ಎಂದು ಭಾವಿಸಿದ್ದೇನೆ. ಆಡಿಯೋದಲ್ಲಿ ಇರುವ ಧ್ವನಿ ಮತ್ತು ಹಣ ಹಂಚಿಕೆ ಕುರಿತು ತನಿಖೆ ಆಗಬೇಕು. ತನಿಖೆಯಲ್ಲಿ ಹಣ ಹಂಚಿಕೆ ಸಾಬೀತು ಆದರೆ ಸಂಬಂಧಿಸಿದವರು ರಾಜೀನಾಮೆ ನೀಡಬೇಕು ಎಂದರು.