ಲಕ್ಡಿಕೋಟೆ ಕೊಡವ ಯುದ್ಧ ಸ್ಮಾರಕದಲ್ಲಿ ಕೊಡವ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪತ್ತ್ ಕಟ್ಟ್ ನಾಡಿನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆದ 32ನೇ ವರ್ಷದ ‘ಪುತ್ತರಿ ನಮ್ಮೆ’ಯ ಹಿನ್ನೆಲೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ "ಲಕ್ಡಿಕೋಟೆ ಕೊಡವ ಯುದ್ಧ ಸ್ಮಾರಕ "ದಲ್ಲಿ ಕೊಡವ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.ವೀರ ಮರಣವನ್ನಪ್ಪಿದ ಕೊಡವರಿಗೆ ಗೌರವ ಸಲ್ಲಿಸಿ ಮಾತನಾಡಿದ ಎನ್.ಯು.ನಾಚಪ್ಪ ಅವರು 1790-92 ಮತ್ತು 1799ರ ನಡುವೆ ಕ್ರಮವಾಗಿ ಜನರಲ್ ಲಾರ್ಡ್ ಕಾರ್ನ್ವಾಲೀಸ್ ಹಾಗೂ ಜನರಲ್ ಲಾರ್ಡ್ ವೆಲ್ಲೆಸ್ಲಿ ನೇತೃತ್ವದಲ್ಲಿ ನಡೆದ 3ನೇ ಮತ್ತು 4ನೇ ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಆದಿಮ ಸಂಜಾತ ಏಕಜನಾಂಗೀಯ ಆ್ಯನಿಮಿಸ್ಟಿಕ್ ನಂಬುಗೆಯ ಕೊಡವರು ತೋರಿದ ಶೌರ್ಯವನ್ನು ಸ್ಮರಿಸಿದರು.ಡಿ.ವೀರರಾಜರ ಮಾರ್ಗದರ್ಶನದಲ್ಲಿ ಕೊಡವ ಸೈನ್ಯವು ಮೈಸೂರು ಸುಲ್ತಾನರ ವಿರುದ್ಧ ಬ್ರಿಟಿಷರೊಂದಿಗೆ ಸಮುದಾಯದ ಮಿಲಿಟರಿ ಮೈತ್ರಿಯನ್ನು ಮಾಡಿಕೊಂಡು ನಡೆಸಿದ ಯುದ್ಧದಲ್ಲಿ ಟಿಪ್ಪು ಸುಲ್ತಾನನಿಗೆ ಸೋಲಾಯಿತು. ಕೊಡವ ಯೋಧರ ವೀರಾವೇಶದಿಂದಲೇ ಮೈಸೂರು ಸುಲ್ತಾನರಿಗೆ 31 ಬಾರಿ ಸೋಲಾಗಿದೆ ಎಂದರು. 1785 ರಲ್ಲಿ ಮೈಸೂರು ಸುಲ್ತಾನರು ಹಾಗೂ ಫ್ರೆಂಚ್ ಪಡೆಗಳು ನಡೆಸಿದ ದೇವಟ್ ಪರಂಬು ದಾಳಿಯಿಂದಾದ ಕೊಡವ ನರಮೇಧದ ಪರಿಣಾಮ ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಕೊಡವ ಯೋಧರು ಭಾಗವಹಿಸಲು ಕಾರಣವಾಯಿತು.ವೀರ ಕೊಡವರ ಶೌರ್ಯವನ್ನು ಗೌರವಿಸುವುದಕ್ಕಾಗಿ ‘ಪುತ್ತರಿ ನಮ್ಮೆ’ಯ ಪ್ರಯುಕ್ತ ಹಿರಿಯರನ್ನು ಸ್ಮರಿಸಲಾಯಿತು ಎಂದರು.ಕಾರ್ಯಕ್ರಮದಲ್ಲಿ ಕಲಿಯಂಡ ಮೀನಾ ಪ್ರಕಾಶ್, ಕಲಿಯಂಡ ಪ್ರಕಾಶ್, ಜಮ್ಮಡ ಮೋಹನ್, ಕಾಂಡೇರ ಸುರೇಶ್, ಬೇಪಡಿಯಂಡ ದಿನು, ಅರೆಯಡ ಗಿರೀಶ್, ನಂದೇಟಿರ ರವಿ ಸುಬ್ಬಯ್ಯ, ಬೊಟ್ಟಂಗಡ ಗಿರೀಶ್, ಚಂಬಂಡ ಜನತ್, ಕಿರಿಯಮಾಡ ಶೆರಿನ್, ಪಾರ್ವಂಗಡ ನವೀನ್, ಕಿರಿಯಮಾಡ ಶಾನ್, ಮದ್ರಿರ ಕರುಂಬಯ್ಯ, ಅಪ್ಪೆಯಂಗಡ ಮಾಲೆ ಪೂಣಚ್ಚ ಹಾಗೂ ಚೊಕ್ಕಂಡ ಕಟ್ಟಿ ಪಾಲ್ಗೊಂಡಿದ್ದರು.