ತನಿಖೆಗೆ ಹೆದರಿ ಸಿಎಂ ಸೈಟ್ ವಾಪಸ್: ಅಶ್ವಥನಾರಾಯಣ

| Published : Oct 02 2024, 01:02 AM IST

ತನಿಖೆಗೆ ಹೆದರಿ ಸಿಎಂ ಸೈಟ್ ವಾಪಸ್: ಅಶ್ವಥನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಸದನದ ಒಳಗೆ ಮುಡಾ ಹಗರಣ ಕುರಿತು ತನಿಖೆಗೆ ಒತ್ತಾಯಿಸಿದಾಗ ಸದನ ಮುಂದೂಡಿದರು. ಅವರ ನಿಲುವನ್ನು ವಿರೋಧಿಸಿ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಿದೆವು. ನಿರಂತರ ಹೋರಾಟದ ಫಲವಾಗಿ ಸಿದ್ದರಾಮಯ್ಯನವರು ಕುರ್ಚಿ ಬಿಟ್ಟು ಇಳಿಯುವ ದಿನ ಹತ್ತಿರಕ್ಕೆ ಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯದ ತನಿಖೆಗೆ ಹೆದರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೧೪ ನಿವೇಶನಗಳನ್ನು ಮುಡಾಗೆ ವಾಪಸ್ ನೀಡುವುದಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ ಹೇಳಿದ್ದಾರೆ.

ಬಿಜೆಪಿ ಸದನದ ಒಳಗೆ ಮುಡಾ ಹಗರಣ ಕುರಿತು ತನಿಖೆಗೆ ಒತ್ತಾಯಿಸಿದಾಗ ಸದನ ಮುಂದೂಡಿದರು. ಅವರ ನಿಲುವನ್ನು ವಿರೋಧಿಸಿ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಿದೆವು. ನಿರಂತರ ಹೋರಾಟದ ಫಲವಾಗಿ ಸಿದ್ದರಾಮಯ್ಯನವರು ಕುರ್ಚಿ ಬಿಟ್ಟು ಇಳಿಯುವ ದಿನ ಹತ್ತಿರಕ್ಕೆ ಬಂದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಯಾಂಗ, ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಕುರಿತು ಪದೇ ಪದೇ ಮಾತನಾಡುವ ಸಿದ್ದರಾಮಯ್ಯನವರು ಅವುಗಳ ಕುರಿತು ಕಿಂಚಿತ್ತಾದರೂ ಗೌರವವಿದ್ದರೆ ತಕ್ಷಣವೇ ಕುರ್ಚಿ ಬಿಟ್ಟು ಕೆಳಗಿಳಿಯಬೇಕು. ಸಿದ್ದರಾಮಯ್ಯನವರು ರಾಜೀನಾಮೆ ನೀಡುವುದು ಮಾತ್ರವಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ.

ದಲಿತರ ಜಾಗ ಕಬಳಿಸಿ ೧೪ ನಿವೇಶನಗಳ ಜಾಗ ೬೦ ಕೋಟಿ ರು.ಗೂ ಹೆಚ್ಚು ಬೆಲೆ ಬಾಳುತ್ತದೆ ಎಂದು ಸಿಎಂ ಹೇಳಿದ್ದರು. ಈಗ ಅವರ ಪತ್ನಿಯ ಮೂಲಕವೇ ನಿವೇಶನಗಳನ್ನು ವಾಪಸ್ ನೀಡುತ್ತಿದ್ದಾರೆ. ಹಾಗಿದ್ದ ಮೇಲೆ ೬೦ ಕೋಟಿ ರು.ಗೂ ಹೆಚ್ಚು ಹಣವನ್ನು ಯಾರು ನಿಮಗೆ ಕೊಟ್ಟಿದ್ದಾರೆ ಎಂಬುದನ್ನು ಉತ್ತರಿಸುವಂತೆಯೂ ಆಗ್ರಹಿಸಿದ್ದಾರೆ.

ಮುಡಾ ಪ್ರಕರಣದಲ್ಲಿ ಇ.ಡಿ ಕೇಸು ದಾಖಲಾಗುತ್ತಿದ್ದಂತೆ ಕುರ್ಚಿ ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿರುವ ಸಿದ್ದರಾಮಯ್ಯನವರು ನಿವೇಶನಗಳನ್ನು ಹಿಂತಿರುಗಿಸುವ ಹೊಸ ನಾಟಕ ಶುರು ಮಾಡಿದ್ದಾರೆ. ಸಿದ್ದರಾಮಯ್ಯನವರು ಹಿಂದಿನ ಆಡಳಿತಾವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿ ಎಸಿಬಿ ರಚಿಸಿದ್ದರು. ಆ ಮೂಲಕ ತಾವು ನಡೆಸಿದ್ದ ಹಗರಣಗಳನ್ನೆಲ್ಲಾ ಮುಚ್ಚಿಹಾಕಿದರು. ಅದೇ ಕಾರಣಕ್ಕೆ ಪ್ರತಿ ಪ್ರಕರಣದಲ್ಲೂ ಎಸ್‌ಐಟಿ ರಚನೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸಿಬಿಐ ತನಿಖೆಗೆ ಇದ್ದ ಅವಕಾಶವನ್ನು ರದ್ದುಗೊಳಿಸಿ ರಾಜ್ಯಪಾಲರ ಪತ್ರಕ್ಕೆ ಮುಖ್ಯ ಕಾರ್ಯದರ್ಶಿಗಳು ನೇರವಾಗಿ ಉತ್ತರಿಸಬಾರದೆಂಬ ನಿರ್ಬಂಧಗಳನ್ನು ವಿಧಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.

ಮಹರ್ಷಿ ವಾಲ್ಮೀಕಿ ಹಗರಣದಲ್ಲಿ ೧೮೭ ಕೋಟಿ ರು. ಅವ್ಯವಹಾರ ನಡೆದಿದೆ, ಮೈಸೂರು ಮುಡಾ ಹಗರಣವೂ ಇವರ ಅವಧಿಯಲ್ಲೇ ನಡೆದಿದೆ. ನ್ಯಾಯಾಲಯ ಕೂಡ ತನಿಖೆಗೆ ಆದೇಶ ನೀಡಿದ್ದರೂ ನೈತಿಕತೆಯನ್ನು ಮರೆತು ಅಧಿಕಾರ ದಾಹಕ್ಕೊಳಗಾಗಿ ಸಿಎಂ ಸ್ಥಾನದಲ್ಲಿ ಮುಂದುವರೆಯುವ ಮೂಲಕ ಭಂಡತನ ಪ್ರದರ್ಶಿಸಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಅನುಸರಿಸುತ್ತಿರುವ ಸಿದ್ದರಾಮಯ್ಯನವರಿಗೆ ಮರ್ಯಾದೆಯೇ ಇಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ.