ವಕ್ಫ್ ಅಕ್ರಮದ ಹಿಂದೆ ಸಿಎಂ ಸಿದ್ದು ಕೈವಾಡ: ತಾಲೂಕು ಬಿಜೆಪಿ

| Published : Nov 08 2024, 12:30 AM IST

ಸಾರಾಂಶ

ಪ್ರತಿಭಟನಾಕಾರರು ಸಚಿವ ಜಮೀರ್ ಅಹ್ಮದ್ ಅವರ ಪ್ರತಿಕೃತಿಯನ್ನು ದಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ರಾಜ್ಯದಲ್ಲಿ ವಕ್ಫ್ ಅಕ್ರಮ ವಿರೋಧಿಸಿ ತಾಲೂಕು ಬಿಜೆಪಿಯಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿಯವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿ ಪ್ರತಿಭಟನೆಗೆ ಸಾಥ್ ನೀಡಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ವಕ್ಫ್ ಮಂಡಳಿಯ ಭೂ ಕಬಳಿಕೆಯ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರವಿನಾರಾಯಣರೆಡ್ಡಿ,

ರೈತರ ಜಮೀನು, ಸರ್ಕಾರಿ ಜಾಗಗಳು, ಸ್ಮಶಾನಗಳ ಪಹಣಿಗಳ ಕಾಲಂ 11ರಲ್ಲಿ ಇದಕ್ಕಿದ್ದಂತೆ ವಕ್ಫ್ ಆಸ್ತಿ ಎಂದು ನಮೂದಿಸುತ್ತಿರುವ ಷಡ್ಯಂತ್ರದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈವಾಡವಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಮ್ಮಕ್ಕಿನಿಂದ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ರೈತರ ಜಮೀನು, ಮಠ, ಮಂದಿರಗಳಿಗೆ ವಕ್ಫ್ ಬೋರ್ಡ್ ವತಿಯಿಂದ ನೋಟಿಸ್ ಕೊಡಿಸುವ ಮೂಲಕ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ ನಡೆಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ವಕ್ಫ್ ಮಂಡಳಿ ಈ ಕೂಡಲೆ ರೈತರಿಗೆ ಹಾಗೂ ಮಠ, ಮಂದಿರಗಳಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಮುಖಂಡರಾದ ಡಾ. ಶಶಿಧರ್ ಪ್ರತಿಭಟನಾಕಾರರನ್ನು ಉದ್ದೇಶಿಸಿ, ಹಿಂದೂಗಳು ದೀಪಾವಳಿ ಸಡಗರದಲ್ಲಿ ಪಟಾಕಿಗಳನ್ನು ಹೊಡೆಯುತ್ತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಜಮೀರ್ ಅಹಮ್ಮದ್ ಮೂಲಕ ಹಿಂದೂಗಳ ಮೇಲೆ ವಕ್ಫ್ ಬಾಂಬನ್ನು ಹಾಕುತ್ತಿದ್ದಾರೆ ಎಂದು ತಮ್ಮ ಆಕ್ರೋಶ ಹೊರಹಾಕಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರೇರಿತ ಲ್ಯಾಂಡ್ ಜಿಹಾದ್ ವಿರುದ್ಧ ನಾವು ಹೋರಾಟ ನಡೆಸಲು ಸಜ್ಜಾಗಬೇಕೆಂದು ಅವರು ಕಾರ್ಯಕರ್ತರಿಗೆ ಕರೆ ನೀಡಿ, ರಾಜ್ಯ ಸರಕಾರ ಸಚಿವ ಜಮೀರ ಅಹ್ಮದ್ ಅವರನ್ನು ಕೂಡಲೇ ಉಚ್ಛಾಟಿಸಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಸರಕಾರ ಆದೇಶ ಹೊರಡಿಸಬೇಕು ಎಂದು ಪ್ರತಿಭಟನಾಕಾರರು ಬೇಡಿಕೆಗಳನ್ನು ಮಂಡಿಸಿದರು.

ಪ್ರತಿಭಟನಾಕಾರರು ಸಚಿವ ಜಮೀರ್ ಅಹ್ಮದ್ ಅವರ ಪ್ರತಿಕೃತಿಯನ್ನು ದಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ವಕ್ಫ್ ಅಕ್ರಮ ಕುರಿತು ತಮ್ಮ ಆಕ್ರೋಶ ಹೊರ ಹಾಕುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.ಬಳಿಕ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಮಹೇಶ್.ಎಸ್.ಪತ್ರಿಯವರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬಿಜೆಪಿಯ ಗ್ರಾಮಾಂತರ ಮಂಡಲ ಅಧ್ಯಕ್ಷ ರಮೇಶ್ ರಾವ್, ನಗರ ಬಿಜೆಪಿ ಅಧ್ಯಕ್ಷ ಮಾರ್ಕೆಟ್ ಮೋಹನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮುರಳೀಧರ್, ಮಧು ಸೂರ್ಯನಾರಾಯಣ ರೆಡ್ಡಿ, ಬಿಜೆಪಿ ಮಂಡಲ ಕಾರ್ಯದರ್ಶಿಗಳಾದ ಜಯಣ್ಣ, ಹರೀಯ, ವೇಣು ಮಾಧವ, ಪಕ್ಷದ ಮುಖಂಡರಾದ ಹನುಮೇಗೌಡ, ಜಿಪಂ ಮಾಜಿ ಸದಸ್ಯ ಜಗನ್ನಾಥ್, ರಾಮಣ್ಣ, ಮುರಳಿ, ಮುನಿಲಕ್ಷ್ಮಮ್ಮ, ಗೋಪಾಲಗೌಡ, ನಾರಾಯಣರೆಡ್ಡಿ, ಎಸ್.ರಮೇಶ್, ಬಾಲರಾಜ್, ಕೃಷ್ಣಮೂರ್ತಿ ಸ್ವಾಮಿ, ಶ್ರೀನಿವಾಸ್ ಗೌಡ, ಸುಧಾಕರ್, ಅಶ್ವತ್ಥಪ್ಪ, ಪುಣ್ಯವತಿ ಜಯಣ್ಣ, ಮಾರುತಿ, ಮಂಜುನಾಥ್ ರಾವ್, ವೆಂಕಟಾದ್ರಿ, ಅಲಕಾಪುರ ಸೋಮ್ಮಣ್ಣ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.