ಕುಂದಾಪುರ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ಬೆಳ್ಳಿಯ ಖಡ್ಗವನ್ನು ಕೊಡುಗೆಯಾಗಿ ಸಮರ್ಪಿಸಿದರು. ಸುಮಾರು 30 ನಿಮಿಷಗಳ ಕಾಲ ದೇವಸ್ಥಾನದಲ್ಲಿ ಕಳೆದ ಅವರು ಯಾವುದೇ ವಿಶೇಷ ಸಂಕಲ್ಪ ಮಾಡದೇ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.ದೇವಸ್ಥಾನದ ಅರ್ಚಕರು ಪೂರ್ಣಕುಂಭ ಸ್ವಾಗತ ನೀಡಿ ಸ್ತಂಭ ಗಣಪತಿ ಪೂಜೆ ನೆರವೇರಿಸಿದರು. ಬಳಿಕ ಗರ್ಭಗುಡಿಯಲ್ಲಿ ದೇವಿಯ ದರ್ಶನ ಮಾಡಿಸಿ ಫಲ ಸಮರ್ಪಿಸಲಾಯಿತು. ವಿಜಯ್ ಅವರು ದೇವರ ನಿತ್ಯ ಅರ್ಚನೆಯ ಅಲಂಕಾರದಲ್ಲಿ ಬಳಸುವಂತೆ ಬೆಳ್ಳಿಯ ಖಡ್ಗವನ್ನು ಅರ್ಪಿಸಿದ್ದು, ಭಕ್ತರಿಗೆ ಅದನ್ನು ಪ್ರದರ್ಶಿಸುವಂತೆ ಕೋರಿದ್ದಾರೆ ಎಂದು ಅರ್ಚಕ ರಾಮಚಂದ್ರ ಅಡಿಗ ತಿಳಿಸಿದರು.

ದರ್ಶನದ ನಂತರ ವೀರಭದ್ರ ಸ್ವಾಮಿಯ ಸನ್ನಿಧಿಗೆ ಭೇಟಿ ನೀಡಿ ಪ್ರದಕ್ಷಿಣೆ ಮುಗಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ದೇವಸ್ಥಾನದ ಪುರೋಹಿತ ಸುರೇಶ್ ಭಟ್ ಮಾತನಾಡಿ, 1977ರ ತನಕ ದೇವಸ್ಥಾನಕ್ಕೆ ಖಡ್ಗ ಸಮರ್ಪಿಸಿದ ಇತಿಹಾಸ ಇರಲಿಲ್ಲ. ಬಳಿಕ ಎಂಜಿಆರ್ ಅವರಿಗೆ ಅಭಿಮಾನಿಗಳು ನೀಡಿದ್ದ ಚಿನ್ನದ ಖಡ್ಗವನ್ನು ಮೂಕಾಂಬಿಕಾ ದೇವಿಗೆ ಸಮರ್ಪಿಸಿದ್ದರು. ನಂತರ ಅವರು ಮುಖ್ಯಮಂತ್ರಿ ಆಗಿದ್ದರು. ಆ ಬಳಿಕ ಸುಮಾರು ನೂರು ಬೆಳ್ಳಿಯ ಖಡ್ಗಗಳು ಹಾಗೂ ಮೂರು ಚಿನ್ನದ ಖಡ್ಗಗಳು ದೇವಸ್ಥಾನಕ್ಕೆ ಕೊಡುಗೆಯಾಗಿ ಬಂದಿವೆ ಎಂದು ವಿವರಿಸಿದರು.ಖಡ್ಗ ಸಮರ್ಪಿಸುವುದು ವಿಜಯದ ಸಂಕೇತವಾಗಿರಬಹುದು ಅಥವಾ ಶತ್ರು ಸಂಹಾರದ ಸಂಕಲ್ಪದ ಭಾಗವಾಗಿರಬಹುದು. ಆದರೆ ವಿಜಯ್ ಅವರು ಯಾವುದೇ ವಿಶೇಷ ಸಂಕಲ್ಪ ತಿಳಿಸಿಲ್ಲ. ತಮಿಳುನಾಡು ಜನತೆಗೆ ಒಳ್ಳೆಯದಾಗಲಿ, ಎಲ್ಲರಿಗೂ ಒಳಿತಾಗಲಿ ಎಂದು ಮಾತ್ರ ಪ್ರಾರ್ಥಿಸಿದ್ದಾರೆ ಎಂದು ಅವರು ಹೇಳಿದರು.ವಿಜಯ್ ಅವರ ಕೈಗೆ ಶ್ರೀರಕ್ಷೆಯ ದಾರ ಕಟ್ಟಿದ ಕುರಿತು ಪ್ರತಿಕ್ರಿಯಿಸಿದ ಸುರೇಶ್ ಭಟ್, ರಾಜಕೀಯ ನಾಯಕರು ದೇವಸ್ಥಾನಕ್ಕೆ ಬಂದಾಗ ದೃಷ್ಟಿದೋಷ ನಿವಾರಣೆ ಹಾಗೂ ರಕ್ಷೆಗಾಗಿ ದಾರ ಕಟ್ಟುವ ಸಂಪ್ರದಾಯವಿದೆ. ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರಿಗೂ ದಾರ ಕಟ್ಟಲಾಗಿದೆ. ವಿಜಯ್ ಅವರ ಅನುಮತಿ ಪಡೆದು ಅವರಿಗೂ ದಾರ ಕಟ್ಟಲಾಗಿದೆ ಎಂದು ತಿಳಿಸಿದರು.