ತಲಕಾವೇರಿ, ಪಾಡಿ ಇಗ್ಗುತ್ತಪ್ಪ ದೇವನೆಲೆಯಲ್ಲಿ ಸಿಎನ್‌ಸಿ ವಿಶೇಷ ಪ್ರಾರ್ಥನೆ

| Published : May 28 2024, 01:09 AM IST

ತಲಕಾವೇರಿ, ಪಾಡಿ ಇಗ್ಗುತ್ತಪ್ಪ ದೇವನೆಲೆಯಲ್ಲಿ ಸಿಎನ್‌ಸಿ ವಿಶೇಷ ಪ್ರಾರ್ಥನೆ
Share this Article
  • FB
  • TW
  • Linkdin
  • Email

ಸಾರಾಂಶ

ತಲಕಾವೇರಿ ಮತ್ತು ಪಾಡಿ ಶ್ರೀ ಇಗ್ಗುತ್ತಪ್ಪ ದೇವನೆಲೆಯಲ್ಲಿ ಕೊಡವ ನ್ಯಾಷನಲ್‌ ಸಂಘಟನೆ ವಿಶೇಷ ಪ್ರಾರ್ಥನೆ ಸಲ್ಲಿಸಿತು. ಕೊಡವ ಜನಾಂಗದ ಅಭ್ಯುದಯಕ್ಕೆ ಆಶೀರ್ವದಿಸುವಂತೆ ಕೋರಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಎಸ್.ಟಿ ಟ್ಯಾಗ್, ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳನ್ನು ಮಾನ್ಯ ಮಾಡಬೇಕು ಸೇರಿದಂತೆ ಇಡೀ ಕೊಡವ ಜನಾಂಗದ ಯೋಗಕ್ಷೇಮಕ್ಕಾಗಿ ತಲಕಾವೇರಿ ಮತ್ತು ಪಾಡಿ ಶ್ರೀಇಗ್ಗುತ್ತಪ್ಪ ದೇವನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವಿಶೇಷ ಪ್ರಾರ್ಥನೆ ಸಲ್ಲಿಸಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಆದಿಮಸಂಜಾತ ಕೊಡವರ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ ಹಾಗೂ ಶ್ರೀಇಗ್ಗುತ್ತಪ್ಪ ದೇವನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಮುಖರು ರಾಜ್ಯಾಂಗದತ್ತವಾಗಿ ಕರ್ನಾಟಕದ ಅಧೀನದಲ್ಲಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಎಸ್.ಟಿ ಟ್ಯಾಗ್ ಮತ್ತು ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕನ್ನು ಮಾನ್ಯ ಮಾಡುವುದರೊಂದಿಗೆ ಕೊಡವ ಜನಾಂಗದ ಅಭ್ಯುದಯಕ್ಕೆ ಆಶೀರ್ವದಿಸುವಂತೆ ಕೋರಿದರು.

ಭೂಪರಿವರ್ತನೆ ವಿರುದ್ಧ ಜನಜಾಗೃತಿ : ಸಿದ್ದಾಪುರದ 2400 ಎಕರೆ ಬಿಬಿಟಿಸಿ ಕಾಫಿ ತೋಟದ ಭೂಪರಿವರ್ತನೆ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಭೂಪರಿವರ್ತನೆಗಳ ವಿರುದ್ಧ ಜೂ.3 ರಿಂದ ಜಿಲ್ಲಾವ್ಯಾಪಿ ಸಿಎನ್‌ಸಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು.

ಮಡಿಕೇರಿ, ಸುಂಟಿಕೊಪ್ಪ, ಮಾದಾಪುರ, ಚೆಟ್ಟಳ್ಳಿ, ಚೇರಂಬಾಣೆ, ಮೂರ್ನಾಡು, ಕಕ್ಕಬೆ, ನಾಪೋಕ್ಲು, ವಿರಾಜಪೇಟೆ, ಸಿದ್ದಾಪುರ, ಗೋಣಿಕೊಪ್ಪ, ತಿತಿಮತಿ, ಬಾಳೆಲೆ, ಪೊನ್ನಂಪೇಟೆ, ಹುದಿಕೇರಿ, ಕುಟ್ಟ, ಶ್ರೀಮಂಗಲ, ಟಿ ಶೆಟ್ಟಿಗೇರಿ, ಬಿರುನಾಣಿಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ. ಜೂ. 3ರಂದು ಬಿರುನಾಣಿ, ಜೂನ್ 10 ರಂದು ಬಾಳೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ಕಾರ್ಯಕ್ರಮದ ಸ್ಥಳ ಮತ್ತು ದಿನಾಂಕವನ್ನು ಪ್ರಕಟಿಸಲಾಗುವುದು ಎಂದರು.

ಈ ಸಂದರ್ಭ ಪಟ್ಟಮಾಡ ಕುಶ, ಚಂಬಂಡ ಜನತ್, ಮಂದಪಂಡ ಮನೋಜ್, ಕಾಂಡೇರ ಸುರೇಶ್, ಬೇಪಡಿಯಂಡ ಬಿದ್ದಪ್ಪ, ಬಾಚಮಂಡ ರಾಜ ಪೂವಣ್ಣ, ಬೇಪಡಿಯಂಡ ದಿನು, ಪಾರ್ವಂಗಡ ನವೀನ್, ನಂದೇಟಿರ ರವಿ, ನಂದೇಟಿರ ಕವಿತಾ ಸುಬ್ಬಯ್ಯ, ಪುಟ್ಟಿಚಂಡ ದೇವಯ್ಯ, ಅಪ್ಪಾರಂಡ ವಿಜು, ಅಪ್ಪಾರಂಡ ಪ್ರಸಾದ್, ಅಪ್ಪಾರಂಡ ಪ್ರಕಾಶ್, ನಾಟೋಳಂಡ ಶಂಭು ಉಪಸ್ಥಿತರಿದ್ದರು.