ಇಂದು ಕಡೂರಿನಲ್ಲಿ ಶ್ರೇಯಸ್ ಪರ ಸಿಎಂ ಸಿದ್ದರಾಮಯ್ಯ ಮತಯಾಚನೆ

| Published : Apr 22 2024, 02:06 AM IST

ಸಾರಾಂಶ

ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರವಾಗಿ ಸಿದ್ದರಾಮಯ್ಯ ಚುನಾವಣಾ ಪ್ರಚಾರಕ್ಕೆ ಕಡೂರಿಗೆ ಆಗಮಿಸಲಿದ್ದಾರೆ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು

ಕನ್ನಡಪ್ರಭ ವಾರ್ತೆ ಕಡೂರು

ಏ.22 ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರವಾಗಿ ಸಿದ್ದರಾಮಯ್ಯ ಚುನಾವಣಾ ಪ್ರಚಾರಕ್ಕೆ ಕಡೂರಿಗೆ ಆಗಮಿಸಲಿದ್ದಾರೆ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.

ಅವರು ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಡೂರು ಕ್ಷೇತ್ರದ ನೀರಾವರಿ ಯೋಜನೆಯಾದ ಭದ್ರಾಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರವು ಹಣ ನೀಡದ ಕಾರಣ, ರಾಜ್ಯ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಗೆ ₹1250 ಕೋಟಿ ಹಾಗೂ ಕುಡಿಯುವ ನೀರಿನ ಭದ್ರಾ ಉಪಕಣಿವೆ ಯೋಜನೆಗೆ ₹1281 ಕೋಟಿ ಮಂಜೂರು ಮಾಡಿ ಮೂರನೇ ಹಂತದ ಕಾಮಗಾರಿ ಪ್ರಕಟಿಸಲಿದ್ದಾರೆ ಎಂದರು.

ಜೊತೆಯಲ್ಲಿ ಮುಖ್ಯವಾಗಿ ಈ ಎರಡು ಕನಸಿನ ಯೋಜನೆಗಳನ್ನು ನಬಾರ್ಡ್ ಲೆಕ್ಕ ಶೀರ್ಷಿಕೆ ಟ್ರಾಂಚಿ-29ಗೆ ಸೇರಿಸಲಾಗಿದೆ ಎಂದರು. ಮೂರನೇ ಹಂತದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಸುಮಾರು 78 ಕೆರೆಗಳಿಗೆ ನೀರು ಹರಿಯಲಿದ್ದು. ವಿಶ್ವೇಶ್ವರಯ್ಯ ಜಲ ನಿಗಮದಿಂದ ಕಾಮಗಾರಿಗಳು ನಡೆಯುತಿದ್ದು, ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಯುವ ಮೂಲಕ ನೀರಾವರಿ ಪ್ರದೇಶವಾಗಲಿದೆ ಇದು ನಮ್ಮ ರೈತರಲ್ಲಿ ಸಂತಸ ತರಲಿದೆ ಎಂದರು.

ಹಾಗಾಗಿ ಕಡೂರು ಕ್ಷೇತ್ರದ ಜನತೆಯು ಮುಖ್ಯವಾಗಿ ಸಿದ್ದರಾಮಯ್ಯನವರಿಗೆ ಆಭಾರಿಯಾಗಿರುತ್ತದೆ ಎಂದು ಹೇಳಿ, ರಾಜ್ಯ ಸರ್ಕಾರವು ತಾವು ಶಾಸಕರಾದ 10 ತಿಂಗಳಲ್ಲಿ ₹300 ಕೋಟಿಗೂ ಅಧಿಕ ಅನುದಾನ ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಉದ್ಯೋಗ ಸೃಷ್ಟಿಗಾಗಿ ಕಡೂರು ಹೊರ ವಲಯದಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ 25 ಕೋಟಿ ಅನುದಾನ ನೀಡಲಾಗಿದೆ ಅನೇಕ ರಸ್ತೆಗಳು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದೆ ಎಂದರು.

ಸರ್ಕಾರದ ಗ್ಯಾರಂಟಿಗಳ ಸೌಲತ್ತು ಪಡೆದಿರುವ ಎಲ್ಲ ಹೆಣ್ಣು ಮಕ್ಕಳಿಗೆ ಸಂತಸ ತಂದಿದ್ದು, ಮುಖ್ಯಮಂತ್ರಿಗಳ ಬಗ್ಗೆ ಭಾವನಾತ್ಮಕವಾಗಿ ಮಾತನಾಡಲಿದ್ದಾರೆ. ಬಡತನ ಹಾಗೂ ಹಸಿವನ್ನು ನೀಗಿಸುತ್ತಿರುವ ನೆಚ್ಚಿನ ನಾಯಕನನ್ನು ನೋಡುವ ತವಕ ಎಲ್ಲ ವರ್ಗದ ಜನರಲ್ಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದರು.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆನಂದ್ ಮನವಿ ಮಾಡಿದರು.

ಪಂಚನಹಳ್ಳಿ ಪ್ರಸನ್ನ, ಜಿ ಅಶೋಕ್, ಕಂಸಾಗರ ರೇವಣ್ಣ, ಅಬಿದ್ ಪಾಷಾ, ಕಂಸಾಗರ ಸೋಮಶೇಖರ್,ಸಿದ್ರಾಮಪ್ಪ ಇದ್ದರು.

ಇಂದು ಮಧ್ಯಾಹ್ನ 1 ಗಂಟೆಗೆ ಕಡೂರು ಪಟ್ಟಣದ ಎಪಿಎಂಸಿ ಮೈದಾನದಲ್ಲಿ ಸನ್ಮಾನ್ಯ ಸಿದ್ದರಾಮಯ್ಯನವರು ಆಗಮಿಸಲಿದ್ದು, ಮಂತ್ರಿಗಳಾದ ಕೆ.ಜೆ ಜಾರ್ಜ್, ಕೆ ರಾಜಣ್ಣ ಸೇರಿದಂತೆ ಮತ್ತಿತರರು ಆಗಮಿಸಲಿದ್ದಾರೆ. ಮುಖ್ಯಮಂತ್ರಿಗಳಾಗಿ ಆಯ್ಕೆಯಾದ ನಂತರ ಮೊದಲ ಭಾರಿಗೆ ಕಡೂರು ಕ್ಷೇತ್ರಕ್ಕೆ ಸಿದ್ದರಾಮಯ್ಯನವರು ಭೇಟಿ ನೀಡಲಿದ್ದಾರೆ - ಕೆ.ಎಸ್ ಆನಂದ್,ಶಾಸಕ.