ಸಾರಾಂಶ
ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ರಾಜಕೀಯ ಮರೆತು ಸಂಸತ್ತಿನಲ್ಲಿ ಧ್ವನಿ ಎತ್ತಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನವದೆಹಲಿ : ಮೇಕೆದಾಟು, ಭದ್ರಾ ಯೋಜನೆ ಸೇರಿದಂತೆ ಕರ್ನಾಟಕದ ನೆಲ, ಜಲ, ಸಂಸ್ಕೃತಿ ಮತ್ತು ಸಂಪನ್ಮೂಲ ಅಭಿವೃದ್ಧಿಗಾಗಿ ರಾಜ್ಯದ ಸಂಸದರೆಲ್ಲರೂ ಕೇಂದ್ರದಲ್ಲಿ ಏಕಧ್ವನಿಯಲ್ಲಿ ಕೆಲಸ ಮಾಡಬೇಕಿದೆ. ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ರಾಜಕೀಯ ಮರೆತು ಸಂಸತ್ತಿನಲ್ಲಿ ಧ್ವನಿ ಎತ್ತಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ರಾಜ್ಯದ ನೂತನ ಸಂಸದರ ಸಭೆಯಲ್ಲಿ ಬುಧವಾರ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಇದು ರಾಜ್ಯದ ಹಿತದೃಷ್ಟಿಯಿಂದ ಸೇರಿದ ಸಭೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಉಪಸ್ಥಿತಿಯಲ್ಲಿ ನೀರಾವರಿ ಯೋಜನೆಗಳ ಜತೆಗೆ ರಾಯಚೂರಿಗೆ ಏಮ್ಸ್, ಮೈಸೂರು ಅಥವಾ ಹಾಸನಕ್ಕೆ ಐಐಟಿ ಸೇರಿ ರಾಜ್ಯ ಸರ್ಕಾರವು ಕೇಂದ್ರದ ಮುಂದೆ ಸಲ್ಲಿಸಿರುವ ಹಲವು ಯೋಜನೆಗಳ ಪಟ್ಟಿಯನ್ನೇ ಸಂಸದರ ಮುಂದಿಟ್ಟ ಸಿದ್ದರಾಮಯ್ಯ ಅವರು, ಈ ಯೋಜನೆಗಳನ್ನು ತರಲು ಸಂಸದರು ಪಕ್ಷಭೇದ ಮರೆತು ಕೇಂದ್ರದ ಮುಂದೆ ಒತ್ತಡ ಹೇರುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು. ಭದ್ರಾ ಯೋಜನೆ, ಕೇಂದ್ರದಿಂದ ಬರಬೇಕಿರುವ ಪರಿಹಾರ, ಇನ್‌ಪುಟ್ ಸಬ್ಸಿಡಿ ಮತ್ತಿತರ ವಿಚಾರವಾಗಿ ನಿರ್ಮಲಾ ಸೀತಾರಾಮನ್ ಅವರ ಗಮನ ಸೆಳೆದರು.
ಇದೇ ವೇಳೆ ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಅಗತ್ಯವಿದೆ. ಭದ್ರಾ ಯೋಜನೆ ಬಗ್ಗೆಯೂ ಪ್ರಯತ್ನ ಮುಂದುವರೆಸಬೇಕಾಗಿದೆ ಎಂದ ಅವರು, ಕೇಂದ್ರ ಹಣಕಾಸು ಸಚಿವೆ ತಮ್ಮ ಬಜೆಟ್‌ನಲ್ಲೇ ಭದ್ರಾ ಯೋಜನೆಗೆ ಹಣ ನೀಡುವ ಕುರಿತು ಘೋಷಣೆ ಮಾಡಿ ಒಂದು ವರ್ಷ ಕಳೆದಿದೆ. ಆ ಹಣ ಕೊಡಿಸುವಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರರು ಇದ್ದರು.
ಸಿಎಂ ಬೇಡಿಕೆ ಪಟ್ಟಿ:
- ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಗೆ ಏಮ್ಸ್ ನೀಡಲು ಮನವಿ ಸಲ್ಲಿಸಿದ್ದೇವೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕ ಹಿಂದುಳಿದಿದೆ. ಏಮ್ಸ್ ಬಂದರೆ ಈ ಭಾಗದ ಅಭಿವೃದ್ಧಿಗೆ ಅನುಕೂಲವಾಗಲಿದೆ.
- ಕೇಂದ್ರದಿಂದ 18,172 ಕೋಟಿ ರು. ಬರ ಪರಿಹಾರ ಕೇಳಿದ್ದೆವು. ಪೂರ್ತಿ ಹಣ ಬಂದಿಲ್ಲ, ಇದಕ್ಕಾಗಿ ಪ್ರಯತ್ನಿಸುವ ಅಗತ್ಯವಿದೆ.
- ರಾಜ್ಯದ ಕರಾವಳಿ ಭಾಗಗಳ ಅಭಿವೃದ್ಧಿಗಾಗಿ ಉಡಾನ್ ಯೋಜನೆಯಡಿ ಸಲ್ಲಿಸಿರುವ ಪ್ರಸ್ತಾಪ ನಾಗರಿಕ ವಿಮಾನಯಾನ ಇಲಾಖೆ ಮಂದಿದೆ. ಈ ಯೋಜನೆ ಕುರಿತು ಕೇಂದ್ರದ ಒಪ್ಪಿಗೆಗಾಗಿ ಪ್ರಯತ್ನಿಸಬೇಕಾಗಿದೆ.
- ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಏರ್ ಕಾರ್ಗೋ ಕಾಂಪ್ಲೆಕ್ಸ್ ಆಗಿ ಪರಿಗಣಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದರಿಂದ ರಫ್ತು ಹೆಚ್ಚಾಗಿ ಆರ್ಥಿಕ ಚಟುವಟಿಕೆಗೆ ವೇಗ ಸಿಗುತ್ತದೆ.
- ಮೈಸೂರು ಅಥವಾ ಹಾಸನಕ್ಕೆ ಮತ್ತೊಂದು ಐಐಟಿ ಬೇಕು ಎನ್ನುವ ಪ್ರಸ್ತಾವನೆ ಸಲ್ಲಿಸಿದ್ದೇವೆ.
- ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ಮನವಿ ಮಾಡಿದ್ದೇವೆ. ಈ ಬೇಡಿಕೆ ಕೂಡಲೇ ಅಂಗೀಕಾರ ಆಗುವಂತೆ ಮಾಡಿ ಪಶ್ಚಿಮಘಟ್ಟದ ಜನರಿಗೆ ನೆಮ್ಮದಿ ಒದಗಿಸಬೇಕಿದೆ.
- ರಾಜ್ಯವು ರೈಲ್ವೇ ಸಂಪರ್ಕದಲ್ಲಿ ಹಿಂದುಳಿದಿದೆ. ಆದ್ದರಿಂದ ಆದ್ಯತೆ ಮೇಲೆ ರಾಜ್ಯಕ್ಕೆ ಹೆಚ್ಚು ಅನುದಾನ ಒದಗಿಸಿ ರೈಲ್ವೇ ಸಂಪರ್ಕ ಹೆಚ್ಚಿಸಲು ಹೆಚ್ಚಿನ ಅನುದಾನ ನೀಡಬೇಕು. ಈ ಬಗ್ಗೆ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕ್ರಮ ವಹಿಸಬೇಕು.
- ಗ್ರಾಮ ಸಡಕ್ ಯೋಜನೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಿಂದುಳಿದಿದೆ. ಇದನ್ನೂ ಸರಿದೂಗಿಸಬೇಕಾಗಿದೆ.
- 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು 16ನೇ ಆಯೋಗದ ಮುಂದೆ ಪ್ರಬಲ ವಾದ ಮಂಡಿಸಬೇಕಾಗಿದೆ.
- ಕಳಸಾ-ಬಂಡೂರಿ ಯೋಜನೆಗೆ ಪರಿಸರ ಒಪ್ಪಿಗೆ ಅಗತ್ಯವಿದೆ. ಇದು ಬಾಕಿ ಇರುವುದರಿಂದ ಯೋಜನೆಯ ಕೆಲಸ ಶುರು ಮಾಡಲು ಸಾಧ್ಯವಾಗುತ್ತಿಲ್ಲ.
- 15ನೇ ಹಣಕಾಸು ಆಯೋಗದಲ್ಲಿ ಶಿಫಾರಸ್ಸು ಮಾಡಿರುವ ಮತ್ತು ಬಜೆಟ್‌ನಲ್ಲಿ ಕೇಂದ್ರ ಸರ್ಕಾರವೇ ರಾಜ್ಯಕ್ಕೆ ಘೋಷಿಸಿರುವ ಮೊತ್ತವನ್ನು ಒದಗಿಸಿಕೊಡಬೇಕಿದೆ.
- ಇನ್‌ಪುಟ್ ಸಬ್ಸಿಡಿಯನ್ನು ಸಮರ್ಪವಾಗಿ ಒದಗಿಸಬೇಕಿದೆ.
ಈ ಎಲ್ಲಾ ಬೇಡಿಕೆ, ಯೋಜನೆ, ಪ್ರಸ್ತಾವನೆಗಳ ಮಂಜೂರಾತಿಗೆ ಎಲ್ಲರೂ ಪಕ್ಷ ಭೇದ ಮರೆತು ಸಹಕಾರ ನೀಡಬೇಕು. ಈ ಮನವಿಗಾಗಿ ಈ ಸೌಹಾರ್ದ ಸಭೆ ನಡೆಸುತ್ತಿದ್ದೇವೆ. ರಾಜ್ಯದ ಅಭಿವೃದ್ಧಿ ಒಂದೇ ನಮ್ಮ ಗುರಿ. ಇದರಲ್ಲಿ ರಾಜಕೀಯ, ಟೀಕೆ, ಭಾವನಾತ್ಮಕ ಆರೋಪಗಳ ಅಗತ್ಯವಿಲ್ಲ. ರಾಜ್ಯದ ಅಭಿವೃದ್ಧಿಗೆ ಸೌಹಾರ್ದಯುತವಾಗಿ ಪ್ರಯತ್ನಿಸೋಣ ಎನ್ನುವುದಷ್ಟೆ ನನ್ನ ಕಳಕಳಿ. ರಾಜ್ಯದ ಬೇಡಿಕೆಗಳ ವಿಚಾರವಾಗಿ ಸಂಸದರು ರಾಜಕೀಯ ಮರೆತು ಸಂಸತ್ತಿನ ಒಳ ಮತ್ತು ಹೊರಗೆ ಧ್ವನಿ ಎತ್ತಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವೇಳೆ ಸಂಸದರ ಮುಂದೆ ಮನವಿ ಮಾಡಿದರು.