CM to visit Thirthahalli on Sept. 19: Interaction with farmers

-ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಭಿಮತ । ಕಸ್ತೂರಿ ರಂಗನ್ ವರದಿ ಕುರಿತ ಪದವಿ ಕಾಲೇಜಿನಲ್ಲಿ ರೈತರೊಂದಿಗೆ ಸಂವಾದ । ಬಹಿರಂಗ ಸಭೆ

--

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ರೈತರು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆಯುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆ.19ರಂದು ತೀರ್ಥಹಳ್ಳಿಗೆ ಭೇಟಿ ನೀಡಲಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಗ್ಗೆ 10 ಗಂಟೆಗೆ ತೀರ್ಥಹಳ್ಳಿಗೆ ಆಗಮಿಸುವ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಕಸ್ತೂರಿ ರಂಗನ್ ವರದಿ ಕುರಿತ ಪದವಿ ಕಾಲೇಜಿನಲ್ಲಿ ರೈತರೊಂದಿಗೆ ಸಂವಾದ ಹಾಗೂ ಅನಂತಮೂರ್ತಿ ಪ್ರೌಢ ಶಾಲೆ ಮೈದಾನದಲ್ಲಿ ನಡೆವ ಬಹಿರಂಗ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಕಸ್ತೂರಿ ರಂಗನ್‌ ವರದಿಯಿಂದ ಮಲೆನಾಡಿನ ರೈತರು, ಕೃಷಿ ಕಾರ್ಮಿಕರು ಹಾಗೂ ಸ್ಥಳೀಯ ಜನರಿಗೆ ಎದುರಾಗಬಹುದಾದ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳು ಮಾಹಿತಿ ಪಡೆಯಲಿದ್ದು, ಬಳಿಕ ಬಾಳೆಹೊನ್ನೂರಿಗೆ ತೆರಳಲಿದ್ದಾರೆ ಎಂದರು.

ಸೆ.21ರಿಂದ 23ರವರೆಗೆ ವಿಧಾನಮಂಡಲದ ವಿಶೇಷ ಅಧಿವೇಶನವೂ ನಡೆಯಲಿದೆ. ಕಸ್ತೂರಿ ರಂಗನ್ ವರದಿ ಕುರಿತು ರಾಜ್ಯ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ರೈತರು ಹಾಗೂ ಸಾರ್ವಜನಿಕರ ಅಭಿಪ್ರಾಯ ಆಲಿಸುವ ಪ್ರಕ್ರಿಯೆಯ ಭಾಗವಾಗಿ ಈ ಸಭೆ ನಡೆಯುತ್ತಿದೆ. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದು, 25000 ಸಾವಿರ ಜನರು ಭಾಗವಹಿಸುವ ಸಾಧ್ಯತೆ ಇದೆ ಎಂದರು.

ಗೋಷ್ಠಿಯಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಪ್ರಮುಖರಾದ ಮುಡುಬ ರಾಘವೇಂದ್ರ, ಆದರ್ಶ ಹುಂಚದಕಟ್ಟೆ, ಸಚೀಂದ್ರ ಹೆಗಡೆ, ಕೆಸ್ತೂರು ಮಂಜುನಾಥ, ಅಮರ ನಾಥ ಶೆಟ್ಟಿ ಇದ್ದರು.

ಬಿಜೆಪಿ ಶಾಸಕರ ವಿರುದ್ಧ ವಾಗ್ದಾಳಿ:

ಪ್ರಚಾರ ಸಿಗುತ್ತದೆ ಎಂದರೆ ಕೆಲವರು ಗಣ ಬಂದಂತೆ ಆಡುತ್ತಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಬಿಜೆಪಿ ಶಾಸಕ ಚನ್ನಬಸಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಂದೇ ಮಾತರಂ ಪೂರ್ಣ ಪ್ರಮಾಣದಲ್ಲಿ ಹಾಡಲಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ಶಾಸಕ ಎಸ್. ಎನ್. ಚನ್ನಬಸಪ್ಪ ಸಭಾತ್ಯಾಗ ಮಾಡಿದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರಧ್ವಜ ಹಾಗೂ ವಂದೇ ಮಾತರಂ ನಂತಹ ಗೀತೆಗಳು ಜನರನ್ನು ಒಟ್ಟುಗೂಡಿಸುವ ಸಲುವಾಗಿ, ಇಂತಹ ವಿಚಾರಗಳಲ್ಲಿ ಭಿನ್ನತೆ ಕಂಡು ಹಿಡಿಯುವುದರಿಂದ ದೇಶ ಕಟ್ಟೋಕೆ ಆಗಲ್ಲ, ದೇಶವನ್ನು ಒಡೆಯಬಹುದು. ವಿರೋಧ ಮಾಡಬೇಕು ಎನ್ನುವ ಉದ್ದೇಶವಿದ್ದರೆ ಏನು ಬೇಕಾದರೂ ಮಾಡಲು ಸಾಧ್ಯ. ಪ್ರಚಾರ ಸಿಗುತ್ತದೆ ಎಂದರೆ ಕೆಲವರು ಗಣ ಬಂದಂತೆ ಆಡುತ್ತಾರೆ. ಈ ವಿಷಯದಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ನಾನು ಪೂರ್ಣವಾಗಿ ಸಮರ್ಥಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಯಾವುದೇ ಹಾಡಿನಿಂದ ನಿಮ್ಮ ಹಸುವನ್ನು ತಡೆಯೋಕೆ ಆಗಲಿ ಅಥವಾ ನಮ್ಮ ಹಸುವನ್ನು ತಡೆಯೋಕೆ ಆಗಲಿ ಸಾಧ್ಯವಿಲ್ಲ. ಹಾಡುಗಳು ಜನರನ್ನು ಒಗ್ಗೂಡಿಸುವಂತಿರಬೇಕು. ಎಲ್ಲಾ ಹೃದಯಗಳನ್ನು, ಎಲ್ಲಾ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವಾಗಬೇಕೇ ಹೊರತು ಪ್ರಚಾರಕ್ಕಾಗಿ ರಾಜಕೀಯ ಮಾಡಬಾರದು. ಹಾಡಿನಿಂದ ಯಾರ ಹಸಿವನ್ನು ತಡೆಯಲು ಸಾಧ್ಯವಿಲ್ಲವಾದ್ದರಿಂದ, ಉದ್ಯೋಗ, ಮನೆ, ನಿವೇಶನ ಸೇರಿದಂತೆ ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಲು ಒತ್ತು ನೀಡಬೇಕು ಎಂದು ಹೇಳಿದರು.

ಪೋಟೋ: 16ಎಸ್‌ಎಜಿಕೆಪಿ01

ಶಿವಮೊಗ್ಗದ ಪತ್ರಿಕಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿದರು.