ಸಿಎಂ ಸಿದ್ದು ರಾಜಿನಾಮೆ ನೀಡಿ, ಕ್ಷಮೆ ಕೋರಲಿ : ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ

| N/A | Published : Mar 23 2025, 01:37 AM IST / Updated: Mar 23 2025, 12:48 PM IST

Govinda Karajola
ಸಿಎಂ ಸಿದ್ದು ರಾಜಿನಾಮೆ ನೀಡಿ, ಕ್ಷಮೆ ಕೋರಲಿ : ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ
Share this Article
  • FB
  • TW
  • Linkdin
  • Email

ಸಾರಾಂಶ

 ಸಿದ್ದರಾಮಯ್ಯ ಅವರು ದಲಿತದ ಅಭಿವೃದ್ಧಿಗೆ ಮೀಸಲಿಟ್ಟ ಮೊತ್ತವನ್ನು ಗ್ಯಾರಂಟಿ ಯೋಜನೆಗೆ ವರ್ಗಾಯಿಸುವ ಮೂಲಕ ಅನ್ಯಾಯ ಮಾಡಿದ್ದಾರೆ ಚಿತ್ರದುರ್ಗ ಸಂಸದ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

 ಮಂಗಳೂರು  : ಮುಸ್ಲಿಮರಿಗೆ ಕಾಮಗಾರಿ ಗುತ್ತಿಗೆಗಳಲ್ಲಿ ಶೇ.4ರ ಮೀಸಲು ನೀಡುವ ಮೂಲಕ ರಾಜ್ಯ ಸರ್ಕಾರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಇದು ಸಂವಿಧಾನ ವಿರೋಧಿಯಾಗಿದ್ದು, ಇದನ್ನು ಕೂಡಲೇ ವಾಪಸ್‌ ಪಡೆಯಬೇಕು. ಅಲ್ಲದೆ ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡಿ ನಾಡಿನ ಜನತೆಯ ಕ್ಷಮೆ ಕೋರಬೇಕು ಎಂದು ಚಿತ್ರದುರ್ಗ ಸಂಸದ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

ಅವರು ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ ಎರಡು ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ಶೂನ್ಯವಾಗಿದೆ. ಗ್ಯಾರಂಟಿ ಹೆಸರಿನಲ್ಲಿ ಏನೂ ಮಾಡದೆ ನಿತ್ಯದ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನತೆಗೆ ಹೊರೆ ನೀಡಿದೆ. ಅಹಿಂದ ನಾಯಕ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ದಲಿತದ ಅಭಿವೃದ್ಧಿಗೆ ಮೀಸಲಿಟ್ಟ ಮೊತ್ತವನ್ನು ಗ್ಯಾರಂಟಿ ಯೋಜನೆಗೆ ವರ್ಗಾಯಿಸುವ ಮೂಲಕ ಅನ್ಯಾಯ ಮಾಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ದಲಿತ ಮೀಸಲು ನಿಧಿ 42 ಸಾವಿರ ಕೋಟಿ ರು. ಮೀಸಲಿರಿಸಲಾಗಿದೆ ಎನ್ನುತ್ತಿದ್ದಾರೆ. ವಾಸ್ತವದಲ್ಲಿ ಇದರಲ್ಲಿ ಶೇ.50ರಷ್ಟು ಮೊತ್ತ ಆಯಾ ಇಲಾಖೆಗಳಿಗೆ ಹೋಗುತ್ತದೆ, ಉಳಿದ 21 ಸಾವಿರ ಕೋಟಿ ರು.ಗಳಲ್ಲಿ 14 ಸಾವಿರ ಕೋಟಿ ರು. ಗ್ಯಾರಂಟಿಗೆ, ಉಳಿಕೆಯಾಗುವುದು ಕೇವಲ 7 ಸಾವಿರ ಕೋಟಿ ರು. ಮಾತ್ರ. ಈ ಮೊತ್ತದಲ್ಲಿ ದಲಿತರ ಉದ್ಧಾರ ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರೈತರ ಆತ್ಮಹತ್ಯೆ, ಬಾಣಂತಿಯರ ಸಾವು, ಗುತ್ತಿಗೆದಾರರ ಆತ್ಮಹತ್ಯೆ ಅಧಿಕಾರಿಗಳ ಸಾವು ನಡೆಯುತ್ತಿದೆ. ಕೇಂದ್ರ ಸರ್ಕಾರದ ಎನ್‌ಇಪಿ ತಿರಸ್ಕರಿಸುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಧಿಕ್ಕರಿಸುತ್ತಿದೆ. ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಮುಸ್ಲಿಮರಿಗೆ ಪ್ರತ್ಯೇಕ ಸವಲತ್ತು ಘೋಷಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ಮುಸ್ಲಿಮರನ್ನು ಸಮಾಜದಿಂದ ವಿಭಜಿಸುವ ಹುನ್ನಾರ ನಡೆಯುತ್ತಿದೆ. ಓಟ್‌ ಬ್ಯಾಂಕ್‌ ರಾಜಕಾರಣ ನಡೆಸಲಾಗುತ್ತಿದ್ದು, ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ಅಸೆಂಬ್ಲಿಯಲ್ಲಿ ಹನಿಟ್ರ್ಯಾಪ್‌ ಬಗ್ಗೆ ಕಾಂಗ್ರೆಸ್‌ ಸದಸ್ಯರೇ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಭ್ರಷ್ಟಾಚಾರ, ಅನೈತಿಕತೆ ಹಗರಣಗಳಿಂದ ಕೂಡಿದ ಸರ್ಕಾರಕ್ಕೆ ಜನರನ್ನು ಪ್ರತಿನಿಧಿಸುವ ನೈತಿಕತೆ ಇಲ್ಲ ಎಂದರು.

ಅಧಿವೇಶದಲ್ಲಿ ಕಾಂಗ್ರೆಸ್‌ನ ದುರಾಡಳಿತದ ಬಗ್ಗೆ ಮಾತನಾಡಿದ 18 ಮಂದಿ ಬಿಜೆಪಿ ಶಾಸಕರನ್ನೇ ಅಮಾನತುಗೊಳಿಸಿದ್ದಾರೆ. ಕನಿಷ್ಠ ಒಂದೆರಡು ದಿನ ಅಮಾನತು ಸರಿ, ಇದು ಆರು ತಿಂಗಳ ಕಾಲ ಅಮಾನತುಗೊಳಿಸುವುದು ಎಷ್ಟು ಸರಿ ಎಂದು ಕಾರಜೋಳ ಪ್ರಶ್ನಿಸಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಬಾಗಿಲು ಒದ್ದು ಅಸೆಂಬ್ಲಿ ಪ್ರವೇಶಿಸಿದ್ದರು. ಅಸೆಂಬ್ಲಿಯಲ್ಲೂ ಗಲಾಟೆ ಎಬ್ಬಿಸಿದ್ದರು. ಆಗ ನಾವು ಸಣ್ಣ ಪ್ರಮಾಣದಲ್ಲಿ ಕ್ರಮ ಕೈಗೊಂಡಿದ್ದೆವು. ಸರ್ಕಾರದ ತಪ್ಪುಗಳನ್ನು ಹೇಳಲು ಪ್ರತಿಯೊಬ್ಬರಿಗೂ ಅವಕಾಶ ಇದೆ. ಸಮಾಜಸೇವಕರು, ರಾಜಕಾರಣಿಗಳು ಸಮಾಜಕ್ಕೆ ಮಾದರಿಯಾಗಿರಬೇಕು. ಕೈ, ಬಾಯಿ, ಕಚ್ಚೆ ಸರಿಯಾಗಿಟ್ಟುಕೊಂಡರೆ ನಾವು ದೇವರಿಗೂ ಹೆದರಬೇಕಾಗಿಲ್ಲ ಎಂದು ಗೋವಿಂದ ಕಾರಜೋಳ ಸರ್ವಜ್ಞನ ವಚನ ಉಲ್ಲೇಖಿಸಿದರು.

ಶಾಸಕ ವೇದವ್ಯಾಸ್‌ ಕಾಮತ್‌, ವಿಧಾನ ಪರಿಷತ್‌ ಸದಸ್ಯರಾದ ಭಾರತಿ ಶೆಟ್ಟಿ, ಪ್ರತಾಸ್‌ಪಿಂಹ ನಾಯಕ್‌, ಕಿಶೋರ್ ಕುಮಾರ್‌, ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಮುಖಂಡರಾದ ಸುಲೋಚನಾ ಭಟ್‌, ಶಿಲ್ಪಾ ಸುವರ್ಣ, ರಾಜೇಶ್‌, ಸತೀಶ್‌ ಆರ್ವಾರ್‌, ಪೂಜಾ ಪೈ, ಆರ್‌.ಸಿ.ನಾರಾಯಣ್‌, ಸಂಜಯ ಪ್ರಭು ಮತ್ತಿತರರಿದ್ದರು.