ದಲಿತರನ್ನು ನಾಶ ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರ, ಹಾಗಾಗಿ ದಲಿತರು ಎಚ್ಚೆತ್ತುಕೊಳ್ಳಬೇಕು, ಇಲ್ಲದಿದ್ದರೆ ಸರ್ವನಾಶ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದರು.
ಕನ್ನಡಪ್ರಭ ವಾರ್ತೆ ಕೆಜಿಎಫ್
ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಸಂವಿಧಾನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಕೇಂದ್ರ ಮಾಜಿ ಸಚಿವ, ಸಂಸದ ಎ.ನಾರಾಯಣಸ್ವಾಮಿ ಹೇಳಿದರು.ನಗರಸಭೆ ಮೈದಾನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಗುರುವಾರ ನಡೆದ ಸಂವಿಧಾನ ಸಮರ್ಪಣಾ ದಿನ, ಸಂವಿಧಾನ ಜಾಗೃತಿಗಾಗಿ ಭೀಮ ನಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಂವಿಧಾನ ಬದಲಾವಣೆ ಮಾತೇ ಇಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವ ನಾಯಕ ಎಂಬುದನ್ನು ಈ ದೇಶದ ಜನರು ಒಪ್ಪಿಕೊಂಡಿದ್ದಾರೆ, ಹಾಗಾಗಿ ಸಂವಿಧಾನ ರಕ್ಷಣೆ ಮಾಡುವುದೇ ನಮ್ಮೆಲ್ಲರ ಕರ್ತವ್ಯ ಎಂದರು.
ಸಂವಿಧಾನ ಜಾಗೃತಿಗಾಗಿ ಭೀಮನಡೆ ಕಾರ್ಯಕ್ರಮ ಅದ್ಧೂರಿಯಾಗಿ ರಾಜ್ಯದ ಎಲ್ಲೆಡೆ ಯಶಸ್ವಿಯಾಗಿ ನಡೆಯುತ್ತಿದೆ, ಕಾಂಗ್ರೆಸ್ ದೇಶದಲ್ಲಿ ಸಂಪೂರ್ಣ ನಾಶವಾಗುವ ಸ್ಥಿತಿಯಲ್ಲಿದೆ, ಅನುಮಾನವೇ ಇಲ್ಲ, ಈ ಹಿಂದೆ ಕಾಂಗ್ರೆಸ್ ದೊಡ್ಡ ಪಕ್ಷ ಎನಿಸಿಕೊಂಡಿತ್ತು, ಆದರೆ ಈಗ ಅಸ್ಥಿತ್ವ ಕಳೆದುಕೊಳ್ಳುತ್ತಿದೆ, ೭೫ ವರ್ಷಗಳ ಕಾಲ ದೇಶ ಆಳಿದ ಕಾಂಗ್ರೆಸ್ ದಲಿತರನ್ನು ಗುಲಾಮರನ್ನಾಗಿ ಇಟ್ಟುಕೊಂಡಿದೆ ಎಂದರು.ದಲಿತರನ್ನು ನಾಶ ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರ, ಹಾಗಾಗಿ ದಲಿತರು ಎಚ್ಚೆತ್ತುಕೊಳ್ಳಬೇಕು, ಇಲ್ಲದಿದ್ದರೆ ಸರ್ವನಾಶ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದರು.
ಮಾಜಿ ಸಂಸದ ಪ್ರತಾಪ ಸಿಂಹ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿಯಾಗಿಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕುಂಠಿತವಾಗಿದೆ, ಅನುದಾನವನ್ನು ಗ್ಯಾರಂಟಿ ಯೋಜನೆಗೆ ಹಾಕಿ ಸರ್ಕಾರ ದಿವಾಳಿಯಾಗಿದೆ, ಬಿಜಿಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಜನರಿಗೆ ಉಳಿಗಾಲವಿಲ್ಲ ಎಂದು ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ, ಇದು ಎಷ್ಟರ ಮಟ್ಟಿಗೆ ಸರಿ ಎಂದರು.ಕಾಂಗ್ರೆಸ್ ನಿಜವಾದ ಸಂವಿಧಾನ ವಿರೋಧಿ:
ನಿಜವಾಗಿಯೂ ಸಂವಿಧಾನದ ವಿರೋಧಿಗಳು ಎಂದರೆ ಅದು ಕಾಂಗ್ರೆಸ್ ಸರ್ಕಾರ ಹಾಗೂ ಇಂದಿರಾಗಾಂಧಿ, ಕಾಂಗ್ರೆಸ್‌ನವರು ೭೫ ವರ್ಷಗಳ ರಾಜ್ಯಭಾರ ನಡೆಸಿ ಒಟ್ಟು ಸಂವಿಧಾನದಲ್ಲಿ ೧೦೬ ತಿದ್ದುಪಡಿ ಮಾಡಿದ್ದಾರೆ, ಆದರೆ ಬಿಜೆಪಿ ಅಧಿಕಾರಕ್ಕೆ ಬಂದು ೧೨ ವರ್ಷ ಕಳೆದಿದೆ, ಇಲ್ಲಿಯವರೆಗೂ ಯಾವುದೇ ಸಂವಿಧಾನ ಬದಲಾವಣೆ ಮಾಡಿಲ್ಲ ಎಂದು ತಿಳಿಸಿದರು.ಕಾಂಗ್ರೆಸ್‌ನಲ್ಲಿ ದಲಿತರಿಗೆ ಸಿಎಂ ಸ್ಥಾನ ಎಂದಿಗೂ ನೀಡುವುದಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರನ್ನು ಸರ್ವನಾಶ ಮಾಡುವುದರಲ್ಲಿ ಎತ್ತಿದ ಕೈ, ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಗೆ ಕಳುಹಿಸಿದ್ದು, ಗೃಹ ಸಚಿವ ಪರಮೇಶ್ವರ್ ಸೋಲಿಸಿದ್ದು, ಶ್ರೀನಿವಾಸ್ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು ಅನೇಕ ದಲಿತರನ್ನು ಸರ್ವನಾಶ ಮಾಡಿದ್ದಾರೆ ಎಂದರು.
ದೇಶದ ಸಂವಿಧಾನ ಒಪ್ಪದವರಿಗೆ ಇಲ್ಲೇನು ಕೆಲಸ?:ಸಂವಿಧಾನ ಒಪ್ಪದವರು ಹೇಗೆ ದೇಶಭಕ್ತರಾಗುತ್ತಾರೆಂದು ಪ್ರಶ್ನೆ ಮಾಡಿದ ಪ್ರತಾಪ್ ಸಿಂಹ, ದೇಶದಲ್ಲಿ ಸಂಸತ್ತಿಗಿಂತಲೂ ಸಂವಿಧಾನ ದೊಡ್ಡದು, ಸಂವಿಧಾನ ಎಲ್ಲರಿಗೂ ದೊಡ್ಡ ಗ್ರಂಥ, ಸಂವಿಧಾನ ಒಪ್ಪದವರಿಗೆ ದೇಶದಲ್ಲಿ ಕೆಲಸವೇನಿದೆ, ಸಂವಿಧಾನದ ಆಶಯ ಸಂಘರ್ಷವಲ್ಲ, ಸಾಮರಸ್ಯದಿಂದ ಬದುಕುವ ಹಕ್ಕು ನಮ್ಮ ಸಂವಿಧಾನ ನೀಡಿದೆ ಎಂದರು.
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ:ಮಾಜಿ ಶಾಸಕ ಮಂಜುನಾಥ್ ಗೌಡ ಮಾತನಾಡಿ, ಸರ್ಕಾರದಲ್ಲಿ ಯಾವುದೇ ಕೆಲಸ ಆಗಬೇಕಾದರೆ ಹಣ ಕೊಡಬೇಕು, ಸರ್ಕಾರ ಅಧಿಕಾರಿಗಳ ವರ್ಗಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದೆ, ಗ್ಯಾರಂಟಿಗಳ ಹೆಸರಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ, ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಕಿಡಿಕಾರಿದರು.
ಕೆಜಿಎಫ್ ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ: ಮಾಜಿ ಸಂಸದ ಮುನಿಸ್ವಾಮಿರಾಜ್ಯದಲ್ಲಿ ೨೨೪ ಕ್ಷೇತ್ರಗಳ ಇದ್ದು, ಅದರಲ್ಲಿ ೨೨೪+೧ ಹೇಗೆ ಬಂತು ಎಂದು ಪ್ರಶ್ನೆ ಮಾಡಿದರು, ಕೆಜಿಎಫ್ ಕ್ಷೇತ್ರದಲ್ಲಿ ಇಬ್ಬರು ಶಾಸಕರು, ಒಬ್ಬರು ಸೂಪರ್ ಎಂಎಲ್‌ಎ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಸಂಸದ ಮುನಿಸ್ವಾಮಿ ಆರೋಪಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ೨೦೦ ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿರುವುದಾಗಿ ತಿಳಿಸಿ, ಪ್ರತಿಯೊಂದು ಕಾಮಗಾರಿಗಳಲ್ಲಿ ಶಾಸಕರು ಅಧಿಕಾರಿಗಳೊಂದಿಗೆ ಶಾಮೀಲಾಗಿ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.ಶಾಸಕರು ಕೇಂದ್ರ ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ನಮ್ಮ ಸರ್ಕಾರ ಮಾಡಿದೆ ಎಂದು ಸುಳ್ಳು ಹೇಳುತ್ತಿದ್ದಾರೆ, ಕೆಜಿಎಫ್ ಜನರು ಪ್ರತಿಯೊಂದು ಕೆಲಸಕ್ಕೂ ಸೂಪರ್ ಎಂಎಲ್‌ಎ ಹೋಗಿ ನೋಡುವಂತಹ ಪರಿಸ್ಥಿತಿ ಕೆಜಿಎಫ್ ಜನರಿಗೆ ಬಂದಿದೆ ಎಂದು ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಕ್ಷೇತ್ರದಲ್ಲಿ ಏನೇ ಕೆಲಸವಾಗಬೇಕಾದರೆ ಸೂಪರ್ ಎಂಎಲ್‌ಎ ಅವರನ್ನು ನೋಡಬೇಕು, ಕ್ಷೇತ್ರದಲ್ಲಿ ಕೈಗೊಂಡಿರುವ ಬಹುತೇಕ ಕಾಮಗಾರಿ ಕಳಫೆಯಿಂದ ಕೂಡಿದ್ದು, ಶಾಸಕರು ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿದ್ದು, ಹೊರಗಿನಿಂದ ಗುತ್ತಿಗೆದಾರರನ್ನು ಕರೆಸಿಕೊಂಡು ಗುತ್ತಿಗೆ ನೀಡಿ ಕಮಿಷನ್ ಪಡೆಯುತ್ತಿರುವುದಾಗಿ ಆರೋಪಿಸಿದರು.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸೂರಜ್‌ಮಲ್ ವೃತ್ತದಿಂದ ಭೀಮ ನಡೆ ಜಾಥಾವನ್ನು ಆರಂಭಿಸಿ ನಗರಸಭೆ ಮೈದಾನದವರೆಗೂ ನಡೆಸಿದರು, ಈ ವೇಳೆ ನೂರಾರು ಸಂಖ್ಯೆ ಕಾರ್ಯಕರ್ತರು ಭಾಗವಹಿಸಿದ್ದರು.
ಸಭೆಯಲ್ಲಿ ಕೋಲಾರ ಜಿಲ್ಲಾ ಬಿಜಿಪಿ ಅಧ್ಯಕ್ಷರಾದ ಓಂ ಶಕ್ತಿ ಚಲಪತಿ, ಮಾಜಿ ಶಾಸಕ ವರ್ತೂರ್ ಪ್ರಕಾಶ್, ಕೆಜಿಎಫ್ ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ್ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ದಲಿತ ಮುಖಂಡರು ಭಾಗವಹಿಸಿದ್ದರು.