ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಹೆಲಿಕಾಪ್ಟರ್ ಮೂಲಕ 11.15ಕ್ಕೆ ಗದಗ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿ ಜಿಲ್ಲೆಯ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.

ಗದಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆ. 1ರಂದು ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಲಿದ್ದಾರೆ.

ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊರಟು, 10.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ 11.15ಕ್ಕೆ ಗದಗ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿ ಜಿಲ್ಲೆಯ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.

ಮಧ್ಯಾಹ್ನ 1.15ಕ್ಕೆ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನಿಗಳೊಂದಿಗೆ ಸಭೆ ನಡೆಸುವರು. 2.30ಕ್ಕೆ ಜಿಲ್ಲಾ ಬರ ಪರಿಸ್ಥಿತಿ ಕುರಿತಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಭೆ, ಚರ್ಚೆ ನಡೆಸಲಿದ್ದಾರೆ.

3.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಹೆಲಿಕಾಪ್ಟರ್ ಮೂಲಕ ಲಕ್ಷ್ಮೇಶ್ವರದ ಉಮಾ ಪಿಯು ಕಾಲೇಜು ಆವರಣಕ್ಕೆ ತೆರಳಿ, 3.50ಕ್ಕೆ ಅಲ್ಲಿಂದ ಮುಕ್ತಿಮಂದಿರಕ್ಕೆ ಭೇಟಿ ನೀಡುವರು. ನಂತರ ಅಲ್ಲಿಂದ ಲಕ್ಷ್ಮೇಶ್ವರಕ್ಕೆ ಆಗಮಿಸಿ, ಹೆಲಿಕಾಪ್ಟರ್ ಮೂಲಕ 4.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ, ಸಂಜೆ 5.05ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು ಎಂದು ಪ್ರಕಟಣೆ ತಿಳಿಸಿದೆ.

ಬರಪೀಡಿತ ಜಿಲ್ಲೆ ಘೋಷಿಸದಿದ್ದರೆ ಸಿಎಂಗೆ ಕಪ್ಪು ಬಾವುಟ ಪ್ರದರ್ಶನ

ಗದಗ: ತೀವ್ರ ಬರಗಾಲದಿಂದ ಜಿಲ್ಲೆ ತತ್ತರಿಸಿದ್ದು, ರೈತರು ಆತಂಕದ ಸ್ಥಿತಿಯಲ್ಲಿದ್ದಾರೆ. ಸರ್ಕಾರ ಜಿಲ್ಲೆಯ ಗಜೇಂದ್ರಗಡ ತಾಲೂಕನ್ನು ಮಾತ್ರ ಬರಪೀಡಿತ ತಾಲೂಕು ಎಂದು ಘೋಷಿಸಿ ಮಲತಾಯಿ ಧೋರಣೆ ಅನುಸರಿಸಿದೆ. ಈ ನಡೆಯನ್ನು ಖಂಡಿಸಿ ಸೆ. 1ರಂದು ಜಿಲ್ಲೆಗೆ ಆಗಮಿಸುತ್ತಿರುವ ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಶಂಕರಗೌಡ ಜಾಯನಗೌಡ್ರ ಎಚ್ಚರಿಕೆ ನೀಡಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹಾಗೂ ಜಿಲ್ಲಾಡಳಿತ ಬರ ಸಮೀಕ್ಷೆಯನ್ನು ಸರಿಯಾಗಿ ಮಾಡಿಲ್ಲ. ಯಾವುದೋ ಒಂದು ಹೊಲದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಉಸ್ತುವಾರಿ ಸಚಿವರು ರೈತರಿಗೆ ಅನ್ಯಾಯ ಮಾಡಿದ್ದಾರೆ. ದನ, ಕರುಗಳಿಗೆ ಮೇವು, ನೀರು ಇಲ್ಲದಂತಾಗಿದೆ. ಬಿತ್ತಿ ಬೆಳೆದ ಬೆಳೆಗಳು ಹಾನಿಯಾಗಿದ್ದು, ರೈತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಕೂಡಲೇ ಜಿಲ್ಲೆಯ ಏಳು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು.ಒಂದು ವಾರದ ಒಳಗೆ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ. ರೈತರ ರಾಷ್ಟ್ರೀಕೃತ ಬ್ಯಾಂಕ್ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು. ವಿಬಿ ಜಿ ರಾಮ್ ಜಿ ಯೋಜನೆ ಕೂಡ ಸರಿಯಾಗಿ ಕೂಲಿ ಕಾರ್ಮಿಕರಿಗೆ ಅನುಕೂಲ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಗಿರೀಶ್ ಹೊಸಮನಿ, ನಾಗರಾಜ ಕಳ್ಳಿಹಾಳ, ರಾಮಣ್ಣ ಕಮ್ಮಾರ, ರವಿ ವಗ್ಗಣ್ಣನವರ, ಬಸವರಾಜ ಮರಾಠೆ, ರವಿ ವಗ್ಗಣ್ಣನವರ, ಶರಣಪ್ಪ ಕಮ್ಮಾರ, ಶಂಕರಗೌಡ ಪಾಟೀಲ, ಎಂ.ಎಸ್. ಗುತ್ತಿದಾರ, ಶರಣಪ್ಪ ಲದ್ದಿ, ಈಶ್ವರ ಗದುಗಿನ, ಗೂಳಪ್ಪ ಗುಡದೂರ, ಎಚ್.ಡಿ. ದೊಡ್ಡಮನಿ, ಎಸ್.ಎಲ್. ಹಕ್ಕರಕಿ, ರವಿ ನಾವಳ್ಳಿ, ಬಸವರಾಜ ಯಳವತ್ತಿ, ಮಂಜುನಾಥ ಮಾಗಡಿ ಉಪಸ್ಥಿತರಿದ್ದರು.