ಸಿಎನ್‌ಸಿ 29ನೇ ವರ್ಷದ ‘ಕಕ್ಕಡ-18’ ಆಚರಣೆ

| Published : Aug 03 2024, 12:36 AM IST

ಸಾರಾಂಶ

ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 29ನೇ ವರ್ಷದ ‘ಕಕ್ಕಡ-18’ ಆಚರಣೆ ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 29ನೇ ವರ್ಷದ ‘ಕಕ್ಕಡ-18’ ಆಚರಣೆ ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿಂದೂಸ್ಥಾನ್ ಸಂಗಂನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಆರ್ಥಿಕ ತಜ್ಞ ಡಾ. ಸುಬ್ರಮಣಿಯನ್ ಸ್ವಾಮಿ ಅವರ ಆಪ್ತ ಜಗದೀಶ್ ಶೆಟ್ಟಿ, ಕೊಡವರ ಉಳಿವಿಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ‘ಕೊಡವ ಲ್ಯಾಂಡ್’ ಪರವಾದ ಹೋರಾಟಕ್ಕೆ ಸರ್ವರೂ ಬೆಂಬಲ ನೀಡಬೇಕೆಂದು ಕರೆ ನೀಡಿದರು.

ಅತ್ಯಂತ ಸೂಕ್ಷ್ಮ ಆದಿಮ ಸಂಜಾತ ಬುಡಕಟ್ಟು ಸಮುದಾಯದ ಕೊಡವರು ಮತ್ತು ಕೊಡವ ನೆಲೆ ಉಳಿಯಬೇಕಾದರೆ ಕೊಡವ ಲ್ಯಾಂಡ್ ಘೋಷಣೆ ಅಗತ್ಯವಾಗಿದೆ. ವಿಭಿನ್ನತೆಯಲ್ಲಿ ಏಕತೆಯನ್ನು ಸಾಧಿಸಿರುವ ಭಾರತ ದೇಶದಲ್ಲಿ ಹಿಂದೂ ಧರ್ಮದಡಿ ವಿಶಿಷ್ಟ ಆಚಾರ, ವಿಚಾರ, ಸಂಸ್ಕೃತಿಯನ್ನು ಅನುಸರಿಸುವ ಅನೇಕ ಸಮುದಾಯಗಳಿವೆ. ಇವುಗಳಲ್ಲಿ ಆದಿಮ ಸಂಜಾತ ಕೊಡವ ಬುಡಕಟ್ಟು ಸಮುದಾಯ ಕೂಡ ಒಂದು. 1956 ರವರೆಗೆ ಸ್ವತಂತ್ರವಾಗಿ ಪ್ರತ್ಯೇಕವಾಗಿದ್ದ ಕೊಡವರ ಜನ್ಮಭೂಮಿ ಬಲವಂತ ಮತ್ತು ಕೊಡವರ ವಿರೋಧದ ನಡುವೆ ಕರ್ನಾಟಕದೊಂದಿಗೆ ವಿಲೀನವಾಯಿತು. ಅಂದಿನಿಂದ ಇಂದಿನವರೆಗೆ ಕೊಡವರು ದ್ವಿತೀಯ ದರ್ಜೆಯ ನಾಗರೀಕರಂತೆ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದು ಜಗದೀಶ್ ಶೆಟ್ಟಿ ಆರೋಪಿಸಿದರು.

ಆರಂಭದಲ್ಲಿ ಕೊಡವ ಗುರುಕಾರೋಣರನ್ನು ಸ್ಮರಿಸಿ ಪ್ರಾರ್ಥಿಸಲಾಯಿತು ಮತ್ತು ಕಕ್ಕಡ-18ರ ವಿಶೇಷ ಖಾದ್ಯಗಳನ್ನು ಅರ್ಪಿಸಲಾಯಿತು. ಮೆರವಣಿಗೆ ಮೂಲಕ ತೆರಳಿ ಮಂದ್ ಗೆ ಪ್ರದಕ್ಷಿಣೆ ಬರಲಾಯಿತು. ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ನಾಟಿ ಕಾರ್ಯ ಮಾಡಲಾಯಿತು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಕಕ್ಕಡ-18ರ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.

ಸಂಘಟನೆಯ ಅಧ್ಯಕ್ಷ ನಾಚಪ್ಪ, ಪ್ರಮುಖರಾದ ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಟ್ಟಮಾಡ ಲಲಿತಾ ಗಣಪತಿ, ನಂದೇಟಿರ ಕವಿತಾ, ಬೊಟ್ಟಂಗಡ ಸವಿತ, ಚೋಳಪಂಡ ಜ್ಯೋತಿ ನಾಣಯ್ಯ ಮತ್ತಿತರರು ಹಾಜರಿದ್ದರು.